ಉಡುಪಿ: ಜಿಲ್ಲೆಯಲ್ಲಿ ಮಳೆ ನಿಂತರೂ ನೆರೆ ತಗ್ಗಿಲ್ಲ. ಪರಿಣಾಮ ಕುಂದಾಪುರ ತಾಲೂಕಿನ ಕಂಡ್ಲೂರು ಮತ್ತು ಬೈಂದೂರಲ್ಲಿ ತಗ್ಗು ಪ್ರದೇಶಗಳಲ್ಲಿ ನೀರು ಕಡಿಮೆಯಾಗಿಲ್ಲ.
ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಉಪ್ಪೂರಲ್ಲಿ ಕೂಡಾ ನೆರೆ ನೀರು ನಿಧಾನಕ್ಕೆ ತಗ್ಗುತ್ತಿದೆ. ಆದರೆ ತೋಟ ಹಾಗು ಗದ್ದೆಗಳಲ್ಲಿ ನೆರೆ ನೀರು ಕಡಿಮೆಯಾಗಿಲ್ಲ. ತಗ್ಗು ಪ್ರದೇಶದ ಒಳ ರಸ್ತೆಗಳ ಮೇಲೆಲ್ಲ ಮಳೆ ನೀರು ಹರಿಯುತ್ತಿದೆ. ಕೆಲವೆಡೆ ಬದಲಿ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯ ಕಾರ್ಕಳ, ಹೆಬ್ರಿಯಲ್ಲೂ ತುಂಬಿ ಹರಿಯುತ್ತಿದೆ.
ಕಳೆದ ಎಂಟು ಗಂಟೆಯಿಂದ ಜಿಲ್ಲೆಯಲ್ಲಿ ಮಳೆ ಸಂಪೂರ್ಣ ನಿಂತಿದ್ದರೂ ಕಳೆದೆರಡು ದಿನದಿಂದ ಸುರಿದ ರಭಸದ ಮಳೆಯ ನೀರಿನ ಮಟ್ಟ ಕಡಿಮೆಯಾಗಿಲ್ಲ. ಮುಂದಿನ ನಾಲ್ಕು ದಿನಗಳ ಕಾಲ ಕರಾವಳಿಯಾದ್ಯಂತ ಮಳೆ ಭಾರೀ ಬೀಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಆದ್ದರಿಂದ ಮೀನುಗಾರರಿಗೆ- ನೆರೆ ಪೀಡಿತ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ಸಂದೇಶ ರವಾನಿಸಿದೆ.
ಕಳೆದ ಮೂರು ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ನದಿಗಳೆಲ್ಲಾ ತುಂಬಿ ಹರಿದಿದೆ. ಚಿಕ್ಕಮಗಳೂರು- ಶಿವಮೊಗ್ಗದ ತಪ್ಪಲಿನಲ್ಲಿ ಬಿದ್ದ ಭಾರೀ ಮಳೆಯಿಂದ ಕುಬ್ಜಾ ನದಿ ತುಂಬಿ ತುಳುಕಿದೆ. ಕುಂದಾಪುರ ತಾಲೂಕಿನ ಕಮಲಶಿಲೆ ಬ್ರಾಹ್ಮಿ ದುರ್ಗಾಪರಮೇಶ್ವರಿ ದೇವಸ್ಥಾನದ ಒಳಗೆ ನದಿ ನೀರು ನುಗ್ಗಿತ್ತು. ಕಮಲಶಿಲೆ ದುರ್ಗಾಪರಮೇಶ್ವರಿ ದೇವಿಯನ್ನು ಕುಬ್ಜಾ ನದಿ ನೀರು ತೋಯಿಸಿದೆ. ಪ್ರತೀ ವರ್ಷ ವಾಡಿಕೆಯಂತೆ ಗರ್ಭಗುಡಿಗೆಯೊಳಗೆ ನೀರು ಬಂದಿದೆ. ದೇವಸ್ಥಾನ ಜಲಾವೃತ ಆಗುತ್ತಿದ್ದಂತೆ ದುರ್ಗಾಪರಮೇಶ್ವರಿ ದೇವಿಗೆ ವಿಶೇಷ ಆರತಿ ಬೆಳಗಲಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv