ಬೆಂಗಳೂರಲ್ಲಿ ವರುಣ ರೌದ್ರನರ್ತನ – ತಗ್ಗು ಪ್ರದೇಶ ಜಲಾವೃತ, ಕೆಟ್ಟು ನಿಂತ ವಾಹನಗಳು

Public TV
2 Min Read
Bengaluru Rain Effect

ಬೆಂಗಳೂರು: ಮುಂಗಾರಲ್ಲಿ ಅಬ್ಬರಿಸಿ ಬೊಬ್ಬಿರಿದಿದ್ದ ವರುಣದೇವ ಹಿಂಗಾರಲ್ಲೂ ಮುಂಗಾರಿಗೆ ಸೆಡ್ಡು ಹೊಡೆಯುತ್ತಿದ್ದಾನೆ. ಸೋಮವಾರ ರಾತ್ರಿ ಬೆಂಗಳೂರಲ್ಲಿ (Bengaluru) ಗುಡುಗು ಮಿಂಚು ಸಹಿತ ಸುರಿದ ಭಾರೀ ಮಳೆಗೆ (Heavy Rain) ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.

ಯಲಹಂಕದಲ್ಲಿ ರಣಮಳೆಗೆ ತಗ್ಗು ಪ್ರದೇಶಗಳು ಕೆರೆಯಂತಾಗಿದೆ. ಯಲಹಂಕ ಓಲ್ಡ್ ಟೌನ್ ರಸ್ತೆ ಜಲಾವೃತಗೊಂಡಿದ್ದು, ಬಿಎಂಟಿಸಿ ಬಸ್ ಹಾಗೂ ವಾಹನಗಳು ಮಳೆ ನೀರಲ್ಲಿ ಕೆಟ್ಟು ನಿಂತಿದೆ. ಕ್ರೇನ್ ಸಹಾಯದಿಂದ ಸಿಬ್ಬಂದಿ ಬಸ್ ಅನ್ನು ಹೊರತೆಗೆದಿದ್ದಾರೆ. ಅಲ್ಲದೇ ಯಲಹಂಕ ಓಲ್ಡ್ ಟೌನ್ ರಸ್ತೆಯ ಅಂಗಡಿ ಮುಂಗಟ್ಟುಗಳು ಕೂಡ ಜಲಾವೃತಗೊಂಡಿದೆ. ಇನ್ನು ಬೆಂಗಳೂರಿನಲ್ಲಿ ಸುರಿದ ಧಾರಕಾರ ಮಳೆಗೆ ಯಲಹಂಕದ ಚಿಕ್ಕಬೊಮ್ಮಸಂದ್ರದಲ್ಲಿ ಅವಾಂತರ ಸೃಷ್ಟಿಯಾಗಿದೆ. ಮಳೆಯ ರಭಸಕ್ಕೆ ಹತ್ತಾರು ಮನೆಗಳಿಗೆ ನೀರು ನುಗ್ಗಿದ್ದು, ಮಳೆ ನೀರನ್ನು ಹೊರ ಹಾಕಲು ನಿವಾಸಿಗಳು ಪರದಾಡಿದ್ದಾರೆ. ಇದನ್ನೂ ಓದಿ: ಚಿಕ್ಕಬಳ್ಳಾಪುರ| ಭಾರೀ ಮಳೆಗೆ ಕಾಲುವೆಯಲ್ಲಿ ಕೊಚ್ಚಿಹೋಯಿತು ಎರಡು ಕಾರು

Bengaluru Rain 1 1

ಭಾರೀ ಮಳೆ ಸುರಿದ ಪರಿಣಾಮ ಚಿಕ್ಕಬೊಮ್ಮಸಂದ್ರದ ಅಂಬೇಡ್ಕರ್ ನಗರ ಜಲಾವೃತಗೊಂಡಿದೆ. 60ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ಜಲಾವೃತಗೊಂಡಿದ್ದು, ಪುಟ್ಟಪುಟ್ಟ ಮಕ್ಕಳನ್ನು ಎತ್ತಿಕೊಂಡು ನಿವಾಸಿಗಳು ಪರದಾಡುವಂತಾಗಿದೆ. ಮನೆಯಲ್ಲಿದ್ದ ಆಹಾರ ಸಾಮಾಗ್ರಿಗಳು ಮಳೆ ನೀರಿಗೆ ಕೊಚ್ಚಿಹೋಗಿದೆ. ಅಲ್ಲದೇ ವರುಣಾರ್ಭಟಕ್ಕೆ ಯಲಹಂಕದ ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್ ಮತ್ತೆ ಮುಳುಗಡೆಯಾಗಿದೆ. ಅಪಾರ್ಟ್‌ಮೆಂಟ್‌ನ ಬೇಸ್‌ಮೆಂಟ್‌ಗೆ ನೀರು ನುಗ್ಗಿದ್ದು, ಮಳೆ ನೀರಿಗೆ ಬೈಕ್‌ಗಳು ಅರ್ಧ ಮುಳುಗಿವೆ. ಇದನ್ನೂ ಓದಿ: ಪ್ರದೀಪ್ ಈಶ್ವರ್‌ಗೆ ಸಂತೆಯಲ್ಲಿ ಒಳ್ಳೆ ಬಳೆ ಕೊಡಿಸ್ತೀನಿ – ಸಂಸದ ಸುಧಾಕರ್

ಯಲಹಂಕದ ಜುಡಿಶಿಯಲ್ ಲೇಔಟ್ ಬಳಿ ಮಳೆಗೆ ಕಾಂಪೌಂಡ್ ಕುಸಿದಿದೆ. ಜಿಕೆವಿಕೆಯ ಹಳೆಯ 100 ಅಡಿ ಕಾಂಪೌಂಡ್ ಗೋಡೆ ಕುಸಿದ ಪರಿಣಾಮ ರಸ್ತೆ ಮೇಲೆ ಗೋಡೆ ಬಿದ್ದಿದೆ. ಸದ್ಯ ರಸ್ತೆ ಮೇಲೆ ಬಿದ್ದಿರುವ ಗೋಡೆಯನ್ನು ಜೆಸಿಬಿ ಮೂಲಕ ತೆರವು ಮಾಡಲಾಗಿದೆ. ಸೋಮವಾರ ರಾತ್ರಿ ಸುರಿದ ಮಳೆಗೆ ಥಣಿಸಂದ್ರ ಫಾತಿಮಾ ಲೇಔಟ್ ಜಲಾವೃತವಾಗಿದೆ. ಮನೆಗಳಿಗೆ ನೀರು ನುಗ್ಗಿದ್ದು, ನೀರನ್ನು ಎತ್ತಿ ಹೊರಹಾಕಲು ನಿವಾಸಿಗಳು ಹರಸಹಾಸ ಪಟ್ಟರು. ಇದೇ ಮಳೆಯ ನೀರಲ್ಲಿ ಒಂದು ಮೀನನ್ನು ಸ್ಥಳೀಯರು ಹಿಡಿದಿದ್ದಾರೆ. ಇದನ್ನೂ ಓದಿ: ರಾಜಾಸೀಟ್ ಅಭಿವೃದ್ಧಿ ಹೆಸರಿನಲ್ಲಿ ಕೋಟಿ ಕೋಟಿ ಅವ್ಯವಹಾರ‌‌‌ ಆರೋಪ – ಖುದ್ದು ಫೀಲ್ಡಿಗಿಳಿದ ಲೋಕಾಯುಕ್ತ

Bengaluru Rain 6

ಇನ್ನು ನಾಗಾವರ ಬಳಿಯ ಮ್ಯಾನ್ಪೋ ಕನ್ವೆನ್ಷನ್ ಸೆಂಟರ್ ಸಂಪೂರ್ಣ ಜಲಾವೃತವಾಗಿದೆ. ಅಂತಾರಾಷ್ಟ್ರೀಯ ಇವೆಂಟ್‌ಗಳು ನಡೆಯುವ ಈ ಹಾಲ್‌ನಲ್ಲಿ ಮೊಣಕಾಲುದ್ದ ನೀರು ತುಂಬಿಕೊಂಡಿದೆ. ಲಕ್ಷಾಂತರ ರೂ. ಮೌಲ್ಯದ ಪಿಠೋಪಕರಣಗಳು ಹಾನಿಯಾಗಿವೆ. ಮ್ಯಾನ್ಪೋ ಹಾಲ್ ಹಿಂಬದಿಯ 33 ಅಡಿಯ ರಾಜಕಾಲುವೆಗೆ ಕಾರ್ಲೆ ಗ್ರೂಪ್ ಕಂಪನಿ ತಡೆಗೋಡೆ ನಿರ್ಮಿಸಿದೆ. ಈ ಹಿನ್ನೆಲೆ 33 ಅಡಿಯ ರಾಜಕಾಲುವೆಯ ನೀರು 6 ಅಡಿ ನೀರುಗಾಲುವೆಯಲ್ಲಿ ಹರಿದು, ಮ್ಯಾನ್ಪೋ, ಮಾನ್ಯತಾ ಟೆಕ್ ಪಾರ್ಕ್‌ ಪ್ರದೇಶಗಳು ಜಲಾವೃತವಾಗಿವೆ. ಇದನ್ನೂ ಓದಿ: ಚಿಕ್ಕಮಗಳೂರಲ್ಲಿ ಭಾರೀ ಮಳೆ – ಪ್ರವಾಸಿ ತಾಣಗಳಿಗೆ ಬರದಂತೆ ಜನರಿಗೆ ಸೂಚನೆ

ಬೆಂಗಳೂರಿನಲ್ಲಿ ರಾತ್ರಿ ಸುರಿದ ಮಳೆಗೆ ಜಾಲಹಳ್ಳಿ ಕ್ರಾಸ್ ಮಾರ್ಗದಲ್ಲಿ ಮರ ಧರೆಗೆ ಉರುಳಿದೆ. ಅಮೃತಹಳ್ಳಿಯಲ್ಲಿ ರಸ್ತೆಗಳು ಕೆರೆಯಂತಾಗಿದೆ. ಚಿಕ್ಕಬಾಣವರದ ಮಾರುತಿನಗರ ಮತ್ತೆ ಜಲಾವೃತಗೊಂಡಿದೆ. ಇದನ್ನೂ ಓದಿ: 16 ಮಕ್ಕಳನ್ನು ಹೊಂದುವ ಬಗ್ಗೆ ಯೋಚಿಸಿ – ತಮಿಳುನಾಡು ಸಿಎಂ ಸ್ಟಾಲಿನ್‌ ಕರೆ ಕೊಟ್ಟಿದ್ದೇಕೆ?

Share This Article