ಬಾಗಲಕೋಟೆ: ಜಿಲ್ಲೆಯಲ್ಲಿ ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೋಳಿ ಫಾರ್ಮ್ ಗೆ ನೀರು ನುಗ್ಗಿದ್ದು, ಮೂರು ಸಾವಿರಕ್ಕೂ ಅಧಿಕ ಕೋಳಿಗಳು ಸಾವನ್ನಪ್ಪಿವೆ. ಅಲ್ಲದೆ ಲಕ್ಷಾಂತರ ರೂ ಬೆಲೆಯ ಈರುಳ್ಳಿ ಬೆಳೆ ನಾಶವಾಗಿದೆ.
Advertisement
ಧಾರಾಕಾರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಮುಧೋಳ-ಮಂಟೂರು ರಸ್ತೆ ಬಳಿ ಇರುವ ಕೋಳಿ ಫಾರ್ಮ್ ಗೆ ನೀರು ನುಗ್ಗಿದ್ದು, ನೀರಿನಲ್ಲಿ ಮುಳುಗಿ ಮೂರು ಸಾವಿರಕ್ಕೂ ಹೆಚ್ಚು ಕೋಳಿ ಸಾವನ್ನಪ್ಪಿವೆ. ಹನುಮಂತ ಅಂಬಿಗೇರ ಎಂಬವರ ಕೋಳಿ ಫಾರ್ಮ್ ಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದ್ದು, ಲಕ್ಷಾಂತರ ರೂ. ಹಾನಿಯಾಗಿದೆ.
Advertisement
Advertisement
ಅಪಾರ ಪ್ರಮಾಣದ ಬೆಳೆ ಸಹ ನಷ್ಟವಾಗಿದ್ದು, ಮುಧೋಳ ತಾಲೂಕಿನ ಚಿತ್ರಬಾನುಕೋಟೆ, ಚೌಡಾಪುರ, ಬಂಟನೂರು ಗ್ರಾಮಗಳಲ್ಲಿ ಬೆಳೆ ಹಾನಿ ಸಂಭವಿಸಿದೆ. ಕೃಷಿ ಭೂಮಿ ಸಂಪೂರ್ಣ ಜಲಾವೃತಗೊಂಡಿದ್ದು, ಲಕ್ಷಾಂತರ ರೂ. ಈರುಳ್ಳಿ ಬೆಳೆ ನೀರು ಪಾಲಾಗಿದೆ. ಹೊಲಗದ್ದೆಗಳಿಗೆ ನೀರು ನುಗ್ಗಿದ್ದು, ನದಿ ಪಾತ್ರದ ಜನರಲ್ಲಿ ಮತ್ತೆ ಆತಂಕ ಶುರುವಾಗಿದೆ.
Advertisement
ಮಳೆಯಿಂದಾಗಿ ಪೊಲೀಸ್ ವಸತಿಗೃಹಗಳು ಸಹ ಜಲಾವೃತಗೊಂಡಿದ್ದು, ಮುಧೋಳ ತಾಲೂಕಿನ ಲೋಕಾಪುರ ಪೊಲೀಸ್ ಠಾಣೆಯ ವಸತಿ ಗೃಹಗಳಲ್ಲಿ ಮೂರು ಅಡಿ ನೀರು ನಿಂತಿದೆ. ವಸತಿ ಗೃಹದ ಆವರಣದೊಳಗೆ ಬೃಹತ್ ಪ್ರಮಾಣದಲ್ಲಿ ನೀರು ನಿಂತಿದೆ.
ಇತ್ತ ಘಟಪ್ರಭಾ ನದಿತೀರದಲ್ಲಿ ಮತ್ತೆ ಪ್ರವಾಹ ಭೀತಿ ಎದುರಾಗಿದ್ದು, ಘಟಪ್ರಭಾ ನದಿ ತುಂಬಿ ಹರಿಯುತ್ತಿದೆ. ಮಿರ್ಜಿ-ಮಹಲಿಂಗಪುರ ಮಾರ್ಗದ ಘಟಪ್ರಭಾ ರಸ್ತೆ ಸೇತುವೆ ಸಂಪೂರ್ಣ ಜಲಾವೃತಗೊಂಡಿದ್ದು, ಸೇತುವೆ ಮೇಲೆ ಹತ್ತು ಅಡಿಯಷ್ಟು ನೀರು ಹರಿಯುತ್ತಿದೆ. ಘಟಪ್ರಭಾ ನದಿ ನೀರು ಮಿರ್ಜಿ ಗ್ರಾಮಕ್ಕೆ ನುಗ್ಗಿ ಬರುತ್ತಿದ್ದು, ಮತ್ತೆ ಮುಳುಗಡೆ ಭೀತಿಯನ್ನು ಗ್ರಾಮಸ್ಥರು ಎದುರಿಸುತ್ತಿದ್ದಾರೆ. ಈಗಾಗಲೇ ಮಿರ್ಜಿ ಗ್ರಾಮದ ನೂರಾರು ಎಕರೆ ಕಬ್ಬು ಜಲಾವೃತಗೊಂಡಿದೆ. ಈ ಹಿಂದೆ ಪ್ರವಾಹದ ವೇಳೆ ಮಿರ್ಜಿ ಗ್ರಾಮ ಸಂಪೂರ್ಣ ಜಲಾವೃತವಾಗಿತ್ತು.