ಮಂಡ್ಯ: ಇತ್ತೀಚೆಗಷ್ಟೇ ಸುರಿದ ಭಾರೀ ಮಳೆಗೆ ಬೆಂಗಳೂರಿನ ರಾಜಕಾಲುವೆಯಲ್ಲಿ ಶಾಂತಕುಮಾರ್ ಎಂಬವರು ಕೊಚ್ಚ ಹೋದ ಘಟನೆ ಮಾಸುವ ಮುನ್ನವೇ ಮಂಡ್ಯದಲ್ಲಿ ಮಳೆ ನೀರಿಗೆ ಮಹಿಳೆಯೊಬ್ಬರು ಕೊಚ್ಚಿ ಹೋದ ಘಟನೆ ಶನಿವಾರ ನಡೆದಿದೆ.
ಜಿಲ್ಲೆಯ ನಾಗಮಂಗಲ ತಾಲೂಕಿನ ಹೆತ್ತಗೋನಹಳ್ಳಿ ಗ್ರಾಮದಲ್ಲಿ ಈ ದುರಂತ ನಡೆದಿದೆ. ಗ್ರಾಮದ 45 ವರ್ಷದ ಲಕ್ಷ್ಮಮ್ಮ ಎಂಬವರೇ ಮಳೆ ನೀರಿನಲ್ಲಿ ಕೊಚ್ಚಿ ಹೋದ ಮಹಿಳೆ.
ಶನಿವಾರ ಸಂಜೆ ದನ, ಕರುಗಳಿಗೆ ಮೇವು ತರಲು ಜಮೀನಿನ ಬಳಿ ಹೋಗುವಾಗ ಹಳ್ಳವನ್ನು ದಾಟಿಕೊಂಡು ಹೋಗಿದ್ದಾರೆ. ಆದ್ರೆ ವಾಪಸ್ ಬರುವ ವೇಳೆಗೆ ಗ್ರಾಮದಲ್ಲಿ ಜೋರಾಗಿ ಮಳೆ ಆರಂಭವಾಗಿದೆ. ಇದರಿಂದಾಗಿ ಹಳ್ಳದಲ್ಲಿ ನೀರಿನ ಸೆಳೆತ ಜಾಸ್ತಿಯಾಗಿದೆ. ಇದರ ಅರಿವಿಲ್ಲದೆ ಲಕ್ಷ್ಮಮ್ಮ ಹಳ್ಳ ದಾಟಲು ಮುಂದಾದಾಗ ನೀರಿನ ಸೆಳೆತಕ್ಕೆ ಸಿಲುಕಿದ್ದಾರೆ.
ಕೂಡಲೇ ಗ್ರಾಮಸ್ಥರು ಮಹಿಳೆಯ ರಕ್ಷಣೆಗೆ ಮುಂದಾದ್ರು ಪ್ರಯೋಜನವಾಗಿಲ್ಲ. ಕೊನೆಗೆ ಅಗ್ನಿಶಾಮಕ ಸಿಬ್ಬಂದಿ ಮತ್ತು ಪೊಲೀಸರು ಸತತ ಮೂರು ಗಂಟೆ ಕಾರ್ಯಾಚರಣೆ ನಡೆಸಿದ ಬಳಿಕ ಸುಮಾರು 200 ಮೀಟರ್ ದೂರದಲ್ಲಿ ಮಹಿಳೆಯ ಶವ ಪತ್ತೆಯಾಗಿದೆ.
ಮೃತ ಮಹಿಳೆಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಈ ಸಂಬಂಧ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.