ಮಹಾಮಳೆ ಅಬ್ಬರಕ್ಕೆ ಉತ್ತರ ತತ್ತರ – 3 ಜಿಲ್ಲೆಗಳಲ್ಲಿ ಪ್ರವಾಹದ ಭೀತಿ

Public TV
2 Min Read
rain overall 5

ಬೆಂಗಳೂರು: ಮಹಾರಾಷ್ಟ್ರದಲ್ಲಿ ಆಗುತ್ತಿರುವ ಮಹಾಮಳೆ ಉತ್ತರ ಕರ್ನಾಟಕದಲ್ಲಿ ಪ್ರವಾಹ ಸೃಷ್ಟಿಸಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆಯಾಗಿವೆ. ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ಹಾನಿಯಾಗಿದೆ.

ಮಹಾರಾಷ್ಟ್ರದಲ್ಲಿ ಕುಂಭದ್ರೋಣ ಮಳೆ ಮುಂದುವರಿದಿದ್ದು ಅದರ ಎಫೆಕ್ಟ್ ಉತ್ತರ ಕರ್ನಾಟಕದ ಮೇಲೆ ಬಡಿದಿದೆ. ಬೆಳಗಾವಿ, ಚಿಕ್ಕೋಡಿ, ವಿಜಯಪುರ, ಬಾಗಲಕೋಟೆ, ರಾಯಚೂರಿನಲ್ಲಿ ಪ್ರವಾಹ ಪರಿಸ್ಥಿತಿ ತಲೆದೂರಿದೆ. ನದಿ ಪಾತ್ರದ ಗ್ರಾಮಗಳು, ಜಮೀನುಗಳು ಜಲಾವೃತವಾಗಿವೆ. ಸೇತುವೆಗಳು ಮುಳುಗಡೆಯಾಗಿದ್ದು ರಸ್ತೆ ಸಂಪರ್ಕ ಕಡಿತಗೊಂಡಿದೆ.

rain overall 6

ಬೆಳಗಾವಿಯ ಪೀರನವಾಡಿ, ಲಕ್ಷ್ಮಿಗಲ್ಲಿ, ಉದ್ಯಮ್ ಬಾಗ್‍ನ ಸುಮಾರು 50 ಮನೆಗಳಿಗೆ ನೀರು ನುಗ್ಗಿದ ಪರಿಣಾಮ ನಿವಾಸಿಗಳು ಪರದಾಡಿದರು. ಬಳ್ಳಾರಿ ನಾಲೆಯಿಂದ ನೀರು ಉಕ್ಕಿ ಬಂದಿದ್ದರಿಂದ ಓಂನಗರ ಬಡಾವಣೆ ಸಂಪೂರ್ಣ ಜಲಾವೃತವಾಗಿತ್ತು. ಖಾನಾಪುರದ ಭಂಕಿ ಗ್ರಾಮದ ಸೇತುವೆ ಮುಳುಗಡೆಯಾಗಿದೆ. ಪ್ರಾಣದ ಹಂಗು ತೊರೆದು ಸೇತುವೆ ಮೇಲೆಯೇ ಜನ ಸಂಚರಿಸುತ್ತಿದ್ದಾರೆ. ತಾಲೂಕಿನ ಹಲವು ಗ್ರಾಮಗಳಲ್ಲಿ ಮನೆಗಳು ಕುಸಿತವಾಗಿವೆ. ಕೃಷ್ಣಾ ನದಿಯ ಅಬ್ಬರಕ್ಕೆ ರಾಯಬಾಗ ತಾಲೂಕಿನ 8 ಸೇತುವೆಗಳು ಮುಳುಗಡೆಯಾಗಿವೆ.

rain overall 7

ಮಹಾರಾಷ್ಟ್ರದಲ್ಲಿ ಕೃಷ್ಣಾ ನದಿಗೆ ಅಡ್ಡಲಾಗಿ ಕಟ್ಟಿರುವ ಕೊಯ್ನಾ ಡ್ಯಾಂ ಬಳಿ ಲಘು ಭೂಕಂಪನ ಸಂಭವಿಸಿದ್ದು ಡ್ಯಾಂಗೆ ಧಕ್ಕೆಯಾದರೆ ಕರ್ನಾಟಕಕ್ಕೆ ಅಪಾಯವಾಗುತ್ತದೆ. ಏಕಾಏಕಿ ಹೆಚ್ಚುವರಿ ನೀರು ಹರಿದರೆ ರಾಜ್ಯದಲ್ಲಿ ಪ್ರವಾಹ ಸೃಷ್ಟಿಯಾಗುತ್ತದೆ. ಭೂಕಂಪವಾಗಿರುವುದರಿಂದ ಹೆಚ್ಚಿನ ನೀರು ಬಿಡುಗಡೆ ಮಾಡುವ ಸಾಧ್ಯತೆ ಇದ್ದು ಚಿಕ್ಕೋಡಿ ತಾಲೂಕಿನ ನದಿಪಾತ್ರದ ಗ್ರಾಮಗಳ ಜನರಿಗೆ ಎಚ್ಚರಿಕೆ ಘೋಷಿಸಲಾಗಿದೆ.

rain overall 2

ಬಾಗಲಕೋಟೆಯಲ್ಲಿ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಘಟಪ್ರಭಾ ನದಿ ಉಕ್ಕಿ ಹರಿಯುತ್ತಿದೆ. ಮುಧೋಳ ತಾಲೂಕಿನ ಮಾಚಕನೂರು ಗ್ರಾಮದ ಹೊಳೆಬಸವೇಶ್ವರ ದೇವಸ್ಥಾನ ಜಲಾವೃತವಾಗಿದೆ. ದೇಗುಲದ ಸುತ್ತಲೂ ನೀರು ಆವರಿಸಿದ್ದು ದೇಗುಲಕ್ಕೆ ತೆರಳಲು ಭಕ್ತರು ಹರಸಾಹಸ ಪಟ್ಟರು. ಆಲಮಟ್ಟಿ ಡ್ಯಾಂ ಭರ್ತಿಯಾಗಿದ್ದು, ನಾರಾಯಣಪುರ ಡ್ಯಾಂಗೆ ನೀರು ಬಿಟ್ಟ ಪರಿಣಾಮ ವಿಜಯಪುರ ಜಿಲ್ಲೆಯ ಯಲಗೂರು, ಮುದೂರ, ಕಾಳಗಿ ಸೇರಿ ಹಲವು ಗ್ರಾಮಗಳ ಜಮೀನಿಗೆ ನೀರು ನುಗ್ಗಿದೆ. ಅಪಾರ ಪ್ರಮಾಣದ ತೊಗರಿ, ಸಜ್ಜೆ, ಕಬ್ಬು ಬೆಳೆ ನಾಶವಾಗಿದೆ.

ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ನೀರು ಬಿಟ್ಟಿದ್ದರಿಂದ ರಾಯಚೂರಿನ ಹೂವಿನಹೆಡಗಿ ಸೇತುವೆ ಸಂಚಾರ ಬಂದ್ ಆಗಿದೆ. ನಗರಗುಂಡಾ, ನಿಲುವಂಜಿ ಸೇರಿ ವಿವಿಧ ಗ್ರಾಮಗಳ ಜಮೀನುಗಳಿಗೆ ನೀರು ನುಗ್ಗಿದೆ. ಸುಮಾರು 500 ಹೆಕ್ಟೇರ್ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಬೆಳೆ ಹಾನಿಯಾಗಿದೆ. ನದಿ ಪಾತ್ರದ ಜನರಿಗೆ ಎಚ್ಚರದಿಂದಿರುವಂತೆ ಸೂಚಿಸಲಾಗಿದೆ. ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶದಲ್ಲಿ ಎರಡ್ಮೂರು ದಿನ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು ಉತ್ತರ ಕರ್ನಾಟಕದಲ್ಲಿ ಭಾರೀ ಅನಾಹುತ ಸೃಷ್ಟಿಸುವ ಸಾಧ್ಯತೆ ಇದೆ.

Share This Article
Leave a Comment

Leave a Reply

Your email address will not be published. Required fields are marked *