ಚಿಕ್ಕಬಳ್ಳಾಪುರ: ಜಿಲ್ಲೆಯಾದ್ಯಾಂತ ಧಾರಕಾರ ಮಳೆ ಒಂದೆಡೆಯಾದ್ರೆ ಮತ್ತೊಂದೆಡೆ ಎಚ್ ಎನ್ ವ್ಯಾಲಿ ಯೋಜನೆಯ ಅಧಿಕಾರಿಗಳು ಮಾಡಿದ ಎಡವಟ್ಟಿನಿಂದ ಅಪಾರ ಪ್ರಮಾಣದ ಬೆಳೆ ನಷ್ಟ ಆಗಿ ರೈತರು ಸಂಕಷ್ಟಕ್ಕಿಡಾಗುವಂತೆ ಮಾಡಿದೆ.
ಚಿಕ್ಕಬಳ್ಳಾಪುರ ತಾಲೂಕಿನ ಚಲಕಾಯಲಪರ್ತಿ ಗ್ರಾಮದಲ್ಲಿ ನೂರಾರು ಎಕರೆ ಬೆಳೆಗಳು ಜಲಾವೃತವಾಗಿ ರೈತರು ಸಂಕಷ್ಟಕ್ಕೀಡಾಗುವಂತೆ ಮಾಡಿದೆ. ಗುಲಾಬಿ, ಸೇವಂತಿಗೆ, ಚೆಂಡು ಹೂ, ಆಲೂಗಡ್ಡೆ, ದ್ರಾಕ್ಷಿ, ಮಾವು, ರಾಗಿ ಸೇರಿದಂತೆ ತೋಟಗಾರಿಕಾ ಬೆಳೆಗಳು ಸಂಪೂರ್ಣ ಜಲಾವೃತವಾಗಿ ರೈತರಿಗೆ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದೆ.
Advertisement
Advertisement
ಅಂದಹಾಗೆ ಚಲಕಾಯಲಪರ್ತಿ ಗ್ರಾಮದ ಸುತ್ತಮುತ್ತಲೂ ಮೂರು ಕೆರೆಗಳಿದ್ದು, ಮೂರು ಕೆರೆಗಳಿಗೆ ಮೊದಲು ಎಚ್ ಎನ್ ವ್ಯಾಲಿ ಯೋಜನೆಯಿಂದ ನೀರು ತುಂಬಿಸಲಾಗಿತ್ತು. ಇತ್ತೀಚೆಗೆ ಬೇರೆ ಧಾರಕಾರ ಮಳೆಯಾಗಿದೆ. ಮಳೆಯಾಗಿದ್ರೂ ಸಹ ಈಗಲೂ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಎಚ್ ಎನ್ ವ್ಯಾಲಿ ಯೋಜನೆಯ ನೀರನ್ನ ಹರಿಬಿಡಲಾಗುತ್ತಿದೆ. ಆದರೆ ಒಂದು ಕೆರೆಯಿಂದ ಮತ್ತೊಂದು ಕೆರೆಗೆ ಸರಾಗವಾಗಿ ನೀರು ಸಾಗಲು ಸಮರ್ಪಕವಾದ ಕಾಲುವೆಗಳನ್ನ ಮಾಡಿಲ್ಲ. ಕಾಲುವೆಗಳನ್ನ ಮಾಡದೆ ಹಾಗೆ ಕೆರೆಗಳಿಗೆ ನೀರನ್ನ ಹರಿದುಬಿಡಲಾಗುತ್ತಿದ್ದು, ಇದರಿಂದ ಕಾಲುವೆ ಅಕ್ಕಪಕ್ಕದ ರೈತರ ಜಮೀನುಗಳು ಜಲಾವೃತವಾಗುತ್ತಿವೆ.
Advertisement
Advertisement
ಕೆರೆಗಳು ಸಹ ಮೈದುಂಬಿಕೊಂಡಿದ್ದು, ಗೊಳ್ಳು ಗ್ರಾಮಸ್ಥರು ತಮ್ಮೂರಿನ ಕೆರೆಯ ನೀರನ್ನ ಹೊರಗೆ ಬಿಡೋಕೆ ಅಡ್ಡಿಪಡಿಸುತ್ತಿದ್ದಾರೆ. ಕೆರೆಯ ಹಿಂಭಾಗಕ್ಕೆ ನೀರು ನುಗ್ಗುತ್ತಿದ್ದು, ಇದರಿಂದ ಹಿನ್ನೀರಿನ ಪ್ರದೇಶದಲ್ಲಿರೋ ರೈತರು ಜಮೀನುಗಳೆಲ್ಲವೂ ಮುಳುಗಡೆಯಾಗಿ ಬೆಳೆದ ಬೆಳೆಗಳೆಲ್ಲವೂ ಕೆರೆಯ ನೀರು ಪಾಲಾಗಿವೆ. ಇದರಿಂದ ಲಕ್ಷಾಂತರ ಬಂಡವಾಳ ಹೂಡಿ ಬೆಳೆದಿದ್ದ ಬೆಳೆಗಳೆಲ್ಲವೂ ಕಣ್ಣೆದುರೇ ಹಾಳಾಗುತ್ತಿದ್ದು, ರೈತರು ಏನೂ ಮಾಡಲಾಗದೆ ದಿಕ್ಕು ತೋಚದಂತಾಗಿದ್ದಾರೆ. ಹೀಗಾಗಿ ಅಧಿಕಾರಿಗಳು ಕೂಡಲೇ ಸೂಕ್ತ ಕಾಲುವೆಗಳ ನಿರ್ಮಾಣ ಮಾಡಿ, ಗೊಳ್ಳು ಗ್ರಾಮದ ಕೆರೆಯ ನೀರನ್ನ ಮುಂದಿನ ಕೆರೆಗೆ ಬಿಟ್ಟರೆ ಹಿನ್ನೀರಿನ ಪ್ರದೇಶದ ಬೆಳೆಗಳು ಉಳಿದುಕೊಳ್ಳಲಿವೆ ಅಂತ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸೌಂದರ್ಯ ಜಗದೀಶ್ ಕುಟುಂಬಸ್ಥರಿಂದ ಹಲ್ಲೆ ಪ್ರಕರಣ- ಮನೆ ಸೆಕ್ಯೂರಿಟಿ ಗಾರ್ಡ್ ಅರೆಸ್ಟ್
ಗ್ರಾಮದ ರೈತ ಗಂಗಾಧರ್ ಮಾತನಾಡಿ, ಮೊದಲಿಗೆ ಎಚ್ ಎನ್ ವ್ಯಾಲಿ ಯೋಜನೆಯ ಮೂಲಕ ನಮ್ಮೂರಿನ ಕೆರೆಗೆ ಕಟ್ಟೆಯನ್ನ ನಿರ್ಮಾಣ ಮಾಡಿದ್ದು ಅದು ಅವೈಜ್ಞಾನಿಕವಾಗಿದೆ. ಕೆರೆಗೆ ನೀರು ಹರಿಯುವ ಜಾಗಗಳನ್ನ ಮುಚ್ಚಿ ಹಾಕಿ ತಡೆಗೋಡೆ ಮಾಡಿದ್ದಾರೆ. ಇದರಿಂದ ಕೆರೆಗೆ ನೀರು ಹರಿಯದೆ ಮಳೆಯಾದಾಗ ರೈತರ ಜಮೀನುಗಳಲ್ಲೇ ಉಳಿದುಕೊಳ್ಳುತ್ತಿದೆ. ಕೆರೆಯ ತೂಬನ್ನ ಸಹ ತುಂಬಾ ಕೆಳಗೆ ಆಳವಡಿಸಿರೋದ್ರಿಂದ ಕೆರೆ ಸಂಪೂರ್ಣವಾಗಿ ತುಂಬದೆ ಮತ್ತೊಂದು ಕೆರೆಗೆ ಹೋಗುತ್ತಿದ್ದು, ಜಮೀನುಗಳನ್ನ ಜಲಾವೃತ ಮಾಡುತ್ತಿದೆ. ಎಚ್ ಎನ್ ವ್ಯಾಲಿ ಯೋಜನೆ ಅಧಿಕಾರಿಗಳು ಮಾಡಿರುವ ಎಡವಟ್ಟಿಗೆ ರೈತರು ಪರದಾಡುವಂತಾಗಿದೆ ಅಂತ ಅಸಮಾಧಾನ ಹೊರಹಾಕಿದ್ದಾರೆ. ಇನ್ನೂ ಇದೇ ರೀತಿ ಹಲವು ಗ್ರಾಮಗಳಲ್ಲಿ ಅಧಿಕಾರಿಗಳ ಎಡವಟ್ಟಿನಿಂದ ಕೆರೆಯ ಅಕ್ಕ ಪಕ್ಕದ ಜಮೀನುಗಳೆಲ್ಲವೂ ಜಲಾವೃತವಾಗುತ್ತಿವೆ ಎಂಬ ದೂರುಗಳು ಕೇಳಿಬಂದಿವೆ.
ಅಧಿಕಾರಿಗಳು ಹೇಳೋದು ಏನು…?
ಈ ಬಗ್ಗೆ ಪಬ್ಲಿಕ್ ಟಿವಿ ಗೆ ಪ್ರತಿಕ್ರಿಯಿಸಿರುವ ಎಚ್ ಎನ್ ವ್ಯಾಲಿ ಯೋಜನೆಯ ಎಇಇ ರವೀಂದ್ರನಾಥ್, ಕೆರೆಗಳಿಗೆ ಆದಷ್ಟು ಬೇಗ ನೀರು ತುಂಬಿಸುವ ಉದ್ದೇಶದಿಂದ ಕಳೆದ 1 ವರ್ಷದಿಂದ ಕೆರೆಗಳಿಗೆ ನೀರು ಹರಿಸಲಾಗುತ್ತಿತ್ತು. ಕೆರೆಯಿಂದ ಕೆರೆಗೆ ನೀರು ಹರಿಸಲು ಕಾಲುವೆಗಳನ್ನ ಮಾಡಬೇಕಿತ್ತು. ಆದರೆ ಕೊರೊನಾ ಕಾರಣದಿಂದ ಮಾಡಲಾಗಲಿಲ್ಲ. ಇರುವ ಕಾಲುವೆಗಳ ಮುಖಾಂತರವೇ ನೀರು ಹರಿಸಲಾಗುತ್ತಿತ್ತು. ಆದರೆ ಈಗ ಊಹಿಸದಂತಹ ಮಳೆಯಾದ ಪರಿಣಾಮ ಯಥೇಚ್ಛವಾದ ಮಳೆ ನೀರು ಬಂದಿದ್ದು, ಸಹಜವಾಗಿ ಬೆಳೆಗಳು ಜಲಾವೃತವಾಗಿವೆ. ಆದಷ್ಟು ಬೇಗ ಸಮರ್ಪಕ ಕಾಲುವೆಗಳನ್ನ ಮಾಡಿ ಸಮಸ್ಯೆ ಬಗೆಹರಿಸಲಾಗುವುದು ಅಂತ ಭರವಸೆ ನೀಡಿದ್ದಾರೆ.