ಚಿಕ್ಕಮಗಳೂರು: ಮಲೆನಾಡಲ್ಲಿ ವರುಣನ ಆರ್ಭಟ ಮುಂದುವರಿದಿದ್ದು, ಭಾರೀ ಮಳೆಯಿಂದ ಜನ ಜೀವನ ತತ್ತರವಾಗಿದೆ.
ಚಿಕ್ಕಮಗಳೂರಿನ ಮೂಡಿಗೆರೆಯ ದಾರದಹಳ್ಳಿ, ಬೈರಾಪುರ, ಬಣಕಲ್, ಕೊಟ್ಟಿಗೆಹಾರ, ಜಾವಳಿ, ಸುತ್ತಾಮುತ್ತ ಭಾರೀ ಮಳೆಯಾಗುತ್ತಿದೆ. ಮೂಡಿಗೆರೆ ತಾಲೂಕಿನ ಹನುಮನಹಳ್ಳಿಯಲ್ಲಿ ಎರಡು ಎಕರೆ ಪ್ರದೇಶದಲ್ಲಿ ಭೂಮಿ ಕುಸಿದಿದೆ. ಪರಿಣಾಮ 2 ಎಕರೆ ಕಾಫಿ ಸಂಪೂರ್ಣ ನಾಶವಾಗಿದೆ. ತಾರಾನಾಥ್ ಎಂಬವರಿಗೆ ಈ ತೋಟ ಸೇರಿದ್ದು, ಕಾಫಿ, ಮೆಣಸು, ಅಡಿಕೆ ಸಂಪೂರ್ಣ ಹಾನಿಯಾಗಿದೆ.
ಎನ್.ಆರ್.ಪುರ, ಶೃಂಗೇರಿ, ಕೊಪ್ಪ, ಚಿಕ್ಕಮಗಳೂರು ತಾಲೂಕಿನಲ್ಲೂ ಮಳೆಯಾಗುತ್ತಿದ್ದು, ಪರಿಣಾಮ ನದಿಗಳ ಹರಿವಿನ ಮಟ್ಟ ಹೆಚ್ಚಾಗಿದೆ. ತುಂಗಾ, ಭದ್ರಾ ಮತ್ತು ಹೇಮಾವತಿ ನದಿಗಳು ಮೈದುಂಬಿ ಹರಿಯುತ್ತಿದೆ. ಕುದುರೆಮುಖ, ಕಳಸ, ಸಂಸೆ, ಬಾಳೆಹೊಳೆ ವ್ಯಾಪ್ತಿಯಲ್ಲಿ ಭಾರೀ ಮಳೆಯಾಗುತ್ತಿದೆ. ಪರಿಣಾಮ ಹೆಬ್ಬಾಳೆ ಸೇತುವೆ ಮುಳುಗಡೆಗೆ ಇನ್ನೂ ಒಂದೇ ಅಡಿ ಬಾಕಿ ಇದೆ.
ಕಳಸ ಹೊರನಾಡಿನ ಸಂಪರ್ಕ ಕಲ್ಪಿಸುವ ಸೇತುವೆ ಇದಾಗಿದ್ದು, ಒಂದು ವೇಳೆ ಹೆಬ್ಬಾಳೆ ಸೇತುವೆ ಮುಳುಗಡೆಯಾದರೆ ಹೊರನಾಡು ಸಂಪರ್ಕ ಸಂಪೂರ್ಣ ಕಡಿತವಾಗುತ್ತದೆ. ಕಳೆದ ವರ್ಷ 17 ಬಾರಿ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿತ್ತು. ಕಳೆದ ಕೆಲ ದಿನಗಳಿಂದ ಮಲೆನಾಡು ಭಾಗದಲ್ಲಿ ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಜನರು ಪ್ರವಾಹದ ಭೀತಿಯಲ್ಲಿ ಜನರು ಜೀವಿಸುತ್ತಿದ್ದಾರೆ.
ಇತ್ತ ಪಶ್ಚಿಮ ಘಟ್ಟಗಳಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಅಪಾಯದ ಮಟ್ಟ ನೀರಿ ಮಲಪ್ರಭಾ ನದಿ ಹರಿಯುತ್ತಿದೆ. ಇದರಿಂದ ಮತ್ತೆ ರಾಮದುರ್ಗ ತಾಲೂಕಿನ ಹಲವು ಗ್ರಾಮಗಳು ಮುಳುಗಡೆ ಭೀತಿಯಿಂದ ಇದ್ದಾವೆ. ಈಗಾಗಲೇ ರಾಮದುರ್ಗ ತಾಲೂಕಿನ ಸುನ್ನಾಳ ಗ್ರಾಮದ ಒಳಗೆ ನೀರು ಬಂದಿದೆ. ಇದರಿಂದ ಮತ್ತೊಮ್ಮೆ ಗ್ರಾಮ ಮುಳುಗುವ ಆತಂಕದಲ್ಲಿ ಗ್ರಾಮಸ್ಥರು ತಾವಾಗಿಯೇ ಊರು ತೊರೆಯುತ್ತಿದ್ದಾರೆ.