– ಚಾಮರಾಜನಗರದಲ್ಲಿ ಜಮೀನುಗಳು ಜಲಾವೃತ
ಬೆಂಗಳೂರು: ಕೋಲಾರದಲ್ಲಿ ಭಾರೀ ಮಳೆಯಿಂದಾಗಿ ಟೊಮೆಟೋ ಬೆಳಗಾರರಲ್ಲಿ ಆತಂಕ ಹೆಚ್ಚಾಗಿದೆ. ಜಿಲ್ಲೆಯಾದ್ಯಂತ ವರುಣನ ಆರ್ಭಟ ಹೆಚ್ಚಾಗಿದ್ದು, ಕೆರೆ ಕಟ್ಟೆಗಳು ಭರ್ತಿಯಾಗಿದೆ. ಇದರಿಂದಾಗಿ ಟೊಮೆಟೊ ಬೆಳೆಯಲ್ಲಿ ಅರ್ಧದಷ್ಟು ಹಣ್ಣುಗಳು ಕೊಳೆತುಹೋಗಿದೆ. ಅಲ್ಲದೆ ಮಳೆಯಿಂದಾಗಿ ವರ್ಷವೆಲ್ಲ ಬೆಳೆಯಬಹುದಾಗಿದ್ದ ತರಕಾರಿಗಳಿಗೆ ಈಗ ಶೀತಭೂಮಿ, ಹೂಜಿ ಕಾಟ, ಕೀಟ ಭಾದೆ ಮತ್ತು ತರಕಾರಿ ಗುಣಮಟ್ಟದಲ್ಲಿ ವ್ಯತ್ಯಯದಂತಹ ಸಮಸ್ಯೆಗಳು ಕಾಡುತ್ತಿದೆ.
Advertisement
ಭೂಮಿಗೆ ಶೀತದ ಪ್ರಮಾಣ ಹೆಚ್ಚಾಗಿದ್ದು ಸೀಬೆ, ಮಾವು, ನೇರಳೆಯಂತಹ ತೋಟಗಾರಿಕೆ ಬೆಳೆಗಳಿಗೂ ಸಹ ಸಮಸ್ಯೆಗಳಾಗುತ್ತಿದೆ. ಜಿಲ್ಲೆಯಲ್ಲಿ ರೈತರಿಗೆ ಈ ಕುರಿತು ಇನ್ನೂ ಕೂಡ ಸರಿಯಾಗಿ ಅರಿವಿದ್ದಂತಿಲ್ಲ. ಮಲೆನಾಡಿನ ರೀತಿಯಲ್ಲಿಯೇ ಜಿಲ್ಲೆಯ ಕೆಲವೆಡೆ ವಾತಾವರಣ ಉಂಟಾಗಿದ್ದು, ಕೆಲವು ಮುನ್ನೆಚ್ಚರಿಕೆಗಳನ್ನು ರೈತರು ತೆಗೆದುಕೊಳ್ಳಬೇಕು ಅಂತ ಕೃಷಿ ವಿಜ್ಞಾನಿಗಳ ತಿಳಿಸಿದ್ದಾರೆ. ಇದನ್ನೂ ಓದಿ: ಅರಬ್ಬಿ ಸಮುದ್ರದ ಮೇಲ್ಮೈನಲ್ಲಿ ಸುಳಿಗಾಳಿ – ರಾಜ್ಯಾದ್ಯಂತ ಅಬ್ಬರಿಸ್ತಿದೆ ಮಳೆ
Advertisement
Advertisement
ಕಲಬುರಗಿ ಜಿಲ್ಲೆಯಲ್ಲೂ ವರುಣ ಅಬ್ಬರಿಸಿದ್ದಾನೆ. ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದ್ದು ಜನಜೀವನ ಅಸ್ತವ್ಯಸ್ತವಾಗಿತ್ತು. ಮಳೆಯಿಂದದಾಗಿ ವಾಹನ ಸವಾರರು ಪರದಾಡುವಂತಾಯ್ತು. ಬೆಂಬಿಡದೆ ಸುರಿದ ಮಳೆಗೆ ಜನತೆ ಬೆಚ್ಚಿಬಿದ್ದರು. ಚಾಮರಾಜನಗರ ಜಿಲ್ಲೆಯ ಹಲವೆಡೆ ಭರ್ಜರಿ ಮಳೆಯಾಗಿದೆ. ಪರಿಣಾಮ ಜಮೀನುಗಳಿಗೆ ನೀರು ನುಗ್ಗಿ ಲಕ್ಷಾಂತರ ಮೌಲ್ಯದ ಬೆಳೆ ಹಾನಿಯಾಗಿದೆ. ಹನೂರು ತಾಲೂಕಿನ ಪಿಜಿ ಪಾಳ್ಯ, ಉಯಿಲಿನತ್ತ, ಹೊಸದೊಡ್ಡಿ ಸುತ್ತಮುತ್ತ ಮಳೆಯಿಂದಾಗಿ ಜಮೀನು, ಹಳ್ಳ ಕೊಳ್ಳಗಳು ಮಳೆನೀರಿನಿಂದ ತುಂಬಿ ಹೋಗಿವೆ. ಆಲೂಗಡ್ಡೆ, ಜೋಳ ಸೇರಿದಂತೆ ಇತರೆ ಬೆಳೆಗಳು ಹಾನಿಯಾಗಿದ್ದು ರೈತರು ಕಂಗಾಲಾಗಿದ್ದಾರೆ.
Advertisement
ಚಿಕ್ಕಬಳ್ಳಾಪುರದಲ್ಲಿ ಅಮಾನಿ ಕೆರೆ ಕೋಡಿ ಬಿದ್ದಿದೆ. ಮತ್ತೊಂದು ಕಡೆ ಶ್ರೀನಿವಾಸ ಸಾಗರ ಜಲಾಶಯ ತುಂಬಿದೆ. ಹಾಗಾಗಿ ಜಲಾಶಯ ವೀಕ್ಷಣೆಗೆ ತಂಡೋಪತಂಡ ಜನರು ಬರುತ್ತಿದ್ದಾರೆ. ಜನಸಾಗರೇ ನೆರೆದಿದೆ. ಇನ್ನು ಹರಿವ ನೀರಿನಲ್ಲಿ ಮಕ್ಕಳು, ಯುವಕ, ಯುವತಿಯರ ಮೋಜು ಮಸ್ತಿ ಮಾಡ್ತಿದ್ದಾರೆ. ನಗರದ ಹೂವಿನ ಮಾರುಕಟ್ಟೆ ಕೆಸರು ಗದ್ದೆಯಾಗಿದ್ದು ರೈತರು ನಾಟಿ ಮಾಡಿ ಆಕ್ರೋಶ ಹೊರ ಹಾಕಿದ್ರು. ಲಕ್ಷಾಂತರ ರೂಪಾಯಿ ಮೌಲ್ಯದ ಸೇವಂತಿ, ಚೆಂಡು ಹೂ, ಗುಲಾಬಿ ಹೂ ಸೇರಿದಂತೆ ವಿವಿಧ ಹೂಗಳಲ್ಲಿ ನೀರು ಹೋದ ಕಾರಣ ಖರೀದಿಯಾಗದೇ ಹಾಗೆ ಉಳಿದಿದ್ದರಿಂದ ರೈತರು ಹೂವನ್ನು ನೀರಲ್ಲೆ ಬಿಸಾಡಿ ಆಕ್ರೋಶ ವ್ಯಕ್ತಪಡಿಸಿದ್ರು.
ಧಾರವಾಡದಲ್ಲೂ ಧಾರಾಕಾರ ಮಳೆಯಾಗಿದೆ. ಭಾರೀ ಮಳೆಯಿಂದಾಗಿ ಮಾವಿನಕೊಪ್ಪ ಹಳ್ಳ ತುಂಬಿ ಹರಿಯುತ್ತಿತ್ತು. ಪರಿಣಾಮ ವಾಹನಗಳು ಸಾಲುಗಟ್ಟಿ ನಿಂತಿದ್ದವು. ಉತ್ತರ ಕನ್ನಡ ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆರೆಗಳು ಕೋಡಿ ಬಿದ್ದು ಬೆಳೆ ಹಾನಿಯಾಗಿದೆ. ಹೊನ್ನಾವರ, ಕುಮಟಾ, ಶಿರಸಿ, ಸಿದ್ದಾಪುರ ಭಾಗದಲ್ಲಿ ವರುಣನ ಅಬ್ಬರ ಹೆಚ್ಚಾಗಿದ್ದು ಶಿರಸಿ, ಬನವಾಸಿ ಭಾಗದಲ್ಲಿನ ಈಸಳೂರು, ಬಿಸಲಕೊಪ್ಪ ಭಾಗದಲ್ಲಿ ಕೆರೆಗಳು ಕೋಡಿ ಬಿದ್ದಿವೆ. ಇನ್ನು ಇನ್ನು 3 ದಿನಗಳ ಕಾಲ ಭಾರೀ ಮಳೆಯಾಗುವ ಸಾಧ್ಯತೆ ಇದೆ ಅಂತ ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ.