ಮಲೆನಾಡು, ಕರಾವಳಿ ಭಾಗಗಳಲ್ಲಿ ಮಳೆ ಅಬ್ಬರ- ಎಲ್ಲೆಲ್ಲಿ ಏನೇನಾಗಿದೆ..?

ಬೆಂಗಳೂರು: ಕರಾವಳಿಯಲ್ಲಿ ಭಾರೀ ಮಳೆಯಾಗ್ತಿದೆ. ಕುಮಾರಧಾರ ನದಿ ಉಕ್ಕಿ ಹರಿಯುತ್ತಿದೆ. ಚಿಕ್ಕಮಗಳೂರಿನಲ್ಲೂ ಮಳೆಗೆ ಹೆಬ್ಬಾಳೆ ಸೇತುವೆ ಮುಳುಗಿದೆ. ಉತ್ತರ ಕನ್ನಡದಲ್ಲಿ ಗುಡ್ಡ ಕುಸಿದಿದೆ. ಇದರ ನಡುವೆ ಡ್ಯಾಂಗಳಿಗೆ ಒಳಹರಿವಿನ ಪ್ರಮಾಣ ಹೆಚ್ಚಾಗಿದೆ.
ಪಶ್ಚಿಮಘಟ್ಟ, ಕರಾವಳಿ ಜಿಲ್ಲೆಗಳಲ್ಲಿ ಭಾರೀ ಮಳೆಯಾಗ್ತಿದೆ. ದಕ್ಷಿಣ ಕನ್ನಡದಲ್ಲಿ ಕಳೆದೊಂದು ವಾರದಿಂದ ನಿರಂತರ ಸುರಿದ ಮಳೆಗೆ ನದಿಗಳೆಲ್ಲಾ ತುಂಬಿ ಹರಿಯುತ್ತಿದೆ. ಪರಿಣಾಮ ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನ ಘಟ್ಟ ಕೂಡ ಮುಳುಗಡೆಯಾಗಿದೆ. ನದಿಯ ನೀರಿನ ಹರಿವಿನಲ್ಲಿ ಹೆಚ್ಚಳವಾಗಿದ್ದು ಭಕ್ತಾದಿಗಳು ಸ್ನಾನ ಘಟ್ಟದಲ್ಲಿ ನೀರಿಗೆ ಇಳಿಯದಂತೆ ಸೂಚಿಸಲಾಗಿದೆ. ಆದರೂ ಭಕ್ತಾದಿಗಳು ಸೂಚನೆಗಳನ್ನು ಲೆಕ್ಕಿಸದೇ ನೀರಿಗೆ ಇಳಿಯುತ್ತಿದ್ದಾರೆ. ಇನ್ನು ಬೆಳ್ತಂಗಡಿ ತಾಲೂಕಿನಾದ್ಯಂತ ಕಳೆದ ರಾತ್ರಿಯಿಡೀ ಮಳೆಯಾದ ಕಾರಣ ಇಂದು ತಾಲೂಕಿನಾದ್ಯಂತ ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿತ್ತು. ಜಿಲ್ಲೆಯಲ್ಲಿ ನಾಳೆಯವರೆಗೂ ಆರೆಂಜ್ ಅಲರ್ಟ್ ಇರಲಿದೆ. ಇದನ್ನೂ ಓದಿ: ಅಗ್ನಿಪಥ್ ಯೋಜನೆ- ಸಶಸ್ತ್ರಪಡೆಗಳಿಗೆ ಸೇರಲು 10 ಸಾವಿರ ಮಹಿಳಾ ಅಭ್ಯರ್ಥಿಗಳು ನೋಂದಣಿ
ಕುದುರೆಮುಖ ಸುತ್ತಮುತ್ತ ಭಾರೀ ಮಳೆಯಾಗುತ್ತಿದ್ದು ಕಳಸದ ಹೆಬ್ಬಾಳೆ ಸೇತುವೆ ಮುಳುಗಡೆಯಾಗಿದೆ. ಪರಿಣಾಮ ಕಳಸ- ಹೊರನಾಡು ದೇವಸ್ಥಾನ ಸಂಪರ್ಕ ಕಡಿತಗೊಂಡಿದೆ. ಸೇತುವೆ ಮುಳುಗಿದ್ದರಿಂದ ಎರಡೂ ಬದಿಯೂ ವಾಹನಗಳು ನಿಂತಿತ್ತು. ಉತ್ತರ ಕನ್ನಡದಲ್ಲೂ ಭಾರೀ ಮಳೆಯಾಗಿದ್ದು, ಹೊನ್ನಾವರದ ಹಳದಿಪುರದ ಬಗ್ರಾಣಿ ಕ್ರಾಸ್ ಬಳಿ ಮನೆಯ ಮೇಲೆ ಮರ ಬಿದ್ದು ಆರು ಜನರಿಗೆ ಗಾಯವಾಗಿದೆ. 10ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಧರೆಗುರುಳಿದೆ. ಇನ್ನು ಜೋಯಿಡಾ ತಾಲೂಕಿನ ಅನಮೋಡ ಘಟ್ಟ ಕುಸಿತವಾಗಿದೆ. ಗೋವಾ – ಅನಮೋಡ ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಆಗಿದೆ.
ಕಾವೇರಿ ಜಲಾನಯನ ಪ್ರದೇಶಗಳಲ್ಲಿ ಭಾರೀ ಮಳೆಯಾಗುತ್ತಿದ್ದು ಕೆಆರ್‍ಎಸ್ ಡ್ಯಾಂಗೆ ಒಂದೇ ರಾತ್ರಿಗೆ ಒಳಹರಿವಿನ ಪ್ರಮಾಣ ದುಪ್ಪಟ್ಟಾಗಿದೆ. 22,466 ಕ್ಯೂಸೆಕ್‍ನಷ್ಟು ಒಳಹರಿವು ಇದೆ. ಇಂದು ರಾತ್ರಿ ವೇಳೆಗೆ 50 ಸಾವಿರ ಕ್ಯೂಸೆಕ್ ಆಗುವ ಸಾಧ್ಯತೆ ಇದೆ. ಅಲ್ಲದೇ ಇದೇ ರೀತಿ ಮಳೆಬಿದ್ರೆ ಕೆಆರ್‍ಎಸ್ ಡ್ಯಾಂ ಇದೇ ತಿಂಗಳ ಅಂತ್ಯಕ್ಕೆ ಭರ್ತಿಯಾಗುವ ಸಾಧ್ಯತೆಯೂ ಇದೆ. ಇನ್ನು ಕಬಿನಿ ಜಲಾಶಯದ ಒಳಹರಿವು ಕೂಡ ಹೆಚ್ಚಳವಾಗಿದೆ. ಧಾರವಾಡ, ಹಾವೇರಿಯಲ್ಲೂ ಮಳೆಯಾಗಿದೆ.