ಬೆಂಗಳೂರು: ರಾಜ್ಯದಲ್ಲಿ ಮಳೆಯ ಆರ್ಭಟ ಮುಂದುವರಿದಿದೆ. ಜನಜೀವನ ಅಸ್ತವ್ಯಸ್ತಗೊಂಡಿದ್ದು, ಪ್ರಾಣ ಹಾನಿ ಸಂಭವಿಸಿದೆ.
ನಗರದ ದೊಡ್ಡಬಳ್ಳಾಪುರದ ದೇವನಹಳ್ಳಿಯಲ್ಲಿ ಶಿಥಿಲಾವಸ್ಥೆಯಲ್ಲಿದ್ದ ಮನೆಯ ಗೋಡೆ ಕುಸಿದು 20 ವರ್ಷದ ಯುವತಿ ಮುನಿರತ್ನಮ್ಮ ಸಾವನ್ನಪ್ಪಿದ್ದಾರೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾಧಿಕಾರಿ ಎಸ್ ಪಾಲಯ್ಯ ಹಾಗೂ ಶಾಸಕ ವೆಂಕಟರಮಣಯ್ಯ ಭೇಟಿ ನೀಡಿ ಮೃತಳ ಕುಟುಂಬದವರಿಗೆ ಸಾಂತ್ವನ ಹೇಳಿದರು.
ಸಿಲಿಕಾನ್ ಸಿಟಿಯಲ್ಲಿ ವರುಣನ ಅವಾಂತರದಿಂದ ಕಿನೋ ಥಿಯೇಟರ್ ಬಳಿ ರೈಲ್ವೆ ಬ್ರಿಡ್ಜ್ ಕೆಳಗೆ ಅಳವಡಿಸಲಾದ ಛಾವಣಿ ಕುಸಿದಿದೆ. ಪರಿಣಾಮ ಬ್ರಿಡ್ಜ್ ಕೆಳಗೆ ತೆರಳುತ್ತಿದ್ದ ಅನೇಕ ಬಸ್ ಗಳು ಅಂಡರ್ ಪಾಸ್ ದಾಟಲಾಗದೆ ಪರದಾಡುಇತ್ತಿವೆ. ಕೆಲವು ಬಸ್ ಗಳು ಯೂಟರ್ನ್ ಪಡೆದು ಮಾರ್ಗ ಬದಲಾವಣೆ ಮಾಡಿವೆ. ರೈಲ್ವೆ ಮೇಲೂ ಸೇತುವೆ ಕೆಳಗೆ ಚಾವಣಿ ಕುಸಿದ ಜಾಗಕ್ಕೆ ಆರ್ ಜೆ ಲತಾ ಹಾಗೂ ವಾರ್ಡ್ ನಂ 94 ಸದಸ್ಯರು ಭೇಟಿ ಘಟನೆ ಕುರಿತು ಮಾಹಿತಿ ಪಡೆಯುತ್ತಿದ್ದಾರೆ.
ದಾವಣಗೆರೆಯಲ್ಲಿ ಕಳೆದ ರಾತ್ರಿ ಸುರಿದ ಮಳೆಯಿಂದಾಗಿ ಕೆಎಸ್‍ಆರ್‍ಟಿಸಿ ಬಸ್ ನಿಲ್ದಾಣ ನೀರಿನಲ್ಲಿ ಮುಳುಗಿದೆ. ಅಲ್ಲದೇ ಜಿಲ್ಲಾ ಆಸ್ಪತ್ರೆಯಲ್ಲಿ ನೀರು ನುಗ್ಗಿ ರೋಗಿಗಳು ಪರದಾಡುವಂತಾಗಿದೆ.
ರಾಯಚೂರಲ್ಲಿ ಬಿಟ್ಟು ಬಿಟ್ಟು ಸುರಿದ ಮಳೆಯಿಂದ ಜಹಿರಾಬಾದ್, ಅಂಬೇಡ್ಕರ್ ನಗರ, ಮ್ಯಾದರ್ ಓಣಿ, ಆಕಾಶವಾಣಿ ಕೇಂದ್ರದ ಬಳಿಯ ಪ್ರದೇಶಗಳೆಲ್ಲಾ ಜಲಾವೃತವಾಗಿವೆ. ದವಸ ಧಾನ್ಯಗಳು ನೀರು ಪಾಲಾಗಿವೆ.
ಚಾಮರಾಜನಗರ ಜಿಲ್ಲೆ, ಯಳಂದೂರು ತಾಲೂಕಿನ ಕೆಸ್ತೂರು ಗ್ರಾಮದ ಕೆಲ ಬಡಾವಣೆಗಳ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿ ಮಾಡಿದೆ. ನೆನ್ನೆ ಸಂಜೆ ಹಾಗೂ ರಾತ್ರಿ ಸುರಿದ ಮಳೆಯಿಂದಾಗಿ ಗ್ರಾಮದ ತಗ್ಗು ಪ್ರದೇಶದಲ್ಲಿರುವ ಮನೆಗಳಿಗೆ ನೀರು ನುಗ್ಗಿದೆ. ನೀರು ನುಗ್ಗಿದ ಹಿನ್ನೆಲೆಯಲ್ಲಿ ರಾತ್ರೆಯೆಲ್ಲ ಮನೆಯವರು ನೀರನ್ನು ಮನೆಯಿಂದ ಹೊರಹಾಕುವಂತಾಯಿತು. ಮನೆಗಳಿಗೆ ನೀರು ನುಗ್ಗಿರುವ ಹಿನ್ನೆಲೆಯಲ್ಲಿ ಮನೆಯಲ್ಲಿದ್ದ ವಸ್ತುಗಳು ಕೂಡ ಹಾಳಾಗಿವೆ.
ಚಿತ್ರದುರ್ಗದಲ್ಲಿ ವರುಣನ ಆರ್ಭಟಕ್ಕೆ ಎರಡು ಮನೆಗಳು ಮೇಲ್ಚಾವಣೆ ಕುಸಿದಿದೆ. ರಾಮನಗರದ ಶೇಷಗಿರಿ ಹಳ್ಳಿಯ ಕೆರೆ ಹಾಗೂ ರಂಗರಾಯರ ದೊಡ್ಡಿ ಕೆರೆ ಕೋಡಿ ಒಡೆದಿವೆ. ಚಾಮರಾಜನಗರ, ಕೊಪ್ಪಳದಲ್ಲಿ ಹಳ್ಳ-ಕೊಳ್ಳಗಳು ಮೈದುಂಬಿ ಹರಿಯುತ್ತಿವೆ. ರಾಜ್ಯದಲ್ಲಿ ಇಂದು ಕೂಡ ಭಾರೀ ಮಳೆಯಾಗುವ ಸಾಧ್ಯತೆಗಳಿವೆ ಎಂಬುವುದಾಗಿ ತಿಳಿದುಬಂದಿದೆ.
ಒಟ್ಟಿನಲ್ಲಿ ಮಳೆ ಆರ್ಭಟ ರಾಜ್ಯಾದ್ಯಂತ ಜನಜೀವನ ಅಸ್ತವ್ಯಸ್ಥಗೊಳಿಸಿದ್ರೂ, ರೈತವರ್ಗದ ಮೊಗದಲ್ಲಿ ಖುಷಿ ತಂದಿದೆ.
https://www.youtube.com/watch?v=0PDs07dlO6s