Connect with us

Districts

ಮೈಸೂರು ದಸರೆಗೂ ವರುಣನ ಕಾಟ- ಹಲವು ಬಡಾವಣೆಗಳು ಜಲಾವೃತ – ಮಿನಿ ಕೆರೆಯಂತಾದ ಗಾಲ್ಫ್ ಕ್ಲಬ್

Published

on

Share this

ಮೈಸೂರು: ತಡರಾತ್ರಿ ಸುರಿದ ಧಾರಕಾರ ಮಳೆಗೆ ನಾಡ ಹಬ್ಬ ದಸರಾ ಮಹೋತ್ಸವದ 6ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮವನ್ನು ಅದ್ವಾನ ಮಾಡಿದೆ. ಅಷ್ಟೇ ಅಲ್ಲದೇ ಆಹಾರ ಮೇಳದಲ್ಲಿನ ಸ್ಟಾಲ್‍ಗಳ ಮೇಲೆ ತಗಡಿನ ಶೀಟ್‍ಗಳು ಬಿದ್ದು ತಿಂಡಿ ತಿನಿಸುಗಳು ಹಾಳಾಗಿ, ಮಾಲೀಕರಿಗೆ ಅಪಾಯದ ಜೊತೆಗೆ ಪಜೀತಿಯನ್ನುಂಟು ಮಾಡಿದೆ.

ರಾತ್ರಿ ಬಿದ್ದ ಬಿರು ಮಳೆ ಪರಿಣಾಮ ಮೈಸೂರಿನ ಕೆ. ಆರ್. ಕ್ಷೇತ್ರ ವ್ಯಾಪ್ತಿಯ ಕನಿಗಿರಿ ನೀರಿನಿಂದ ಸಂಪೂರ್ಣ ಮುಳುಗಿದೆ. ಎಲ್ಲಾ ಮನೆಗಳು ನೀರಿನಿಂದ ತುಂಬಿ ಹೋಗಿವೆ. ಚಿಕ್ಕ ಮಕ್ಕಳನ್ನು ಕತ್ತಲಲ್ಲಿ ಮನೆಯ ಅಟ್ಟ, ಟೇಬಲ್, ಬೀರು ಮೇಲೆ ಕೂರಿಸಲಾಗಿದೆ. ಮೈಸೂರಿನ ಹೊರವಲಯದ ಹೂಟಗಳ್ಳಿ ಕೆರೆ ಕೋಡಿ ಒಡೆದು ನೀರು ಹೊರಗೆ ಹರಿಯುತ್ತಿದೆ. ಕನಕಗಿರಿಯಲ್ಲಿ ರಸ್ತೆ, ವಸತಿ ಪ್ರದೇಶಗಳಿಗೆ ಕೆರೆ ನೀರು ನುಗ್ಗಿದೆ. ರಣಮಳೆಗೆ ಮೈಸೂರಿನ ಗಾಲ್ಫ್ ಕ್ಲಬ್ ಮಿನಿ ಕೆರೆಯಂತಾಗಿದೆ. ಕ್ಲಬ್ ತುಂಬಾ ನೀರು ನುಗ್ಗಿದ್ದು ಕೋರ್ಟ್ ಸಂಪೂರ್ಣ ಹಾಳಾಗಿದೆ.

ಶ್ರೀರಾಂಪುರ, ದಟ್ಟಗಳ್ಳಿ, ಚಾಮುಂಡಿಪುರಂನಲ್ಲಿ ಮನೆಗಳು ಜಲಾವೃತವಾಗಿವೆ. ತಗ್ಗು ಪ್ರದೇಶದಲ್ಲಿರುವ 10ಕ್ಕೂ ಹೆಚ್ಚು ಮನೆಗಳಿಗೆ ಮಳೆ ನೀರು ನುಗ್ಗಿ ಮನೆ ಸಾಮಾಗ್ರಿಗಳೆಲ್ಲ ನೀರಿನಲ್ಲಿ ಮುಳುಗಡೆಯಾಗಿವೆ. ಪಾಲಿಕೆಗೆ ದೂರವಾಣಿ ಕರೆ ಮಾಡಿದರೂ ಸ್ಪಂದಿಸದ ಅಧಿಕಾರಿಗಳು ಹಾಗೂ ಪಾಲಿಕೆ ಸದಸ್ಯರ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಮಂಗಳವಾರ ಸಂಜೆ 6 ಗಂಟೆ ಆರಂಭವಾದ ಮಳೆ ರಾತ್ರಿ ಇಡೀ ತನ್ನ ರೌದ್ರಾವತಾರವನ್ನು ಮುಂದುವರೆಸಿದೆ. ಇದರಿಂದ ಮಹಾರಾಜ ಕಾಲೇಜು ಮೈದಾನದಲ್ಲಿ ದಸರಾ ಅಂಗವಾಗಿ ಜರುಗಿದ ಆರನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಪಜೀತಿ ಉಂಟು ಮಾಡಿದ್ದಲ್ಲದೇ, ನೀರಿನಿಂದ ವೇದಿಕೆ ಸಂಪೂರ್ಣ ಜಲಾವೃತಗೊಂಡಿತು. ಒಂದು ಕಡೆ ವೇದಿಕೆಯ ಮೇಲೆ ಬಾಲಿವುಡ್ ನ ಹಿನ್ನೆಲೆ ಗಾಯಕಿ ಶೀಫಾಲಿ ಮತ್ತು ತಂಡದಿಂದ ಸಂಗೀತ ರಂಗೆರುತ್ತಿದ್ದರೇ, ಇನ್ನೊಂದು ಕಡೆ ವೇದಿಕೆಯ ಮುಂಭಾಗ ನೀರು ನುಗ್ಗುವುದರ ಜೊತೆಗೆ ಛಾವಣಿಯಿಂದ ನೀರು ಸೋರಿ ಪ್ರೇಕ್ಷಕರನ್ನು ಪಜೀತಿಗೆ ಈಡುಮಾಡಿತ್ತು. ಕೆಲ ಪ್ರೇಕ್ಷಕರು ಮಳೆಯ ಅವಾಂತರದಿಂದ ಮನೆ ಕಡೆ ಹೆಚ್ಚೆ ಹಾಕಿದ್ರೆ ಇನ್ನೂ ಕೆಲವರು ಮಳೆ ನೀರಿನಲ್ಲೂ ಕುಣಿದು ಕುಪ್ಪಳಿಸಿದ್ರು.

ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮಾತ್ರವಲ್ಲದೇ, ಸ್ಕೌಟ್ ಮತ್ತು ಗೈಡ್ಸ್ ಮೈದಾನದಲ್ಲಿ ನಡೆಯುತ್ತಿದ್ದ ಆಹಾರ ಮೇಳದಲ್ಲಿ ಸ್ಟಾಲ್‍ಗಳ ಮಾಲೀಕರಿಗೆ ತೊಂದರೆಯನ್ನುಂಟು ಮಾಡಿತು. ವರುಣನ ಅಬ್ಬರಕ್ಕೆ ಸ್ಟಾಲ್‍ಗಳ ಮೇಲೆ ಇದ್ದ ತಗಡಿನ ಶೀಟ್‍ಗಳು ಕೆಳಗುರುಳಿದ್ವು. ಸ್ಟಾಲ್ ಒಳಗೆ ಸಿಬ್ಬಂದಿಗಳಿದ್ದ ವೇಳೆ ಈ ಅವಘಡ ಸಂಭವಿಸಿತು. ಆದರೆ ಅದೃಷ್ಟವಶಾತ್ ಯಾರಿಗೂ ಯಾವುದೇ ತೊಂದರೆಯಾಗಿಲ್ಲ. ಮಳೆರಾಯನ ಆರ್ಭಟದಿಂದ ಮೊದಲೇ ಗಿರಾಕಿಗಳಲ್ಲದೇ ಪರಿತಪಿಸುತ್ತಿದ್ದ ಮಾಲೀಕರಿಗೆ ಈಗ ಸ್ಟಾಲ್‍ಗಳು ಮುರಿದು ಬಿದ್ದಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ.

ಕಳೆದ ಎರಡು ದಿನಗಳಿಂದ ಮೈಸೂರಿನಲ್ಲಿ ಸುರಿಯುತ್ತಿರುವ ಧಾರಕಾರ ಮಳೆ ದಸರಾ ಮಹೋತ್ಸವದ ಕಾರ್ಯಕ್ರಮಗಳಿಗೆ ಹಾಗೂ ಪ್ರೇಕ್ಷಕರ ಖುಷಿಗೆ ತಣ್ಣೀರೆರೆಚಿದೆ. ಇಂದು ಕೂಡ ಭಾರೀ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಸೂಚನೆ ನೀಡಿದ್ದು, ಮಳೆರಾಯ ತನ್ನ ಆರ್ಭಟ ಮುಂದುವರೆಸಿದರೆ ದಸರಾ ಕಾರ್ಯಕ್ರಮಗಳು ಸಂಪೂರ್ಣವಾಗಿ ವಿಫಲವಾಗುತ್ತವೆ.

 

Click to comment

Leave a Reply

Your email address will not be published. Required fields are marked *

Advertisement