ಬೆಂಗಳೂರು: ಲೋಕಸಭಾ ಚುನಾವಣೆ ರಂಗೇರಿದ ಕಾವಲ್ಲೆ ಮಳೆರಾಯ ಭರ್ಜರಿಯಾಗಿ ಎಂಟ್ರಿ ಕೊಟ್ಟಿದ್ದಾನೆ. ಕಳೆದ ದಿನ ಗದಗ ಸೇರಿದಂತೆ ಸುತ್ತಮುತ್ತ ಸುರಿದ ಬಿರುಗಾಳಿ ಸಹಿತ ಮಳೆಗೆ ಜನಜೀವನ ಅಸ್ತವ್ಯಸ್ತಗೊಂಡಿದೆ.
ಗದಗ ನಗರದ ಹಳೆ ಬಸ್ ನಿಲ್ದಾಣದ ರಸ್ತೆ ಹಾಗೂ ಮಹಾಲಕ್ಷ್ಮಿ ಚಿತ್ರಮಂದಿರ ಬಳಿ ವಿವಿಧೆಡೆ ಅಂಗಡಿ ಮುಂಗಟ್ಟುಗಳಿಗೆ ಮಳೆ ಹಾಗೂ ಚರಂಡಿ ನೀರು ನುಗ್ಗಿದೆ. ಇದರಿಂದ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮಳೆನೀರು ಹೊರಹಾಕಲು ಅಂಗಡಿಕಾರರು ಕೆಲಕಾಲ ಹರಸಾಹಸ ಪಡಬೇಕಾಯಿತು. ಅಷ್ಟೇ ಅಲ್ಲದೇ ಕೆಲವಡೆ ಗಾಳಿಯ ರಭಸಕ್ಕೆ ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿರೋದಾಗಿ ವರದಿಯಾಗಿದೆ. ಈ ಮಳೆಯಿಂದ ಬಿಸಿಲಿನಲ್ಲಿ ಬೆಂದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದಂತಾಗಿದೆ.
Advertisement
Advertisement
ಬಳ್ಳಾರಿ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ಅಲಮಾಸಗೇರೆ ಗ್ರಾಮದಲ್ಲಿ ಆಲಿಕಲ್ಲು ಸಹಿತ ಭಾರೀ ಮಳೆಯಾಗಿದ್ದು, ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಮಳೆ ಸುರಿದಿದೆ. ಇತ್ತ ಯಾದಗಿರಿ ಜಿಲ್ಲೆಯಾದ್ಯಂತ ಧಾರಾಕಾರ ಮಳೆಯಾಗಿದ್ದು, ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಕಳೆದ ಒಂದು ಗಂಟೆ ಮಳೆರಾಯ ಅಬ್ಬರಿಸಿದ್ದಾರೆ. ಮಳೆಯ ಅಬ್ಬರಕ್ಕೆ ಸುರಪುರ ನಗರದ ಜನಜೀವನ ಅಸ್ತವ್ಯಸ್ತವಾಗಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
Advertisement
ವಾಣಿಜ್ಯನಗರಿ ಹುಬ್ಬಳ್ಳಿಯಲ್ಲಿ ಬಿಸಿಲಿನಿಂದ ಬೇಸತ್ತ ಜನತೆಗೆ ಮಳೆರಾಯ ತಂಪೆರೆದಿದ್ದಾನೆ. ಬುಧವಾರ ಸಂಜೆ ವೇಳೆ ಗಾಳಿ, ಗುಡುಗು ಮತ್ತು ಆಲಿಕಲ್ಲು ಸಮೇತ ಮಳೆಯಾಗಿದೆ. ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಆಲಿಕಲ್ಲು ಮಳೆಯಾಗಿದೆ. ಮಳೆರಾಯನ ಆಗಮನದಿಂದ ನಗರದ ಜನತೆ ಪರದಾಡುವಂತಾಗಿತ್ತು.
Advertisement
ಮಳೆರಾಯ ನಗರದ ಜನತೆಗೆ ಖುಷಿ ತಂದರೆ, ಮಾವಿನ ಬೆಳೆಗಾರರಲ್ಲಿ ಆತಂಕ ಸೃಷ್ಟಿಸಿದ್ದಾನೆ. ಆಲಿಕಲ್ಲು ಮಳೆಗೆ ಮಾವಿನ ಕಾಯಿಗೆ ಹಾನಿಯಾಗುತ್ತದೆ. ಜೊತೆಗೆ ಇಳುವರಿ ಕಡಿಮೆಯಾಗಲಿದೆ. ಮಳೆಯಿಂದ ರಸ್ತೆಯಲ್ಲಿ ನೀರು ತುಂಬಿಕೊಂಡು ಸಂಚಾರ ಅಸ್ತವ್ಯಸ್ತಗೊಂಡಿತ್ತು. ಉಣಕಲ್ ಕ್ರಾಸ್, ಹೊಸೂರು ಸರ್ಕಲ್ ಸೇರಿ ಹಲವು ಕಡೆ ಸಂಚಾರ ಅಸ್ತವ್ಯಸ್ತಗೊಂಡಿತ್ತು..