ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಭಾನುವಾರ ರಾತ್ರಿ ಭಾರೀ ಮಳೆಯಾಗಿದ್ದು, ಇಂದು ಬೆಳಗ್ಗೆ ಸಹ ನಗರದ ಹಲವೆಡೆ ಧಾರಾಕಾರ ಮಳೆಯಾಗುತ್ತಿದೆ.
ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ವಿಜಯನಗರ, ಯಶವಂತಪುರ ನಾಗರಭಾವಿ ಸೇರಿದಂತೆ ವಿವಿಧ ಕಡೆಗಳಲ್ಲಿ ಮಳೆಯಾಗಿದೆ. ಏಕಾಏಕಿ ಜೋರಾಗಿ ಮಳೆ ಬಿದ್ದ ಪರಿಣಾಮ ರಸ್ತೆಗಳ ತುಂಬೆಲ್ಲ ನೀರು ತುಂಬಿದ್ದು, ತಗ್ಗುಪ್ರದೇಶದ ಕಟ್ಟಡಗಳಿಗೂ ನೀರು ನುಗ್ಗಿದೆ.
ಭಾರೀ ಮಳೆಗೆ ಸದಾಶಿವನಗರದಲ್ಲಿ ಲೈಟ್ ಕಂಬದಲ್ಲಿ ವಿದ್ಯುತ್ ಶಾರ್ಟ್ ಸಕ್ಯೂರ್ಟ್ ಆಗಿದೆ. ಅತ್ತ ಹೊಸಕೆರೆ ಹಳ್ಳಿಯಲ್ಲಿ ಮೋರಿಗಳು ತುಂಬಿ ಹರಿದಿವೆ. ಸುಮ್ಮನಹಳ್ಳಿ ಬ್ರಿಡ್ಜ್ ಪಕ್ಕದ ರಾಜಕಾಲುವೆ ತುಂಬಿ ಹರಿಯುತ್ತಿದ್ದು, ಬ್ರಿಡ್ಜ್ ಕೂಡಾ ಜಲಾವೃತಗೊಂಡಿದೆ. ಇದರಿಂದ ಬೆಳ್ಳಂಬೆಳಗ್ಗೆ ವಾಹನ ಸವಾರರು ಪರದಾಡುತ್ತಿದ್ದಾರೆ.
ಇತ್ತ ಬೆಂಗಳೂರು ಹೊರವಲಯ ಕೆಂಗೇರಿ, ರಾಮನಗರ, ನೆಲಮಂಗಲದಲ್ಲಿ ತುಂತುರು ಮಳೆ ಆರಂಭವಾಗಿದ್ದು, ಬೆಳ್ಳಂಬೆಳಗ್ಗೆ ಟ್ರಾಫಿಕ್ ಜಾಮ್ ಉಂಟಾಗಿದೆ. ನಗರದಲ್ಲಿ ಬಸ್ ಸಂಚಾರವೂ ಕಡಿಮೆಯಾಗಿದೆ. ದತ್ತಾತ್ರೇಯದಲ್ಲಿ ದೇವಾಲಯಕ್ಕೆ ನೀರು ನುಗ್ಗಿದೆ. ನಾಯಂಡಳ್ಳಿ, ಜಯನಗರದ 4 ಬ್ಲಾಕ್ ನಲ್ಲಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ಮರಗಳು ರಸ್ತೆಗುರುಳಿವೆ.
ಈ ಹಿಂದೆ ಹವಾಮಾನ ಇಲಾಖೆ ಕೂಡ ಬೆಂಗಳೂರಿನಲ್ಲಿ ಮಳೆಯಾಗುತ್ತದೆ ಎಂದು ಮುನ್ಸೂಚನೆಯನ್ನು ನೀಡಿತ್ತು. ಭಾನುವಾರ ರಾತ್ರಿಯಿಂದಲೇ ಮಳೆ ಆರಂಭವಾಗಿದೆ. ಮುಂಜಾನೆ ಕೂಡ ವರುಣ ತನ್ನ ಆರ್ಭಟವನ್ನು ಮುಂದುವರಿಸಿದ್ದಾನೆ. ಬೆಂಗಳೂರಿನ ಪಶ್ಚಿಮ ವಲಯದಲ್ಲಿ ಅತಿಹೆಚ್ಚು ಮಳೆಯಾಗಿದ್ದು, ತುಂಬಾ ಹಾನಿಯಾಗಿದೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv