ಬೆಂಗಳೂರು: ರಾಜ್ಯಾದ್ಯಂತ ಮಳೆರಾಯನ ಅಬ್ಬರ ಮತ್ತಷ್ಟು ಜೋರಾಗಿದೆ. ಕರಾವಳಿ, ಮಲೆನಾಡು ಜನರಿಗೆ ಸಾಕು ಅನ್ನಿಸುವಷ್ಟು ಮಳೆಯಾಗುತ್ತಿದ್ದರೆ, ಬಯಲು ಸೀಮೆಯ ಜನರಲ್ಲಿ ಖುಷಿಯೋ ಖುಷಿ. ಯಾಕಂದ್ರೆ ಎಲ್ಲಾ ಡ್ಯಾಮ್‍ಗಳಿಗೂ ಜೀವಕಳೆ ಬಂದಿದೆ.
124.80 ಅಡಿ ಸಾಮರ್ಥ್ಯದ ಕೆಆರ್ ಎಸ್‍ನಲ್ಲೀಗ 121.40 ಅಡಿ ನೀರು ಬಂದಿದ್ದು, ಭರ್ತಿಗೆ ಮೂರು ಅಡಿ ಬಾಕಿ ಇದೆ. ಹೇಮಾವತಿಗೂ 3 ಅಡಿ ಬಾಕಿಯಿದ್ದು, ಎರಡು ಜಲಾಶಯಗಳು ಇವತ್ತೇ ಬಹುತೇಕ ತುಂಬಿಕೊಳ್ಳುವ ಸಾಧ್ಯತೆ ಇದೆ. ಹೀಗಾಗಿ ನದಿ ತಟದ ಜನರಿಗೆ ಪ್ರವಾಹದ ಮುನ್ನೆಚ್ಚರಿಕೆ ನೀಡಲಾಗಿದೆ.
Advertisement
Advertisement
ಕಬಿನಿ ಜಲಾಶಯದಿಂದ 45 ಸಾವಿರ ಕ್ಯೂಸೆಕ್ ನೀರನ್ನು ಹೊರಬಿಡಲಾಗುತ್ತಿದ್ದು, ಕಪಿಲಾ ನದಿ ಉಕ್ಕಿ ಹರಿಯುತ್ತಿದೆ. ನಂಜನಗೂಡಲ್ಲಿರುವ ಕಪಿಲಾ ನದಿ ಅಕ್ಕ-ಪಕ್ಕದ ಹಳ್ಳಿಗಳಲ್ಲಿ ಪ್ರವಾಹ ಉಂಟಾಗಿದೆ. ಮನೆಗಳು ಜಲಾವೃತಗೊಂಡಿದ್ದು, ಸ್ಥಳೀಯರು ಮನೆ ತೊರೆದು ಸಾಮಾನು ಸರಂಜಾಮುಗಳೊಂದಿಗೆ ಸುರಕ್ಷಿತ ಪ್ರದೇಶಗಳಿಗೆ ತೆರಳುತ್ತಿದ್ದಾರೆ. ಅತ್ತ, ಮಹಾರಾಷ್ಟ್ರದಲ್ಲಿ ವಿಪರೀತ ಮಳೆ ಆಗುತ್ತಿರೋ ಕಾರಣ ಕೃಷ್ಣಾನದಿಗೆ ಮತ್ತಷ್ಟು ನೀರು ಹರಿದು ಬಂದಿದೆ. ಚಿಕ್ಕೋಡಿ ಸುತ್ತಮುತ್ತ ಪ್ರವಾಹ ಪರಿಸ್ಥಿತಿ ನಿರ್ಮಾಣವಾಗಿದೆ.
Advertisement
ಶಿವಮೊಗ್ಗದ ತೀರ್ಥಹಳ್ಳಿ ತಾಲೂಕಿನಾದ್ಯಂತ ಭಾರೀ ಮಳೆಯಾಗಿದೆ. ಮಾಲತಿ ನದಿ ತುಂಬಿ ಹರಿಯುತ್ತಿದೆ. ಗುಡ್ಡೇಕೇರಿ- ಬಿದರಗೋಡು ರಸ್ತೆ ಮೇಲೆ ಮೂರು ಅಡಿ ನೀರು ನಿಂತಿದ್ದು, ಶೃಂಗೇರಿ-ತೀರ್ಥಹಳ್ಳಿ ಸಂಪರ್ಕ ಬಂದ್ ಆಗಿದೆ. ಗ್ರಾಮೀಣ ಪ್ರದೇಶದ ಜನ ಜೀವನ ಅಸ್ತವ್ಯಸ್ತವಾಗಿದೆ. ಇನ್ನು ಆಗುಂಬೆ ಘಾಟ್‍ನಲ್ಲಿ ಮತ್ತೆ ಭೂ ಕುಸಿತವಾಗಿದೆ. ಆಗುಂಬೆ ಸನ್ ಸೆಟ್ ಪಾಯಿಂಟ್ ಬಳಿ ರಸ್ತೆ ಪಕ್ಕದಲ್ಲಿ ಭೂ ಕುಸಿದಿದ್ದು, ಸೂರ್ಯಾಸ್ತ ವೀಕ್ಷಣೆಗೆ ಸಾರ್ವಜನಿಕರಿಗೆ ನಿಷೇಧ ಹೇರಿದ್ದಾರೆ. ಚಿಕ್ಕಮಗಳೂರಿನಲ್ಲಿ ಚಿಕ್ಕ ಆಣೆಕಟ್ಟುಗಳೆಲ್ಲಾ ಭರ್ತಿ ಆಗಿದ್ದು, ರಸ್ತೆ, ಸೇತುವೆ, ಮನೆ ಗೋಡೆ, ಗುಡ್ಡಗಳೆಲ್ಲಾ ಕುಸಿಯುತ್ತಿವೆ.
Advertisement
ರಾಮನಗರದ ಹಲವೆಡೆ ಗಾಳಿ ಸಹಿತ ಧಾರಾಕಾರ ಮಳೆಯಾಗಿದೆ. ಚನ್ನಪಟ್ಟಣ, ಕನಕಪುರದಲ್ಲಿ ಸೇರಿ ಹಲವೆಡೆ ಮಳೆಯಾಗಿದ್ದು ರಸ್ತೆಯ ಮೇಲೆ ಮಳೆ ನೀರು ನಿಂತು ವಾಹನ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಅಲ್ಲದೇ ಮಳೆಯಿಂದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲ ಕಾಲ ಸಂಚಾರ ಅಸ್ತವ್ಯಸ್ತವಾಗಿ ದ್ವಿಚಕ್ರ ವಾಹನ ಸವಾರರು ಸಮಸ್ಯೆ ಅನುಭವಿಸಿದರು.
ಮಲೆನಾಡಿನಲ್ಲಿ ಸಾಕು ಅನ್ನುವಷ್ಟು ಮಳೆಯಾಗ್ತಿದ್ರೆ, ಬಿಸಿಲನಾಡು ರಾಯಚೂರು, ಧಾರವಾಡ, ಹಾವೇರಿಯಲ್ಲಿ ಮಾತ್ರ ವರುಣದೇವ ತನ್ನ ಕೃಪೆ ತೋರಿಲ್ಲ. ಉದ್ದು, ಹೆಸರು, ಎಳ್ಳು ಬಿತ್ತನೆ ಮಾಡಿದ್ದ ರೈತರು ಮೊಳಕೆ ಬಾರದೆ ನಷ್ಟ ಅನುಭವಿಸಿದ್ದಾರೆ. ಮೋಡಕವಿದ ವಾತಾವರಣವಿದ್ದರೂ ದೊಡ್ಡ ಮಳೆ ಬಾರದೆ ಕಂಗಾಲಾಗಿ ವಿಶೇಷ ಪೂಜೆಗಳನ್ನ ಮಾಡುತ್ತಿದ್ದಾರೆ. ಇತ್ತ ನವಲಗುಂದ ಪಟ್ಟಣದ ಬಿರಲಿಂಗೇಶ್ವರ ಯುವಕ ಮಂಡಳಿಯವರು ಮಳೆಗಾಗಿ ಕತ್ತೆಗಳ ಮದುವೆ ಮಾಡಿದ್ದಾರೆ.
ರಾಷ್ಟ್ರ ರಾಜಧಾನಿ ದೆಹಲಿಯಲ್ಲೂ ಭಾರೀ ಮಳೆಯಾಗಿದೆ. ಮಳೆ ರುದ್ರನರ್ತನಕ್ಕೆ ನಗರದ ರಸ್ತೆಗಳು, ತಗ್ಗು ಪ್ರದೇಶಗಳು ಸಂಪೂರ್ಣ ಜಲಾವೃತವಾಗಿದೆ. ವಸತಿ ಪ್ರದೇಶಗಳಲ್ಲಿ ನೀರು ನುಗ್ಗಿದ್ದು, ಜನರು ಪರದಾಡುತ್ತಿದ್ದಾರೆ. ಮಿಂಟೋ ಸೇತುವೆಯ ಅಡಿ ಮಳೆ ನೀರು ತುಂಬಿ ಹೋಗಿದೆ. ರಸ್ತೆಗಳು ಕೆರೆಯಂತಾಗಿದ್ದು, ಹಲವಾರು ಬಸ್‍ಗಳು ಮಳೆ ನೀರಿನಲ್ಲಿ ಮುಳುಗಿ ಹೋಗಿದೆ. ಸಂಚಾರ ಸಂಪೂರ್ಣ ಅಸ್ತವ್ಯಸ್ಯಗೊಂಡಿದೆ.