ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ದಿಢೀರ್ ಆಗಿ ಬಂದ ಮಳೆ ನಗರದ ಹಲವು ಕಡೆ ಸಾಕಷ್ಟು ಅವಾಂತರ ಸೃಷ್ಟಿ ಮಾಡಿದೆ. ವಸಂತ ನಗರ ಸೇರಿ ಹಲವೆಡೆ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ಇತ್ತ ತಗ್ಗು ಪ್ರದೇಶದಲ್ಲಿದ್ದ ಅಂಡರ್‌ಪಾಸ್‌ಗಳು ಜಲಾವೃತವಾಗಿದೆ.
ಮಲ್ಲೇಶ್ವರಂ, ರಾಜಾಜಿನಗರ, ಉತ್ತರಹಳ್ಳಿ, ಕತ್ರಿಗುಪ್ಪೆ, ಇಟ್ಟುಮಡು ಸೇರಿದಂತೆ ಹಲವೆಡೆ ಧಾರಾಕಾರ ಮಳೆಯಾಗಿದೆ. ಇದರಿಂದ ವಾಹಸ ಸವಾರರು ಪರದಾಡುವಂತಾಗಿದೆ. ಬಿಬಿಎಂಪಿ ಇತ್ತೀಚೆಗಷ್ಟೇ ಸಂಪೂರ್ಣಗೊಳಿಸಿ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಟ್ಟಿರುವ ಓಕಳಿಪುರಂ ಅಂಡರ್ ಪಾಸ್ ಕೆರೆಯಂತಾಗಿದ್ದು, ವಾಹನ ಸವಾರರು ಪರದಾಡುವಂತ ಪರಿಸ್ಥಿತಿ ನಿರ್ಮಾಣವಾಗಿದೆ. ಅಂಡರ್ ಪಾಸ್ ಕೆರೆಯಂತಿದ್ದ ನೀರಿನಲ್ಲಿ ಹೋಗುವ ಬಹುತೇಕ ಆಟೋಗಳು ಹಾಗೂ ದ್ವಿಚಕ್ರ ವಾಹನಗಳಲ್ಲಿ ನೀರು ತುಂಬಿಕೊಂಡು ಪರದಾಡುವಂತ ದೃಶ್ಯ ಪಬ್ಲಿಕ್ ಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.
ಪಾಲಿಕೆಯ ಅವೈಜ್ಞಾನಿಕ ಕೆಲಸಕ್ಕೆ ವಾಹನ ಸವಾರರು ಹಿಡಿಶಾಪ ಹಾಕುತ್ತಿದ್ದಾರೆ. ಅಂಡರ್ ಪಾಸ್‍ನಲ್ಲಿ ಮಳೆಗಾಲದಲ್ಲಿ ನೀರು ತುಂಬಿಕೊಂಡರೆ ಕೆಳಗಿನ ನಂಬರಿಗೆ ಕರೆ ಮಾಡಿ ತಿಳಿಸಿ ಎಂದು ಅಂಡರ್ ಪಾಸ್ ಗೋಡೆ ಮೇಲೆ ಬರೆದಿಟ್ಟು ಬಿಬಿಎಂಪಿ ಅಧಿಕಾರಿಗಳು ಕೈತೊಳೆದುಕೊಂಡಿದ್ದಾರೆ. ಪಾಲಿಕೆ ಹಾಕಿರುವ ನಂಬರಿಗೆ ಸಾರ್ವಜನಿಕರು ಕರೆ ಮಾಡಿದರೆ ಸಂಬಂಧಪಟ್ಟವರು ಯಾರು ಕೂಡ ಸಮಪರ್ಕವಾಗಿ ಸ್ಪಂದಿಸುವುದಿಲ್ಲ ಎಂದು ವಾಹನ ಸವಾರರು ಆರೋಪಿಸಿದ್ದಾರೆ.