ಬೆಂಗಳೂರು: ಗುರುವಾರ ನಗರದ ಸುತ್ತಮುತ್ತ ಭಾರೀ ಮಳೆಯಾಗಿದ್ದು, ರಾಷ್ಟ್ರೀಯ ಹೆದ್ದಾರಿ ರಸ್ತೆ ಜಲಾವೃತಗೊಂಡು ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿತ್ತು.
ಮಲ್ಲೇಶ್ವರಂ, ಸದಾಶಿವನಗರ, ಶೇಷಾದ್ರಿಪುರಂ, ಸ್ಯಾಂಕಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಇತ್ತ ಮೆಜೆಸ್ಟಿಕ್, ವಿಧಾನಸೌಧ, ಶಿವಾಜಿನಗರ, ಹಲಸೂರು, ಕೆ.ಆರ್.ಮಾರ್ಕೆಟ್ ಸೇರಿದಂತೆ ಹಲವೆಡೆ ಭಾರೀ ಮಳೆಯಿಂದಾಗಿ ಟ್ರಾಫಿಕ್ ಜಾಮ್ ಕೂಡ ಉಂಟಾಗಿತ್ತು.
ಬೆಂಗಳೂರು ಹೊಸೂರು ರಾಷ್ಟ್ರೀಯ ಹೆದ್ದಾರಿ 7ರ ಎಲೆಕ್ಟ್ರಾನಿಕ್ ಸಿಟಿ ಸಮೀಪದ ವೀರಸಂದ್ರ ಸಿಗ್ನಲ್ ಬಳಿ ಮಳೆಯಿಂದ ನಾಲ್ಕೈದು ಅಡಿಯಷ್ಟು ಮಳೆನೀರು ರಸ್ತೆಯಲ್ಲಿ ನಿಂತು ಸಂಪೂರ್ಣ ಕೆರೆಯಂತಾಗಿತ್ತು. ವಾಹನ ಸವಾರರು ಹಾಗೂ ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಗಿದ್ದು, ಮಳೆನೀರು ರಸ್ತೆಯಲ್ಲಿ ನಿಂತಿರುವುದರಿಂದ ಕೆಲ ವಾಹನಗಳು ಕೆಟ್ಟು ಹೋಗಿದ್ದವು. ಇದರಿಂದ ಕಿಲೋಮೀಟರ್ ಗಟ್ಟಲೆ ಟ್ರಾಫಿಕ್ ಜಾಮ್ ಸಹ ಉಂಟಾಗಿ ವಾಹನ ಸವಾರರು ಪರದಾಟ ನಡೆಸುವಂತಾಗಿತ್ತು.
ಪ್ರತಿ ಬಾರಿ ಮಳೆ ಬಂದಾಗಲೂ ಸಹ ವೀರಸಂದ್ರ ಸಿಗ್ನಲ್ ಬಳಿ ರಸ್ತೆ ಜಲಾವೃತಗೊಂಡು ಕೆಲ ವಾಹನ ಸವಾರರು ಹಾಗೂ ಪಾದಚಾರಿಗಳು ಗುಂಡಿಗಳು ಕಾಣದೆ ಬಿದ್ದು ಕೈ ಕಾಲು ಮುರಿದುಕೊಂಡಿರುವಂತಹ ಘಟನೆಗಳು ಸಹ ಸಾಕಷ್ಟು ಬಾರಿ ನಡೆದಿವೆ. ಮಳೆ ಬಿದ್ದು ಗಂಟೆಗಳು ಕಳೆದರೂ ಮಳೆ ನೀರು ಹೊರ ಹೋಗದೆ ರಸ್ತೆಯಲ್ಲಿ ನಿಲ್ಲುತ್ತದೆ. ಹೀಗಾಗಿ ಕೂಡಲೇ ಮಳೆ ನೀರು ರಸ್ತೆಯಲ್ಲಿ ನಿಲ್ಲದೆ ಹೊರ ಹೋಗುವ ಹಾಗೆ ಮಾಡಬೇಕೆಂಬುದು ವಾಹನ ಸವಾರರು ಆಗ್ರಹಿಸಿದ್ದರು.