ಬೆಂಗಳೂರು: ರಾಜ್ಯದಲ್ಲಿ ವರುಣ (Rain) ಕೊಂಚವೂ ಬಿಡುವಿಲ್ಲದಂತೆ ಆರ್ಭಟಿಸುತ್ತಿದ್ದಾನೆ. ಪರಿಣಾಮ ರಾಜ್ಯದ ಹಲವಾರು ಭಾಗಗಳಲ್ಲಿ ನಾನಾ ಅವಾಂತರ ಸೃಷ್ಟಿಯಾಗಿದೆ.
ಶಿರಾಡಿಘಾಟ್‍ನಲ್ಲಿ ಮತ್ತೆ ಭೂಕುಸಿತ
ಹಾಸನದ (Hassan) ಸಕಲೇಶಪುರ ತಾಲೂಕಿನ ಮಂಗಳೂರು-ಬೆಂಗಳೂರು ಸಂಪರ್ಕಿಸುವ ಶಿರಾಡಿಘಾಟ್‍ನಲ್ಲಿ ಮತ್ತೆ (Landslide) ಭೂಕುಸಿತವಾಗಿದೆ. ದೊಡ್ಡತಪ್ಲೆ ಬಳಿ ಪೊಲೀಸರು ನಿಲ್ಲಿಸಿದ್ದ ವಾಹನದ ಬಳಿಯೇ ಭೂಕುಸಿದಿದೆ. ಪರಿಣಾಮ ಪೊಲೀಸ್ ವಾಹನ ಕೆಸರಿನಲ್ಲಿ ಸಿಲುಕಿದ್ದು, ಬಳಿಕ ಕೂಡಲೇ ಜೆಸಿಬಿ ಮೂಲಕ ಮಣ್ಣು ತೆರವುಗೊಳಿಸಿ ಪೊಲೀಸ್ ವಾಹನವನ್ನು ಸ್ಥಳಾಂತರಿಸಲಾಯಿತು.
Advertisement
Advertisement
ಯುವಕನ ತಲೆ ಮೇಲೆ ಬಿತ್ತು ವಿದ್ಯುತ್ ಕಂಬ
ಕಾಫಿನಾಡ ಮಲೆನಾಡು ಭಾಗದಲ್ಲಿ ಮಳೆ ಮುಂದುವರೆದಿದೆ. ಮೂಡಿಗೆರೆ ತಾಲೂಕಿನ ತುಂಬರಗಡಿ ಗ್ರಾಮದ ಬಳಿ ಭಾರೀ ಗಾಳಿಯಿಂದ ವಿದ್ಯುತ್ ಕಂಬವೊಂದು ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ದಿವೀತ್ ಎಂಬ ಯುವಕನ ತಲೆಯ ಮೇಲೆ ಮುರಿದು ಬಿದ್ದಿದೆ. ಪರಿಣಾಮ ಯುವಕನ ತಲೆಗೆ ಗಂಭೀರ ಗಾಯವಾಗಿದೆ. ಆತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
Advertisement
ಉಕ್ಕಿ ಹರಿಯುತ್ತಿರುವ ವರದಾ
ಮಲೆನಾಡಿನಲ್ಲಿ ಭಾರೀ ಮಳೆಯಾಗುತ್ತಿರುವ ಪರಿಣಾಮ ಹಾವೇರಿಯಲ್ಲಿ ವರದಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಾಗಿದೆ. ಸಂಗೂರು ಗ್ರಾಮದ ಬಳಿ ಇರುವ ವರದಾ ನದಿಯ ಪಾತ್ರದ ರೈತರ ಜಮೀನುಗಳು ನೀರಿನಲ್ಲಿ ಜಲಾವೃತಗೊಂಡಿವೆ.
Advertisement
ಸೇತುವೆಗಳು ಜಲಾವೃತ
ಬೆಳಗಾವಿಯಲ್ಲಿ ಮಹಾಮಳೆಗೆ ಕೃಷ್ಣಾ ನದಿ ನೀರಿನ ಒಳಹರಿವು 1.22 ಲಕ್ಷ ಕ್ಯುಸೆಕ್ ದಾಟಿದೆ. ಈಗಾಗಲೇ ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 7 ಸೇತುವೆಗಳು ಜಲಾವೃತವಾಗಿವೆ. ನಾರಾಯಣಪುರ ಜಲಾಶಯದಿಂದ ಕೃಷ್ಣಾ ನದಿಗೆ ಭಾರೀ ಪ್ರಮಾಣದ ನೀರು ಬಿಡುಗಡೆ ಹಿನ್ನೆಲೆ ರಾಯಚೂರಿನ ದೇವದುರ್ಗದ ಹೂವಿನಹೆಡಗಿ ಸೇತುವೆ ಮುಳುಗಡೆ ಹಂತದಲ್ಲಿದೆ.
ಟಿಬಿ ಡ್ಯಾಮ್‍ನಿಂದ ಕಾಲುವೆಗೆ ಹರಿದ ನೀರು
ವಿಜಯನಗರ ಜಿಲ್ಲೆಯ ತುಂಗಭದ್ರಾ ಜಲಾಶಯದಿಂದ 5,541 ಸಾವಿರ ಕ್ಯುಸೆಕ್ ನೀರನ್ನು ಕಾಲುವೆ ಹಾಗೂ ನದಿಗೆ ಹರಿಬಿಡಲಾಗಿದೆ.
ಕಳಸ ಹೆಬ್ಬಾಳೆ ಸೇತುವೆ ಸಂಚಾರ ಮುಕ್ತ
ಮಳೆ ಕೊಂಚ ಕಡಿಮೆಯಾದ ಪರಿಣಾಮ ಜಲಾವೃತಗೊಂಡಿದ್ದ ಚಿಕ್ಕಮಗಳೂರಿನ ಕಳಸಾ ತಾಲೂಕಿನ ಹೆಬ್ಬಾಳೆ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.