ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತದಿಂದ ಬೆಂಗಳೂರು ಸೇರಿ ರಾಜ್ಯದ ಹಲವೆಡೆ ಮಳೆ ಆಗ್ತಿದ್ದು, ಬೆಳಕಿನ ಹಬ್ಬಕ್ಕೆ ತಣ್ಣೀರು ಎರಚಿದೆ.
ಕಳೆದ ರಾತ್ರಿ ಮಳೆಗೆ ಬೆಂಗಳೂರಲ್ಲಿ ಅವಾಂತರ ಸೃಷ್ಟಿಯಾಗಿದೆ. ನಗರದ 52 ವಾರ್ಡ್‍ಗಳಲ್ಲಿ 140 ಮಿಲಿಮೀಟರ್‍ವರೆಗೂ ಮಳೆ ಆಗಿದೆ. ಜೆಸಿ ರಸ್ತೆ, ಜಾಮರಾಜಪೇಟೆ, ಕೆ.ಪಿ.ಅಗ್ರಹಾರದಲ್ಲಿ ಮನೆಗಳು, ಕಟ್ಟಡಗಳಿಗೆ ಮಳೆ ನೀರು ನುಗ್ಗಿ ಜನ ಪರದಾಡಿದ್ರು. ಚಿಕ್ಕಪೇಟೆ ಮುಖ್ಯ ರಸ್ತೆಯಂತೂ ಕೆಸರುಗದ್ದೆಯಂತಾಗಿತ್ತು.
ಬೆಂಗಳೂರು ಮಳೆ ಹಾನಿ ಬಗ್ಗೆ ಸಿಎಂ ಬೊಮ್ಮಾಯಿ ಅಧಿಕಾರಿಗಳ ಜೊತೆ ಸಭೆ ನಡೆಸಿ, ಮಾಹಿತಿ ಕಲೆ ಹಾಕಿದ್ರು. ತಡೆಗೋಡೆ ಬಗ್ಗೆ ಸ್ಪಷ್ಟ ಮಾಹಿತಿ ಕೊಡದ ಅಧಿಕಾರಿಗಳಿಗೆ ತರಾಟೆ ತೆಗೆದುಕೊಂಡ್ರು. ಕೂಡಲೇ ತಡೆಗೋಡೆ ಕಾಮಗಾರಿ ಪೂರ್ಣಗೊಳಿಸುವಂತೆ ಸೂಚಿಸಿದ್ರು. ಒಂದೆಡೆ ಸಿಎಂ ಸಭೆ ನಡೆಸುತ್ತಿದ್ದರೆ, ಮತ್ತೊಂದೆಡೆ ಸಚಿವ ಅಶೋಕ್ ಕ್ರಿಕೆಟ್ ಆಡೋದ್ರಲ್ಲಿ ಬ್ಯುಸಿ ಆಗಿದ್ರು. ಸಚಿವ ಸೋಮಣ್ಣ ಕೂಡ ಗೈರಾಗಿದ್ರು. ಇದನ್ನೂ ಓದಿ: ಪಟಾಕಿ ಸ್ಫೋಟಗೊಂಡು ಅಪ್ಪ, ಮಗನ ದೇಹ ಛಿದ್ರ ಛಿದ್ರ
ಮೈಸೂರಲ್ಲಿ ಭಾರೀ ಮಳೆಗೆ ಚಾಮುಂಡಿ ಬೆಟ್ಟದ ನಂದಿ ರಸ್ತೆಯ ಮಾರ್ಗ ಹೆಚ್ಚು ಕಡಿಮೆ ಸಂಪೂರ್ಣ ಕುಸಿದಿದೆ. ಮಂಡ್ಯದ ಮಲ್ಲಘಟ್ಟ ಜನ, ಕೆಸರುಗದ್ದೆಯಂತಹ ರಸ್ತೆಲಿ ನಾಟಿ ಮಾಡಿ ಆಕ್ರೋಶ ಹೊರಹಾಕಿದ್ರು. ಕೋಲಾರ, ಚಿಕ್ಕಬಳ್ಳಾಪುರ, ರಾಮನಗರ ಸೇರಿ ಹಲವೆಡೆ ಮಳೆ ಆಗಿದೆ. ಇನ್ನೂ ಮೂರ್ನಾಲ್ಕು ದಿನ ಬೆಂಗಳೂರು ಸೇರಿದಂತೆ ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಭಾಗದಲ್ಲಿ ಮಳೆ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.