– ವರುಣಾರ್ಭಟಕ್ಕೆ ಸಿಲಿಕಾನ್ ಸಿಟಿ ತತ್ತರ; ಧಾರಾಕಾರ ಮಳೆಗೆ ಹಲವೆಡೆ ಅವಾಂತರ
– ಧರೆಗುರುಳಿದ ಬೃಹತ್ ಮರ, ರಸ್ತೆಗಳಲ್ಲಿ ಉಕ್ಕಿ ಹರಿದ ಮಳೆ ನೀರು
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಸುರಿದ ಧಾರಾಕಾರ ಮಳೆಯು ಭಾರೀ ಅನಾಹುತವನ್ನುಂಟು ಮಾಡಿದೆ. ನಗರದ ಬಿನ್ನಿಪೇಟೆಯಲ್ಲಿ ಕಾಂಪೌಂಡ್ ಕುಸಿದಿದ್ದು, ಹತ್ತಾರು ಗಾಡಿಗಳು ಜಖಂಗೊಂಡಿವೆ. ನಾಲ್ಕೈದು ಮನೆಗಳಿಗೆ ನೀರು ನುಗ್ಗಿದೆ. ಕಾಂಪೌAಡ್ ಕುಸಿತ ಪರಿಣಾಮ 16 ಮನೆಗಳಿಗೆ ಜಲದಿಗ್ಬಂಧನ ಉಂಟಾಗಿದೆ.
ಎಡೆಬಿಡದೆ ಸುರಿದ ಮಳೆಗೆ ಕೆ.ಆರ್. ಮಾರ್ಕೆಟ್‌ನ ರಸ್ತೆಯೆಲ್ಲಾ ಜಲಾವೃತ್ತವಾಗಿತ್ತು. ಮಂಡಿವರೆಗೆ ಮಳೆ ನೀರು ಹರಿಯುತ್ತಿದ್ದರಿಂದ ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಸ್ಯಾಂಕಿ ರಸ್ತೆಯಲ್ಲಿ ನೀರು ನಿಂತು ಅಕ್ಷರಶಃ ಜನರು ನಲುಗಿ ಹೋದರು. ವಾಹನ ಸವಾರರು ಪರದಾಡಿದರು.
ಒಂದಡೆ ಮಳೆ, ಮತ್ತೊಂದೆಡೆ ಟ್ರಾಫಿಕ್ ಜಾಮ್ ಆಯಿತು. ಬಳ್ಳಾರಿ ರಸ್ತೆ ಮಳೆಯಿಂದಾಗಿ ಸ್ಥಬ್ದವಾಗಿತ್ತು. ಕಿಲೋಮೀಟರ್‌ಗಟ್ಟಲೇ ಟ್ರಾಫಿಕ್ ಜಾಮ್ ಆಗಿತ್ತು. ಇತ್ತ ಮಲ್ಲೇಶ್ವರಂ 17 ನೇ ಕ್ರಾಸ್ ಕ್ಲೌಡ್‌ನೈನ್ ಆಸ್ಪತ್ರೆ ಎದುರು ಬೃಹತ್ ಮರವೊಂದು ಧರೆಗುರುಳಿದೆ. ಮರದಡಿ ರಸ್ತೆಯ ಪಕ್ಕ ಪಾರ್ಕ್ ಮಾಡಲಾಗಿದ್ದ ಕಾರುಗಳು ಜಖಂಗೊಂಡಿವೆ. ಕರೆಂಟ್ ಸ್ಥಗಿತಗೊಂಡು, ರಸ್ತೆ ಸಂಚಾರ ಬಂದ್ ಆಗಿತ್ತು.
ಇಂದೂ ಸಹ ಬೆಂಗಳೂರು ನಗರ, ಗ್ರಾಮಾಂತರದಲ್ಲಿ ಭಾರೀ ಮಳೆಯಾಗಲಿದ್ದು, 11 ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ದಕ್ಷಿಣ ಒಳನಾಡಿನ 11 ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ನಗರ, ಗ್ರಾಮಾಂತರ, ಕೊಡಗು, ಮೈಸೂರು, ಚಾಮರಾಜನಗರ, ಮಂಡ್ಯ, ಹಾಸನ, ತುಮಕೂರು, ರಾಮನಗರ, ಚಿಕ್ಕಬಳ್ಳಾಪುರ ಜಿಲ್ಲೆಗಳಿಗೆ ಯೆಲ್ಲೊ ಅಲರ್ಟ್ ಘೋಷಿಸಲಾಗಿದೆ. ಅ.10 ಭಾರೀ ಮಳೆಯಾಗಬಹುದು. ಮುಂದಿನ ನಾಲ್ಕೈದು ದಿನ ಗುಡುಗು ಸಹಿತ ಭಾರೀ ಮಳೆ ಸಾಧ್ಯತೆ ಇದೆ ಎಂದು ತಿಳಿಸಿದೆ.