– ಚಿಕ್ಕಬಳ್ಳಾಪುರದಲ್ಲಿ ಒಣಗುತ್ತಿದ್ದ ಬೆಳೆಗಳಿಗೆ ಜೀವಕಳೆ
ಬೆಂಗಳೂರು: ರಾಜ್ಯದಲ್ಲಿ ಮಳೆಯ ಅಬ್ಬರ ಜೋರಾಗಿದೆ. ಕಾದು ಕೆಂಡವಾಗಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ. ಕೆಲವೆಡೆ ಅನಾಹುತಗಳಾದ್ರೆ, ಇನ್ನೂ ಕೆಲವೆಡೆ ಅವಾಂತರಗಳು ಸೃಷ್ಠಿಯಾಗಿದೆ.
ಹೌದು. ರಾಜ್ಯದಲ್ಲಿ ಮುಂಗಾರು ಪೂರ್ವಮಳೆಯ ಅಬ್ಬರ ಜೋರಾಗಿದೆ. ಮಳೆಗೆ ಜನರು ಖುಷಿಯಾಗಿದ್ರೆ ಕೆಲವೆಡೆ ಅವಾಂತರಗಳು ಸೃಷ್ಟಿಯಾಗಿವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿ ಸಿದ್ದಾಪುರ ಭಾಗದಲ್ಲಿ ಮಳೆಯಾಗಿದೆ. ಶಿರಸಿಯಲ್ಲಿ ಮಳೆ ಗಾಳಿ ಆರ್ಭಟಕ್ಕೆ ಮರ, ವಿದ್ಯುತ್ ಕಂಬಗಳು ಉರುಳಿಬಿದ್ದಿವೆ. ಹೀಗಾಗಿ ರಸ್ತೆ ಸಂಚಾರ ಸಂಪೂರ್ಣ ಬಂದ್ ಆಗಿತ್ತು. ಅಲ್ಲದೇ ನಗರದಾದ್ಯಂತ ವಿದ್ಯುತ್ ವ್ಯತ್ಯಯ ಉಂಟಾಗಿತ್ತು. ಇನ್ನು ಕಾರವಾರ, ಮುಂಡಗೋಡು, ದಾಂಡೇಲಿ, ಜೋಯಿಡಾ ಯಲ್ಲಾಪುರ ಭಾಗದಲ್ಲಿ ನಿನ್ನೆ ಮೋಡ ಕವಿದ ವಾತಾವರಣವಿತ್ತು. ಇನ್ನೂ ಮೂರು ದಿನ ಮಲೆನಾಡು, ಕರಾವಳಿಯಲ್ಲಿ ಮಳೆ ಬರುವ ಸೂಚನೆಯನ್ನು ಹವಾಮಾನ ಇಲಾಖೆ ನೀಡಿದೆ.
Advertisement
Advertisement
ಚಿಕ್ಕಬಳ್ಳಾಪುರದಲ್ಲಿ ಬಿಸಿಲಿಗೆ ಬಾಡಿದ್ದ ಬೆಳೆಗಳಿಗೆ ಮಳೆ ಬಂದಿದ್ರಿಂದ ಮರುಜೀವ ತಂದಿದೆ. ಮತ್ತೆ ಚಿಗುರಿದ ಬೆಳೆ ಕಂಡು ರೈತನ ಮುಖದಲ್ಲಿ ಮಂದಹಾಸ ಮೂಡಿದೆ. ಸೇವಂತಿಗೆ ಬಿಸಿಲಿನ ತಾಪಮಾನದಿಂದ ಒಣಗಿ ಹೋಗಿತ್ತು. ಆದರೆ ಕಳೆದ ಎರಡ್ಮೂರು ದಿನಗಳಿಂದ ಸುರಿದ ಮಳೆಗೆ ಸೇವಂತಿಗೆ ಗಿಡಗಳಿಗೆ ಮರುಜೀವ ಬಂದಿದೆ. ದ್ರಾಕ್ಷಿ, ದಾಳಿಂಬೆ, ಟೊಮ್ಯಾಟೋ, ಕ್ಯಾಪ್ಸಿಕಂ, ಬೀನ್ಸ್ ಸೇರಿದಂತೆ ಬಹುತೇಕ ತರಕಾರಿಗಳನ್ನ ಬೆಳೆಯಲಾಗಿದೆ. ಈ ಬೆಳಗಳೂ ಕೂಡ ಮಳೆಯಿಲ್ಲದೇ ಬಾಡಿದವು. ಆದ್ರೀಗ ಮಳೆಯಾಗಿದ್ದು, ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.
Advertisement
Advertisement
ವಾಣಿಜ್ಯ ನಗರಿ ಹುಬ್ಬಳ್ಳಿಯಲ್ಲಿ ಮಳೆಯ ಅಬ್ಬರ ಜೋರಾಗಿದ್ದು, ವಿವಿಧೆಡೆ ಭಾರೀ ಮಳೆಯಾಗಿದೆ. ಪರಿಣಾಮವಾಗಿ ಹೆಗ್ಗೆರಿಯ 14ನೇ ವಲಯ ಕಚೇರಿ ಆವರಣದಲ್ಲಿ ಬೃಹತ್ ಮರ ಉರುಳಿ ಬಿದ್ದ ಕಾರಣ ಎರಡು ಬೈಕ್ ಗಳು ಜಖಂಗೊಂಡಿವೆ. ಜೆಸಿ ರಸ್ತೆ, ಸರ್ಕಿಟ್ ಹೌಸ್ಗಳಲ್ಲಿ ಸಹ ಬೃಹತ್ ಮರಗಳು ಬಿದ್ದಿದ್ದು, ಮಳೆಗೆ ರಸ್ತೆಗಳೆಲ್ಲಾ ಜಲಾವೃತಗೊಂಡಿದೆ. ಪ್ರತಿಷ್ಠಿತ ಯೂಮಾಲ್, ನ್ಯಾಷನಲ್ ಮಾರ್ಕೆಟ್ ರಸ್ತೆಗಳಲ್ಲಿ ನಿಂತ ಮಳೆ ನೀರಿನಿಂದ ವಾಹನ ಸವಾರರು ಪರದಾಡುವಂತಾಗಿತ್ತು.
ಉಡುಪಿಯಲ್ಲಿ ಸಿಡಿಲು ಬಡಿದು ವ್ಯಕ್ತಿ ಸಾವನ್ನಪ್ಪಿದ್ದಾರೆ.. ಕುಂದಾಪುರ ತಾಲೂಕಿನ ಸಿದ್ಧಾಪುರ ಗ್ರಾಮದಲ್ಲಿ ಘಟನೆ ನಡೆದಿದ್ದು, ಸುರೇಶ ಶೆಟ್ಟಿ ಮೃತ ದುದೈವಿಯಾಗಿದ್ದಾರೆ.. ಸಂಜೆ 4 ಗಂಟೆ ವೇಳೆಗೆ ಸಿಡಿಲು ಬಡಿದು ತೀವ್ರ ಅಸ್ವಸ್ಥಗೊಂಡು ಸಾವನ್ನಪ್ಪಿದ್ದಾರೆ.. ಇನ್ನು ಉಡುಪಿ ಜಿಲ್ಲೆಯಲ್ಲಿ ಮುಂದಿನ ಎರಡ್ಮೂರು ದಿನ ಮಳೆ ಮುನ್ಸೂಚನೆ ನೀಡಲಾಗಿದೆ.
ಒಟ್ಟಾರೆ ಬಿರು ಬಿಸಿಲಿನಿಂದ ಕಂಗೆಟ್ಟಿದ್ದ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಕೆಲವೆಡೆ ಅನಾಹುತ ಸೃಷ್ಠಿಯಾದ್ರೆ, ಇನ್ನು ಕೆಲವೆಡೆ ಮಳೆಯಿಂದ ರೈತರು ಹರ್ಷ ವ್ಯಕ್ತಪಡಿಸಿದ್ದಾರೆ.