Districts
ಬಿರುಗಾಳಿ ಸಹಿತ ಜೋರು ಮಳೆಗೆ ಹಲವೆಡೆ ಅವಾಂತರ

ಕೋಲಾರ: ಜಿಲ್ಲೆಯಲ್ಲಿ ಗುಡುಗು, ಬಿರುಗಾಳಿ ಸಹಿತ ಜೋರು ಮಳೆಯಾಗಿದ್ದು, ಹಲವೆಡೆ ಅವಾಂತರ ಸೃಷ್ಟಿಯಾಗಿದೆ.
ಸೋಮವಾರ ರಾತ್ರಿ ಕೋಲಾರ, ಬಂಗಾರಪೇಟೆ ಮತ್ತು ಮಾಲೂರು ಸೇರಿದಂತೆ ಹಲವೆಡೆ ಗುಡುಗು ಸಹಿತ ಭಾರೀ ಮಳೆಯಾಗಿದೆ. ಇದರಿಂದ ಜಿಲ್ಲೆಯಲ್ಲಿ ಹಲವಡೆ ಅಪಾರ ಬೆಳೆ ನಷ್ಟವಾಗಿದ್ದು, ರೈತರು ತಾವು ಬೆಳೆದ ಬೆಳೆ ನಾಶವಾಗಿರುವುದರಿಂದ ಕಣ್ಣೀರು ಹಾಕುತ್ತಿದ್ದಾರೆ.
ಕೋಲಾರದ ಹಲವೆಡೆ ವಿದ್ಯುತ್ ದೀಪಗಳು ರಸ್ತೆಗಳ ಮಧ್ಯೆಯೇ ಬಿದ್ದಿದ್ದು, ಅಪಾರ ನಷ್ಟವಾಗಿದೆ. ಇನ್ನೂ ಬಿರುಗಾಳಿಗೆ ಬೃಹತ್ ಮರಗಳು ಮನೆಯ ಮೇಲೆ ಬಿದ್ದಿದ್ದರಿಂದ ಮನೆಯ ಮೇಲ್ಛಾವಣಿಗಳು ಹಾಳಾಗಿವೆ. ಇತ್ತ ರಸ್ತೆಯಲ್ಲೂ ಮರಗಳು ಧರೆಗುರುಳಿದ್ದು, ರಸ್ತೆಗಳಲ್ಲಿ ಬಿದ್ದಿರುವ ಮರಗಳ ತೆರವಿಗೆ ನಗರಸಭೆ ಮತ್ತು ಬೆಸ್ಕಾಂ ಸಿಬ್ಬಂದಿ ನಿರತರಾಗಿದ್ದಾರೆ.
ಕೆಲವು ದಿನಗಳಿಂದ ಕೋಲಾರ, ಮಂಡ್ಯ, ದಕ್ಷಿಣ ಕನ್ನಡ, ಚಿಕ್ಕಮಗಳೂರು, ಬೆಂಗಳೂರು ಸೇರಿದಂತೆ ಹಲವೆಡೆ ಸಂಜೆ ವೇಳೆ ಧಾರಾಕಾರ ಮಳೆಯಾಗುತ್ತಿದೆ. ಬೆಂಗಳೂರಿನಲ್ಲಿ ಅಪಾರ ಮಳೆಯಾಗಿ ತಗ್ಗು ಪ್ರದೇಶಗಳ ಮನೆಗಳಿಗೆ ನೀರು ನುಗ್ಗಿ ಜನರ ಜೀವನ ಅಸ್ತವ್ಯಸ್ಥವಾಗಿತ್ತು. ಇತ್ತೀಚೆಗೆ ಉತ್ತರ ಭಾರತದ ಕೆಲ ರಾಜ್ಯಗಳಲ್ಲಿ ಭಾರೀ ಮಳೆಯಾಗಿದ್ದು, ಅಕಾಲಿಕ ಮಳೆಗೆ ಸುಮಾರು 38 ಮಂದಿ ಮೃತಪಟ್ಟಿದ್ದರು.
