ಕಾರವಾರ: ರಾತ್ರಿಯಿಂದ ಬೆಳಗ್ಗಿನವರೆಗೆ ಸುರಿದ ಅಬ್ಬರದ ಮಳೆಯಿಂದಾಗಿ ಕಾರವಾರ ನಗರದ ಅರಗಾದಲ್ಲಿರುವ ಕದಂಬ ನೌಕಾನೆಲೆಯ ಸುತ್ತಮುತ್ತ ಮಳೆ ನೀರು ಆವರಿಸಿದ್ದು, ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು.
ನಿರಂತರ ಮಳೆಯಿಂದಾಗಿ ನೌಕಾನೆಲೆ ಭಾಗದ 10 ಎಕರೆಗೂ ಹೆಚ್ಚು ಪ್ರದೇಶಗಳು ನೀರಿನಿಂದ ಆವೃತವಾಗಿದೆ. ಮಳೆಯಿಂದಾಗಿ ರಾಷ್ಟ್ರೀಯ ಹೆದ್ದಾರಿ 66ರಲ್ಲಿಯೂ ಸಹ ನೀರು ಹರಿದಿದ್ದು, ಅಲ್ಪ ಸಮಯ ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿತ್ತು. ಕಳೆದ 24 ಗಂಟೆಯಲ್ಲಿ ಜಿಲ್ಲೆಯಲ್ಲಿ ವ್ಯಾಪಕ ಮಳೆಯಾಗಿದ್ದು, 54 ಮಿಲೀ ಮೀಟರ್‌ಗೂ ಹೆಚ್ಚು ಮಳೆಯಾಗಿದೆ.
ಇತ್ತ ಕಳೆದ ಎರಡು ಮೂರು ದಿನಗಳಿಂದ ಬಿಡುವಿನ ಬಳಿಕ ವಾಣಿಜ್ಯ ನಗರಿ ಹುಬ್ಬಳ್ಳಿ ಸೇರಿದಂತೆ ಜಿಲ್ಲೆಯ ಬಹುತೇಕ ಭಾಗಗಳಲ್ಲಿ ಮಳೆಯಾಗಿದೆ. ಆದರೆ ಕಳೆದ ದಿನ ಸಂಜೆ ಸುರಿದ ಮಳೆ ಜೋರಾಗಿತ್ತು. ಬಿಟ್ಟು ಬಿಡದೆ ಸುರಿಯುತ್ತಿರುವ ಮಳೆಯಿಂದ ಜನಜೀವನ ಅಸ್ತವ್ಯಸ್ತವಾಗಿತ್ತು. ಆದರೆ ಜಿಲ್ಲೆಯ ಬಹುತೇಕ ರೈತರು ಬಿತ್ತನೆ ಕಾರ್ಯ ಆರಂಭ ಮಾಡಿದ್ದು, ಮಳೆಯ ಆಗಮನದಿಂದ ರೈತರ ಮುಖದಲ್ಲಿ ಮಂದಹಾಸ ಮೂಡಿದೆ.
ಕಾಫಿನಾಡ ಮಲೆನಾಡು ಭಾಗದಲ್ಲಿ ಶುಕ್ರವಾರ ಸಂಜೆಯಿಂದ ಧಾರಾಕಾರವಾಗಿ ಮಳೆಯಾಗಿದೆ. ಪಶ್ಚಿಮ ಘಟ್ಟಗಳ ಸಾಲಲ್ಲೂ ಎಡಬಿಡದೆ ಮಳೆ ಸುರಿದಿದೆ. ಮೂಡಿಗೆರೆ ತಾಲೂಕಿನ ಕೊಟ್ಟಿಗೆಹಾರ, ಚಾರ್ಮಾಡಿ, ಕುದುರೆಮುಖ, ಶೃಂಗೇರಿ, ಕೆರೆಕಟ್ಟೆ ಸುತ್ತಮುತ್ತ ಭಾರೀ ಮಳೆಯಾಗಿದೆ. ಧಾರಾಕಾರ ಮಳೆಯಿಂದ ತುಂಗಾ, ಭದ್ರಾ, ಹೇಮಾವತಿ ನದಿಗಳ ಹರಿವಿನ ಮಟ್ಟ ಹೆಚ್ಚಳವಾಗಿದೆ.