ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶನಿವಾರ ಸಂಜೆ ಆಗುತ್ತಿದ್ದಂತೆ ಸಣ್ಣಗೆ ಶುರುವಾಗಿದ್ದ ಮಳೆ, ರಾತ್ರಿ ಆಗುತ್ತಿದ್ದಂತೆ ಅಬ್ಬರಿಸಿತು. ಏಕಾಏಕಿ ಶುರುವಾದ ಮಳೆಗೆ ವಾಹನ ಸವಾರರು ತತ್ತರಿಸಿದ್ರು.. ಕ್ಷಣಮಾತ್ರದಲ್ಲಿ ರಸ್ತೆಗಳಲ್ಲಿ ಮೊಣಕಾಲುದ್ದ ನೀರು ನಿಂತು ಸಂಚಾರಕ್ಕೆ ಅಡ್ಡಿಯುಂಟು ಮಾಡಿತ್ತು.
ಮೆಜೆಸ್ಟಿಕ್, ಕಾರ್ಪೊರೇಷನ್, ಮಾರ್ಕೆಟ್, ವಿಧಾನಸೌಧ, ಜಯನಗರ 2ನೇ ಹಂತ, ಕುಮಾರಸ್ವಾಮಿ ಲೇಔಟ್, ಶೇಷಾದ್ರಿಪುರಂ, ಮಲ್ಲೇಶ್ವರಂ, ಯಶವಂತಪುರ, ರಾಜಾಜಿನಗರ, ಮಹಾಲಕ್ಷ್ಮಿಲೇಔಟ್, ಇಸ್ಕಾನ್ ಟೆಂಪಲ್ ರಸ್ತೆ ಸೇರಿದಂತೆ ಹಲವೆಡೆ ಭಾರೀ ಮಳೆ ಸುರಿಯಿತು. ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಿದ್ರು.
ಆನಂದ್ ರಾವ್ ರಸ್ತೆಯಲ್ಲಿ ಒಂದೂವರೆ ಅಡಿಯಷ್ಟು ನೀರು ನಿಂತು ಸವಾರರು ಪರದಾಡಿದ್ರು. ಇನ್ನು ಮಳೆಯಿಂದಾಗಿ ಮಹಾಲಕ್ಷ್ಮಿ ಲೇಔಟ್‍ನ ರಾಜೇಂದ್ರ ಟೆಕ್ಸ್‍ಟೈಲ್ಸ್ ಸ್ಲಂ ಮನೆಗಳಿಗೆ ಮಳೆ ನೀರು ನುಗ್ಗಿದೆ. ರಾತ್ರಿ ಸುರಿದ ಮಳೆಗೆ ಇಸ್ಕಾನ್ ಟೆಂಪಲ್ ಬಳಿ ರಸ್ತೆಗಳೆಲ್ಲ ಸಂಪೂರ್ಣ ಜಲಾವೃತವಾಗಿತ್ತು. ಇದನ್ನೂ ಓದಿ: ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ – ಬೆಳಗ್ಗೆಯ ಆದೇಶ ಸಂಜೆಗೆ ವಾಪಸ್ ಪಡೆದ ಸರ್ಕಾರ
ಜಯನಗರ 5 ನೇ ಹಂತ ರಸ್ತೆ ಸಂಪೂರ್ಣ ಜಲಾವೃತವಾಗಿ ಸಂಸದ ತೇಜಸ್ವಿ ಸೂರ್ಯ ಕಚೇರಿ ಸುತ್ತಲೂ ನೀರು ನಿಂತಿತ್ತು. ಯಶವಂತಪುರ ಸರ್ಕಲ್‍ನಲ್ಲಿರುವ ವೈ.ಮುನಿಸ್ವಾಮಪ್ಪ ಕಲ್ಯಾಣ ಮಂಟಪದ ಎದುರೇ ಬೃಹತ್ ಮರವೊಂದು ಧರಾಶಾಯಿ ಆಗಿತ್ತು. ಮಳೆ ಹಿನ್ನೆಲೆ ವಾಹನಗಳ ಸಂಖ್ಯೆ ಕಡಿಮೆ ಇದ್ದ ಹಿನ್ನೆಲೆ ಭಾರೀ ಅನಾಹುತವೊಂದು ತಪ್ಪಿದೆ. ಒಟ್ಟಿನಲ್ಲಿ ರಾತ್ರಿ ಸುರಿದ ಧಾರಾಕಾರ ಮಳೆಗೆ ಬೆಂಗಳೂರಿನ ಜನರು ಹೈರಾಣಾಗಿದ್ದಾರೆ.