ಬೆಂಗಳೂರು: ನಗರದ ಜನರು ಮಳೆಗೆ ತತ್ತರಿಸಿ, ಕೆಲವರು ಪ್ರಾಣ ಕಳೆದುಕೊಂಡಿರುವುದಕ್ಕೆ ರಾಜ್ಯ ಬಿಜೆಪಿ ಸರ್ಕಾರದ ಭ್ರಷ್ಟಾಚಾರ ಹಾಗೂ ಬೇಜವಾಬ್ದಾರಿಯೇ ಕಾರಣ. ಭ್ರಷ್ಟ ಬಿಜೆಪಿ ನಾಯಕರ ಆಸ್ತಿ ಹರಾಜು ಹಾಕಿ ಮಳೆ ಸಂತ್ರಸ್ತರಿಗೆ ಪರಿಹಾರ ನೀಡಿ ಎಂದು ಆಮ್ ಆದ್ಮಿ ಪಾರ್ಟಿಯ ಬೆಂಗಳೂರು ಅಧ್ಯಕ್ಷ ಮೋಹನ್ ದಾಸರಿ ಟೀಕಿಸಿದರು.
Advertisement
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ರಾಜಕಾಲುವೆ ಹೆಸರಿನಲ್ಲಿ ಬಿಜೆಪಿ ಸರ್ಕಾರವು ಸಾವಿರಾರು ಕೋಟಿ ರೂಪಾಯಿಯನ್ನು ಲೂಟಿ ಮಾಡಿದ್ದ ಪರಿಣಾಮ, ಜನರು ರಸ್ತೆಗಳಲ್ಲಿ ಓಡಾಡಲು ದೋಣಿಯನ್ನು ಬಳಸಬೇಕಾದ ಪರಿಸ್ಥಿತಿ ಉಂಟಾಗುತ್ತಿದೆ. ತಗ್ಗು ಪ್ರದೇಶದಲ್ಲಿರುವ ಜನರು ಮಳೆಗಾಲ ಬಂತೆಂದರೆ ಜೀವ ಕೈಯಲ್ಲಿಟ್ಟುಕೊಂಡು ಜೀವನ ನಡೆಸುವಂತಾಗಿದೆ. ತಾವಿದ್ದ ಸ್ಥಳದಲ್ಲಿ ನೀರು ತುಂಬಿಕೊಂಡಿದ್ದರಿಂದ ಮಂಗಳವಾರ ರಾತ್ರಿ ಇಬ್ಬರು ಕಾರ್ಮಿಕರು ಪ್ರಾಣ ಕಳೆದುಕೊಂಡಿದ್ದಾರೆ. ಇಷ್ಟೆಲ್ಲ ಅನಾಹುತಕ್ಕೆ ಕಾರಣವಾಗಿರುವ ಭ್ರಷ್ಟ ಬಿಜೆಪಿ ನಾಯಕರ ಆಸ್ತಿಗಳನ್ನು ಸರ್ಕಾರ ಮುಟ್ಟುಗೋಲು ಹಾಕಿಕೊಂಡು, ಅದನ್ನು ಹರಾಜು ಹಾಕಿ, ಬಂದ ಹಣದಲ್ಲಿ ಸಂತ್ರಸ್ತರಿಗೆ ಪರಿಹಾರ ನೀಡಬೇಕು ಎಂದು ಆಗ್ರಹಿಸಿದರು. ಇದನ್ನೂ ಓದಿ: ಗಮನಿಸಿ, ಮುಂದಿನ 5 ದಿನಗಳ ಕಾಲ ಬೆಂಗ್ಳೂರಲ್ಲಿ ಭಾರೀ ಮಳೆ
Advertisement
Advertisement
ಸಿಲಿಕಾನ್ ಸಿಟಿಯಲ್ಲಿ ಸಣ್ಣ ಮಳೆಯಾದರೂ ಕಟ್ಟಡಗಳಿಗೆ ನೀರು ನುಗ್ಗಿ ಜಲಪ್ರಳಯವಾಗುವುದು ಸಾಮಾನ್ಯವಾಗಿದೆ. ಇದಕ್ಕೆ ಮುಖ್ಯ ಕಾರಣವೆಂದರೆ ರಾಜಕಾಲುವೆ ಒತ್ತುವರಿ. ರಾಜಕಾಲುವೆ ಒತ್ತುವರಿ ತೆರವು ಎಂಬ ಮಾಯಾಜಾಲವು 2016ರಿಂದಲೂ ನಿಗೂಢವಾಗಿಯೇ ಉಳಿದಿದೆ. 2,626 ಕಟ್ಟಡಗಳ ಪೈಕಿ 1,480 ಕಟ್ಟಡಗಳು ತೆರವಾಗಿದ್ದು, 714 ಕಟ್ಟಡಗಳ ತೆರವಿಗೆ ಇನ್ನೂ ಮುಹೂರ್ತ ಕೂಡಿ ಬಂದಿಲ್ಲ. ರಾಜಕಾಲುವೆ ಮೇಲೆ ವಸತಿ ಮತ್ತು ವಾಣಿಜ್ಯ ಕಟ್ಟಡಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದು, ಅವುಗಳನ್ನು ತೆರವುಗೊಳಿಸಲು ಪಾಲಿಕೆ ಅಧಿಕಾರಿಗಳು ಮೀನಮೇಷ ಎಣಿಸುತ್ತಿದ್ದಾರೆ ಎಂದು ಆರೋಪಿಸಿದರು. ಇದನ್ನೂ ಓದಿ: ಬೇಸಿಗೆಯ ಮಳೆಗೆ ಮುಳುಗಿದ ಬೆಂಗಳೂರು – ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
Advertisement
ರಾಜಕಾಲುವೆ ಒತ್ತುವರಿ ತೆರವಿಗೆ ಬಿಬಿಎಂಪಿ ತೀರ್ಮಾನ ಮಾಡಿದ್ದು, 714 ಕಟ್ಟಡಗಳ ಪಟ್ಟಿಯನ್ನು ಸಿದ್ಧಪಡಿಸಿತ್ತು. ಪೂರ್ವ ವಲಯದಲ್ಲಿ 110 ಕಟ್ಟಡ, ಪಶ್ಚಿಮ ವಲಯದಲ್ಲಿ 59 ಕಟ್ಟಡ, ದಕ್ಷಿಣ ವಲಯದಲ್ಲಿ 20 ಕಟ್ಟಡ, ಕೋರಮಂಗಲ ವ್ಯಾಲಿ ವಲಯದಲ್ಲಿ 3 ಕಟ್ಟಡ, ಯಲಹಂಕ ವಲಯದಲ್ಲಿ 103 ಕಟ್ಟಡ, ಮಹದೇವಪುರ ವಲಯದಲ್ಲಿ 184 ಕಟ್ಟಡ, ಬೊಮ್ಮನಹಳ್ಳಿ ವಲಯದಲ್ಲಿ 92 ಕಟ್ಟಡ, ಆರ್.ಆರ್. ನಗರ ವಲಯದಲ್ಲಿ 9 ಕಟ್ಟಡ ಹಾಗೂ ದಾಸರಹಳ್ಳಿ ವಲಯದಲ್ಲಿ 134 ಕಟ್ಟಡಗಳನ್ನು ತೆರವು ಮಾಡಲು ಪಟ್ಟಿ ಮಾಡಲಾಗಿದೆ. ಆದರೆ ಕ್ರಮ ಮಾತ್ರ ಕೈಗೊಂಡಿಲ್ಲ ಎಂದು ಟೀಕಿಸಿದರು.
ನಗರದ ಬಹುತೇಕ ಆಸ್ಪತ್ರೆಗಳು, ಕಮರ್ಷಿಯಲ್ ಬಿಲ್ಡಿಂಗ್‍ಗಳು, ಉದ್ಯಮಿಗಳು, ರಾಜಕಾರಿಣಿಗಳು ಸೇರಿದಂತೆ ಹಲವು ಪ್ರಭಾವಿಗಳು ರಾಜಕಾಲುವೆ ಒತ್ತುವರಿ ಮಾಡಿಕೊಂಡಿದ್ದಾರೆ. ಇದರ ತೆರವು ಕಾರ್ಯಾಚಾರಣೆ ಮಾತ್ರ ನಡೆದಿಲ್ಲ. ರಾಜಾಜಿನಗರ, ಕೆ.ಆರ್.ಪುರ, ಕೆಂಗೇರಿ, ಆರ್.ಆರ್.ನಗರ, ಹೆಬ್ಬಾಳ, ಯಲಹಂಕ, ಲಗ್ಗೆರೆ ಭಾಗಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ರಾಜಕಾಲುವೆಗಳ ಒತ್ತುವರಿ ಆಗಿದೆ. ಪಾಲಿಕೆ ಅಧಿಕಾರಿಗಳನ್ನು ಕೇಳಿದರೆ, ಸಮೀಕ್ಷೆ ಮಾಡುತ್ತಿದ್ದೇವೆ, ಆದಷ್ಟು ಬೇಗ ವರದಿ ಸಿದ್ಧವಾಗುತ್ತದೆ ಎನ್ನುತ್ತಾರೆ. ಆದರೆ ಬಿಬಿಎಂಪಿ ಮುಖ್ಯ ಕಚೇರಿಯ ಕೂಗಳತೆ ದೂರದಲ್ಲಿರುವ ರಾಜಕಾಲುವೆ ಒತ್ತುವರಿ ತೆರವುಗೊಳಿಸಲು ಕೂಡ ಅಧಿಕಾರಿಗಳು ಮುಂದಾಗುತ್ತಿಲ್ಲ ಎಂದು ವಾಗ್ದಾಳಿ ನಡೆಸಿದರು.
ರಾಜಕಾಲುವೆ ಮೀಸಲು ಪ್ರದೇಶವನ್ನು ಒತ್ತುವರಿ ಮಾಡಿಕೊಂಡು ನಿರ್ಮಾಣವಾಗಿರುವ ಅಪಾರ್ಟ್‍ಮೆಂಟ್‍ಗಳನ್ನು ತೆರವು ಮಾಡುವಂತೆ ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯೂ ಆದೇಶ ನೀಡಿದೆ. ಆದರೆ ತೆರವು ಕಾರ್ಯಾಚರಣೆ ಮಾತ್ರ ಮುಂದುವರೆದಿಲ್ಲ. ಈ ಸಲವೂ ಬಿಬಿಎಂಪಿಯು ಜೋರು ಮಳೆ ಬಿದ್ದಾಗ ಪ್ರವಾಹ ಪರಿಸ್ಥಿತಿ ಉಂಟಾಗುವ 209 ಪ್ರದೇಶಗಳನ್ನು ಗುರುತಿಸಿದೆ. ಪ್ರತಿ ವರ್ಷವೂ ಮಳೆಯಿಂದ ಕೋಟ್ಯಂತರ ರೂ. ಆಸ್ತಿಪಾಸ್ತಿ ನಷ್ಟವಾಗುತ್ತಿದೆ. ಕೆಲವರು ಪ್ರಾಣವನ್ನೂ ಕಳೆದುಕೊಳ್ಳುತ್ತಿದ್ದಾರೆ. ಇಷ್ಟಾದರೂ ಪಾಲಿಕೆಯು ಯುದ್ಧ ಕಾಲದಲ್ಲಿ ಶಸ್ತ್ರಾಸ್ತ್ರ ಅಭ್ಯಾಸ ಎಂಬಂತೆ ಮಳೆಗಾಲ ಶುರುವಾದ ಬಳಿಕ ಕೆಲವೊಂದು ಕಾಮಗಾರಿಗಳನ್ನು ಕೈಗೊಂಡು ಜನರ ಕಣ್ಣೊರೆಸುವ ತಂತ್ರವನ್ನು ಅನುಸರಿಸುತ್ತಲೇ ಬರುತ್ತಿದೆ ಎಂದು ಕಿಡಿಕಾರಿದರು.