ಬೆಂಗಳೂರು/ಹುಬ್ಬಳ್ಳಿ : ರಾಜ್ಯದಲ್ಲಿ ಮಳೆ ಅವಾಂತರ ಮುಂದುವರಿದಿದ್ದು, ಇಂದು ಹುಬ್ಬಳ್ಳಿ ನಗರದಲ್ಲಿ ಸುರಿದ ಭಾರೀ ಮಳೆಗೆ ಅಪಾರ ಪ್ರಮಾಣದ ಹಾನಿ ಸಂಭವಿಸಿದೆ.
ಮಧ್ಯಾಹ್ನ ವೇಳೆಗೆ ಭಾರೀ ಪ್ರಮಾಣದಲ್ಲಿ ಮಳೆ ಆರಂಭವಾಗಿದ್ದು, ಬಿರುಗಾಳಿಗೆ ಮರಗಳು ಮನೆಯ ಮೇಲೆ ಉರುಳಿಬಿದ್ದ ಪರಿಣಾಮ ಹಲವರು ಸಮಸ್ಯೆ ಎದುರಿಸಿದರೆ, ಕೆಲವೆಡೆ ಮನೆಯ ಮೇಲ್ಚಾವಣಿಗಳು ಹಾರಿ ಹೋದ ಕುರಿತು ವರದಿಯಾಗಿದೆ. ಭಾರೀ ಮಳೆಯ ಕಾರಣ ನಗರದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ಸಮಸ್ಯೆ ಹೆಚ್ಚಾಗಲು ಕಾರಣವಾಗಿತ್ತು. ಕಳೆದ ರಾತ್ರಿಯೂ ಭಾರೀ ಪ್ರಮಾಣದ ಮಳೆ ಗಾಳಿಗೆ ತತ್ತರಿಸಿದ ಜನತೆ ಆತಂಕ ಎದುರಿಸಿದರು.
ಇನ್ನು ಬೆಂಗಳೂರು ವಲಯದ ಆನೇಕಲ್, ವಿಜಯಪುರ, ಹುಬ್ಬಳ್ಳಿ ಸೇರಿದಂತೆ ವಿವಿಧೆಡೆ ಮಳೆ ಆಗಿದೆ. ಚಂದಾಪುರ ವ್ಯಾಪ್ತಿಯ ರೈಲ್ವೇ ಅಂಡರ್ ಪಾಸ್ ನೀರಿನಿಂದ ಆವೃತವಾಗಿತ್ತು. ಚಂದಾಪುರದಿಂದ ದೊಮ್ಮಸಂದ್ರಕ್ಕೆ ಹೋಗುವ ಏಕೈಕ ರಸ್ತೆ ಇದಾಗಿದ್ದ ಕಾರಣ ವಾಹನ ಸವಾರರು ಪರದಾಟ ನಡೆಸಿದರು. ಅಲ್ಲದೇ ಯಾವುದೇ ಸೂಕ್ತ ಕ್ರಮ ಕೈಗೊಳ್ಳದ ಸ್ಥಳೀಯ ಆಡಳಿತ ವಿರುದ್ಧವು ತೀವ್ರ ಆಕ್ರೋಶ ಹೊರಹಾಕಿದರು.
ಹುಬ್ಬಳ್ಳಿಯಲ್ಲಿ ಭಾರೀ ಮಳೆಗೆ ಹತ್ತಾರು ಮರಗಳು ಉರುಳಿವೆ. ಭಾರೀ ಬಿರುಗಾಳಿಗೆ ಮನೆ ಮೇಲ್ಚಾವಣಿಗಳು ಹಾರಿ ಹೋಗಿವೆ. ಅಲ್ಲಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡಿದೆ. ಅತ್ತ ವಿಜಯಪುರದಲ್ಲಿ 50ಕ್ಕೂ ಹೆಚ್ಚು ಮರಗಳು ಧರೆಗುರುಳಿವೆ. ಸಿಂದಗಿ ತಾಲೂಕಿನ ಮುಳಸಾವಳಗಿಯಲ್ಲಿ ಹಲವು ಮನೆಗಳ ಮೇಲ್ಛಾವಣಿ ಹಾರಿ ಹೋಗಿವೆ. ವಿಜಯಪುರ ಜಿಲ್ಲಾಧಿಕಾರಿ ಮನೆಯ ವಿದ್ಯುತ್ ಸಂಪರ್ಕ ಕಡಿತಗೊಂಡು ಸ್ವತಃ ಡಿಸಿ ಪರದಾಡಿದ್ದರು. ಇಂದು ಮಂಡ್ಯದ ಮುತ್ತತ್ತಿಯಲ್ಲಿ ಕಾವೇರಿ ನದಿಯಲ್ಲಿ ಈಜಲು ಹೋಗಿದ್ದ ಬೆಂಗಳೂರಿನ ವೆಂಕಟೇಶ್ ಮೊಸಳೆ ಪಾಲಾಗಿದ್ದಾರೆ.