ಬೆಂಗಳೂರು: ನಗರದಲ್ಲಿ ಮತ್ತೆ ಗುರುವಾರದಿಂದ ವರುಣ ಆರ್ಭಟಿಸಿದ್ದಾನೆ. ಗಣೇಶ ಹಬ್ಬದ ಖುಷಿಯಲ್ಲಿ ಶಾಪಿಂಗ್ ಮಾಡೋಕೆ ಬಂದವರಿಗೆ ವರುಣ ನಿರಾಸೆ ಮೂಡಿಸಿದ್ದಾನೆ.
ಎಡಬಿಡದೇ ಸುರಿದ ಮಳೆಯಿಂದಾಗಿ ಬಾಳೆಕಂದುಗಳನ್ನ ವ್ಯಾಪಾರಸ್ಥರು ರಸ್ತೆಯಲ್ಲೇ ಬಿಟ್ಟು ಹೋಗುವಂತಾಯ್ತು. ಮಳೆಯ ಆರ್ಭಟದಿಂದ ವ್ಯಾಪಾರ ಡಲ್ಲಾಗಿತ್ತು. ಮೆಜೆಸ್ಟಿಕ್ ಸುತ್ತಮುತ್ತ, ಗಾಂಧಿಬಜಾರ್, ಶಾಂತಿನಗರ, ಗಿರಿನಗರ, ಆಶ್ರಮ, ಕತ್ರಿಗುಪ್ಪೆ, ಚಿಕ್ಕಪೇಟೆ, ಜಯನಗರ, ಮಾರುತಿನಗರ ಮುಂತಾದ ಪ್ರಮುಖ ಶಾಪಿಂಗ್ ಪಾಯಿಂಟ್ ಗಳಲ್ಲಿ ಭಾರೀ ಮಳೆಯಾಗಿತ್ತು.
Advertisement
ಮಳೆಯ ಕಣ್ಣಮುಚ್ಚಾಲೆಯಾಟಕ್ಕೆ ಹಬ್ಬಕ್ಕೆಂದು ದೂರದೂರುಗಳಿಗೆ ತೆರಳಲು ಕಾಯುತ್ತಿದ್ದ ಪ್ರಯಾಣಿಕರು ಮೆಜೆಸ್ಟಿಕ್ ಬಸ್ ನಿಲ್ದಾಣದಲ್ಲಿ ಪರದಾಡುವಂತಾಯ್ತು. ಮಳೆಯ ಮಧ್ಯೆ ಕಿಲೋಮೀಟರ್‍ಗಟ್ಟಲೆ ಟ್ರಾಫಿಕ್ ನಿಯಂತ್ರಿಸಲು ಸಂಚಾರಿ ಪೊಲೀಸ್, ಕೆಎಸ್‍ಆರ್‍ಟಿಸಿ ಸಿಬ್ಬಂದಿ, ಹಿರಿಯ ಅಧಿಕಾರಿಗಳು ರಾತ್ರಿ ಸುಮಾರು 3 ಗಂಟೆವರೆಗೂ ರೋಡ್‍ನಲ್ಲೆ ನಿಲ್ಲಬೇಕಾಯ್ತು. ಯಶವಂತಪುರದ ಗೋವರ್ಧನ ಚಿತ್ರಮಂದಿರದ ಮುಂಭಾಗ ಸಾವಿರಾರು ಸಂಖ್ಯೆಯಲ್ಲಿ ಪ್ರಯಾಣಿಕರು ಬಸ್ಸಿಗಾಗಿ ಗಂಟೆಗಟ್ಟಲೇ ಕಾಯುವಂತಾಯ್ತು. ಕೆಎಸ್‍ಆರ್‍ಟಿಸಿ ವಿರುದ್ಧ ಪ್ರಯಾಣಿಕರು ವಾಗ್ದಾಳಿ ನಡೆಸಿದ್ರು.
Advertisement
Advertisement
ಮಳೆಯ ಅಬ್ಬರಕ್ಕೆ ನಾಗಸಂದ್ರ ಕಾಲೋನಿಯಲ್ಲಿ 2 ಮನೆ ಕುಸಿದಿವೆ. ಅದೃಷ್ಟವಶಾತ್ ಯಾವುದೇ ಸಾವು ನೋವು ಸಂಭವಿಸಿಲ್ಲ. ಸ್ಥಳೀಯರೇ ಟಾರ್ಪಲ್ ಕಟ್ಟಿಕೊಟ್ಟು ಮಳೆ ಸಂತ್ರಸ್ತರಿಗೆ ನೆರವಾಗಿದ್ದಾರೆ.
Advertisement
ಇನ್ನು ಗಣಪತಿ ಹಬ್ಬ, ವೀಕೆಂಡ್ ಮತ್ತು ಭಾರೀ ಮಳೆ ಹಿನ್ನೆಲೆಯಲ್ಲಿ ಊರಿಗೆ ಹೊರಟ ಸಾವಿರ ಸಾವಿರ ಬೆಂಗಳೂರಿಗರು ರಾತ್ರಿಯಿಡೀ ನಡುರಸ್ತೆಯಲ್ಲೇ ರಾತ್ರಿ ಕಳೆದಿದ್ದಾರೆ. ಕಾರಣ ಎಲ್ಲೆಲ್ಲೂ ಟ್ರಾಫಿಕ್ ಜಾಮ್. ಅದ್ರಲ್ಲೂ ಬೆಂಗಳೂರಿನ ತುಮಕೂರು ರಸ್ತೆಯಲ್ಲಿ ನಸುಕಿನ ಜಾವ 2 ಗಂಟೆ ಕಳೆದ್ರೂ ವಾಹನ ದಟ್ಟಣೆಯಿತ್ತು. ಮೆಜೆಸ್ಟಿಕ್‍ನಿಂದ ಹಿಡಿದು ನೆಲಮಂಗಲದವರೆಗೂ ರಸ್ತೆಯುದ್ದಕ್ಕೂ ವಾಹನಗಳು ನಿಂತಿದ್ದು ಕಂಡು ಬಂತು. ಇನ್ನು ತಮ್ಮೂರಿನ ಬಸ್ ಹಿಡಿಯಲು ಚಿಕ್ಕಮಕ್ಕಳನ್ನು ಕಟ್ಟಿಕೊಂಡ ಜನ ಚಳಿಯಲ್ಲೇ ರಸ್ತೆ ಬದಿ ನಿಂತಿದ್ದು ಕಂಡುಬಂದಿತ್ತು.