ಮಡಿಕೇರಿ: ಕೊಡಗಿನಲ್ಲಿ ಮರಣ ಮಳೆಯ ಅಬ್ಬರ ನಿಲ್ತಾನೇ ಇಲ್ಲ. ವರುಣನ ಅಬ್ಬರದಿಂದ ಗುಡ್ಡ ಕುಸಿಯೋದು ನಿಂತಿಲ್ಲ. ನಿಂತ ನೆಲ ಬಿರಿಯುತ್ತಿದೆ. ತಿನ್ನಲು ಆಹಾರವಿಲ್ಲ. ಕಾಲಡಿಯಲ್ಲಿ ನೀರಿದ್ರೂ ಕುಡಿಯೋ ನೀರಿಗಾಗಿ ಪರದಾಟ. ಕರೆಂಟೂ ಇಲ್ಲ. ಕೊಡವರ ಬದುಕಲ್ಲಿ ಕತ್ತಲು ಆವರಿಸಿದೆ. ಹೌದು ಮಹಾ ರಣಮಳೆಗೆ ಮಂಜಿನ ನಗರಿ ಮಡಿಕೇರಿ ಅಕ್ಷರಶಃ ತತ್ತರಿಸಿಹೋಗಿದೆ.
ಮರಣ ಮಳೆಗೆ ಸಾವನ್ನಪ್ಪಿದವರ ಸಂಖ್ಯೆ ಏಳಕ್ಕೇರಿದೆ. ನೂರಾರು ಮಂದಿ ಅಪಾಯದಲ್ಲಿ ಸಿಲುಕಿದ್ದಾರೆ. ಭೋರ್ಗರೆಯುತ್ತಿರೋ ನದಿಗಳು, ಮನೆ, ಶಾಲೆ ತೋಟ, ರಸ್ತೆ ಹೀಗೆ ಎಲ್ಲವನ್ನ ಆಪೋಷನ ತೆಗೆದುಕೊಳ್ತಿವೆ. ಮಳೆಯಿಂದ ಸಂಪರ್ಕ ಕಳೆದುಕೊಂಡಿದ್ದ 3 ಸಾವಿರಕ್ಕೂ ಹೆಚ್ಚು ಮಂದಿಯನ್ನು ರಕ್ಷಿಸಲಾಗಿದೆ. 31 ಕಡೆ ಗಂಜಿಕೇಂದ್ರ ತೆರೆಯಲಾಗಿದ್ದು, 10ಕ್ಕೂ ಹೆಚ್ಚು ಗ್ರಾಮಗಳು ಖಾಲಿಯಾಗಿದೆ. 845 ಮನೆಗಳಿಗೆ ಹಾನಿಯಾಗಿವೆ ಎಂದು ತಿಳಿದು ಬಂದಿದೆ.
Advertisement
Advertisement
ಸೋಮವಾರಪೇಟೆಯ ಮುಕ್ಕೋಡ್ಲು ಗ್ರಾಮವಂತೂ ವರುಣನ ಅಬ್ಬರಕ್ಕೆ ಹೈರಾಣಾಗಿದೆ. ಗಂಟೆಗಂಟೆಗೂ ಗುಡ್ಡ ಕುಸಿಯುತ್ತಿದೆ. ಗುಡ್ಡದ ಜೊತೆ ಮನೆಗಳು ಧರಾಶಾಹಿಯಾಗ್ತಿದೆ. ಇಡೀ ಗ್ರಾಮಕ್ಕೆ ಗ್ರಾಮವೇ ನದಿಯಂತೆ ಭಾಸವಾಗ್ತಿದೆ. ಮಕ್ಕಂದೂರು, ಕಾಡನಕೊಲ್ಲಿ, ಮಂದಲಪಟ್ಟಿ, ಕಾಟಿಕೇರಿ, ಮಕ್ಕಳಗುಡಿಯಲ್ಲಿ ಗುಡ್ಡಗಳ ಕುಸಿತ ಮುಂದುವರೆದಿದೆ. ಗುಡ್ಡದ ಕೆಳಗಿನ ಕಟ್ಟಡಗಳು ಭೂಸಮಾಧಿಯಾಗ್ತಿವೆ. ಕಾಡುಗಳು ನೆಲಸಮವಾಗ್ತಿವೆ.
Advertisement
ಹೆಚ್ಚುತ್ತಲೇ ಇರೋ ಪ್ರವಾಹದಿಂದ ಹಲವು ಹಳ್ಳಿಗಳ ಬಾಹ್ಯ ಜಗತ್ತಿನ ಸಂಪರ್ಕ ಕಡಿತವಾಗಿದೆ. ಯುದ್ಧೋಪಾದಿಯಲ್ಲಿ ರಕ್ಷಣಾ ಕಾರ್ಯಾಚರಣೆ ನಡೆಯುತ್ತಿದೆ. ಬಿರು ಮಳೆಯ ನಡುವೆಯೂ ಕಾಟಿಕೇರಿಯಲ್ಲಿ ಸಿಲುಕಿದ್ದವರ ಪೈಕಿ 200 ಜನರನ್ನ ರಕ್ಷಿಸಲಾಗಿದೆ. ತಂತಿತಾಲ, ಹಟ್ಟಿಹೊಳೆ, ಎಮ್ಮೆತಾಳ, ಮೇಘತಾಳ ಗ್ರಾಮಗಳಲ್ಲಿ ಸಿಲುಕಿದ್ದ 80 ಜನರನ್ನ ರಕ್ಷಣೆ ಮಾಡಲಾಗಿದೆ. ಅಪಾಯದ ಅಂಚಿನಲ್ಲಿದ್ದ ಮನೆಗಳ ಜನರನ್ನು ಸ್ಥಳಾಂತರಿಸಲಾಗಿದೆ. ನಿರಾಶ್ರಿತ ಶಿಬಿರಗಳಲ್ಲಿ ಸಾವಿರಾರು ಮಂದಿ ರಕ್ಷಣೆ ಪಡೆದಿದ್ದಾರೆ.
Advertisement
ಕೊಡಗಿನ ಇಂದಿರಾ ನಗರದಲ್ಲಿ ಮನೆಗಳ ಮೇಲೆ ಗುಡ್ಡು ಕುಸಿದಿದೆ. ಕ್ಷಣ ಕ್ಷಣಕ್ಕೂ ಗುಡ್ಡ ಕೆಳಗೆ ಜಾರುತ್ತಲೆ ಇದೆ. ಮಕ್ಕಂದೂರಿಗೆ ಹೋಗೋ ರಸ್ತೆಯಲ್ಲಿ ದೊಡ್ಡ ದೊಡ್ಡ ಮರಗಳೇ ನೆಲಕ್ಕುರುಳ್ತಿವೆ. ರಸ್ತೆ ಸಂಚಾರ ಬಂದ್ ಆಗಿದೆ. ಕುಶಾಲನಗರ-ಹಾಸನ ಸಂಚಾರ ಬಂದ್ ಆಗಿದೆ. ಗಾಳಿಬೀಡಿನ ಕಾಲೂರು-ಮುಗಿಲುಪೇಟೆ, ನಾಪೋಕ್ಲು- ಮಡಿಕೇರಿ ಸಂಪರ್ಕ ಕಟ್ ಆಗಿದೆ. ಮಡಿಕೇರಿಯಲ್ಲಿ ಐದು ಕಡೆ ನಿರಾಶ್ರಿತರಿಗೆ ಶಿಬಿರ ಮಾಡಲಾಗಿದೆ. ವೃದ್ಧರು, ಮಕ್ಕಳು, ಮಹಿಳೆಯರು ಆಶ್ರಯ ಪಡೆದಿದ್ದಾರೆ. ಹಾನಿ ಏನಾಗಿದೆಯೋ ಏನೋ ಆದ್ರೆ ನಮ್ ಜೀವ ಉಳಿದಿದ್ದೇ ಹೆಚ್ಚು.. ಮನೆಗಳನ್ನ ಬಿಟ್ಟು ಗಂಜಿ ಕೇಂದ್ರಕ್ಕೆ ಬಂದಿದ್ದೇವೆ ಅಂತಾ ಸಂತ್ರಸ್ತರು ಗೋಳಾಡ್ತಿದ್ದಾರೆ. ಮುಕ್ಕೋಡ್ಲು ಮತ್ತು ಇಗ್ಗೋಡ್ಲು ಗ್ರಾಮಗಳಲ್ಲಿ ರಕ್ಷಣಾ ಕಾರ್ಯಾಚರಣೆ ಭರದಿಂದ ಸಾಗಿದೆ. ಸೇನಾಪಡೆಯ ಯೋಧರು ಜೀವದ ಹಂಗು ತೊರೆದು ಸಂತ್ರಸ್ತರ ನೆರವಿಗೆ ಧಾವಿಸಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv