ಬೆಂಗಳೂರು: ಉತ್ತರ ಕರ್ನಾಟಕ ಜಿಲ್ಲೆಯಲ್ಲಿ ಮತ್ತೆ ಪ್ರವಾಹ ಸೃಷ್ಟಿ ಆಗಿದ್ದು ಬೆಳಗಾವಿ ಜಿಲ್ಲೆಯಲ್ಲಿ ಒಂದೇ ಸಮನೆ ಮಳೆಯಾಗುತ್ತಿದೆ.
ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ಭಾಗದಲ್ಲೂ ಧಾರಾಕಾರ ಮಳೆ ಆಗಿದ್ದು, ಆಡಿ ಗ್ರಾಮದಲ್ಲಿ ವಾಹನಗಳು ಪ್ರವಾಹದಲ್ಲಿ ಕೊಚ್ಚಿಕೊಂಡು ಹೋಗಿವೆ. ಊರಿಗೆ ಊರೇ ನೀರಲ್ಲಿ ಮುಳುಗಿತ್ತು. ಚಿಕ್ಕೋಡಿ, ಹುಕ್ಕೇರಿ, ರಾಯಭಾಗದಲ್ಲಿ ರಾತ್ರಿಯಿಡೀ ಮಳೆ ಆಗಿದೆ.
ಚಿಕ್ಕೋಡಿ ತಾಲೂಕಿನ ಬೇಡಕಿಹಾಳದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ನೀರು ನುಗ್ಗಿತ್ತು. ಚಿಕ್ಕೋಡಿಯಲ್ಲಿ ಮಳೆಯಬ್ಬರಕ್ಕೆ ರಸ್ತೆಯೇ ಕೊಚ್ಚಿಕೊಂಡು ಹೋಗಿದೆ. ಬೆಳಗಾವಿಯಲ್ಲಿ ನಗರದ ರೈಲ್ವೆ ಪೊಲೀಸ್ ಸ್ಟೇಷನ್‍ಗೆ ಚರಂಡಿ ನೀರು ನುಗ್ಗಿತ್ತು. ಇದರಿಂದ ಆಘಾತಗೊಂಡ ಪೊಲೀಸರು ಕಂಪ್ಯೂಟರ್ ಸೇರಿದಂತೆ ಮಹತ್ವದ ವಸ್ತುಗಳನ್ನ ಬೇರೆಡೆಗೆ ಸ್ಥಳಾಂತರಿಸಿದರು. ಅಲ್ಲದೇ ವೀರಭದ್ರೇಶ್ವರ ಮತ್ತು ಅಹ್ಮದ್ ನಗರದಲ್ಲಿರುವ 50ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು.
ಬೆಳಗಾವಿ ಜಿಲ್ಲೆಯ ಬೂತರಾಮನಟ್ಟಿಯಲ್ಲೂ ಮನೆಗಳು ಜಲಾವೃತಗೊಂಡಿದ್ದವು. ಕಿತ್ತೂರು ಮತ್ತು ಬೈಲಹೊಂಗಲ, ರಾಮದುರ್ಗಾ ತಾಲೂಕಲ್ಲಿ ಮಲಪ್ರಭಾ ನದಿ ತುಂಬಿ ಹರಿಯುತ್ತಿದ್ದು, ಸವದತ್ತಿಯಲ್ಲಿರುವ ನವಿಲುತೀರ್ಥ ಡ್ಯಾಂನಿಂದ 20 ಸಾವಿರ ಕ್ಯೂಸೆಕ್ ನೀರನ್ನ ಹೊರಬಿಡಲಾಗುತ್ತಿದೆ. ರಾಮದುರ್ಗ ತಾಲೂಕಿನ ಹೀರೆಹಂಪಿಹೊಳಿ, ಚಿಕ್ಕಹಂಪಿಹೊಳಿ, ಅವರಾದಿಯಲ್ಲಿ ಪ್ರವಾಹ ಮುನ್ನೆಚ್ಚರಿಕೆ ಹೊರಡಿಸಲಾಗಿದೆ. ಖಾನಾಪೂರ ತಾಲೂಕಿನ ಕಸಮಳಗಿಯಲ್ಲಿ ಮಳೆಗೆ ಮನೆ ಗೋಡೆ ಕುಸಿದು 55 ವರ್ಷದ ಲಿಯಾಕತ್ ಮಕನದಾರ ಅನ್ನೋರು ಸ್ಥಳಲ್ಲೇ ಮೃತಪಟ್ಟಿದ್ದಾರೆ. ಸ್ಥಳಕ್ಕೆ ತಹಶೀಲ್ದಾರ್ ಶಿವಾನಂದ್ ಭೇಟಿ ನೀಡಿದರು.
ಧಾರವಾಡ ಜಿಲ್ಲೆಯ ನವಲಗುಂದ ತಾಲೂಕಿನ ಜಾವೂರದಲ್ಲಿ ಪ್ರವಾಹದಲ್ಲಿ ಸಿಲುಕಿದ್ದ ದಂಪತಿಯನ್ನ ರಕ್ಷಣೆ ಮಾಡಲಾಗಿದೆ. ತುಪ್ಪರಿಹಳ್ಳ ಪ್ರವಾಹದಲ್ಲಿ ಸಿಲುಕಿದ್ದ ಪ್ರಕಾಶ್ ಮತ್ತು ಸವಿತಾರರನ್ನ ಹುಬ್ಬಳ್ಳಿಯಿಂದ ಕರೆಸಿದ್ದ ಬೋಟ್ ಮೂಲಕ ರಕ್ಷಣೆ ಮಾಡಲಾಯಿತು. ಸ್ಥಳಕ್ಕೆ ನವಲಗುಂದ ತಹಶೀಲ್ದಾರ್ ನವೀನ್ ಹುಲ್ಲೂರು ಭೇಟಿ ನೀಡಿದ್ದರು. ಹುಬ್ಬಳ್ಳಿಯಲ್ಲಿ ಧಾರಾಕಾರ ಮಳೆಗೆ ಗೋಪನಕೊಪ್ಪದಲ್ಲಿ ಸಣ್ಣಗೌಡಪ್ಪ ಶಿರೂರ, ಬಸವರಾಜ್ ಮಾರ್ಟಿನ್ ಮತ್ತು ಈರಪ್ಪ ಕಂಬಾರ ಅನ್ನೋರಿಗೆ ಸೇರಿದ ಮನೆಗಳು ಕುಸಿದಿವೆ. ಈಶ್ವರ ನಗರದಲ್ಲಿ ಮನೆಗಳು ಮತ್ತು ಅಕ್ಷಯ ಕಾಲನಿಯ ಅಕ್ಷಯ ಕ್ಲಾಸಿಕ್ ಅಪಾರ್ಟ್ ಮೆಂಟ್ ಮತ್ತು ವಿಂಡ್ಸನ್ ಮ್ಯಾನರ್ ಅಪಾರ್ಟ್ ಮೆಂಟ್‍ಗೆ ನೀರು ನುಗ್ಗಿದೆ.
ನವಿಲುತೀರ್ಥ ಡ್ಯಾಂನಿಂದ ಮಲಪ್ರಭಾ ನದಿಗೆ ನೀರು ಬಿಟ್ಟಿರುವ ಹಿನ್ನೆಲೆಯಲ್ಲಿ ಬೆಣ್ಣೆಹಳ್ಳ ತುಂಬಿ ಹರಿಯುತ್ತಿದ್ದು, ಗದಗ ಜಿಲ್ಲೆಯ ನರಗುಂದ, ರೋಣ ತಾಲೂಕಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ನರಗುಂದ ತಾಲೂಕಿನ ಲಖಮಾಪೂರ, ವಾಸನ, ಕೊಣ್ಣೂರ ಬೂದಿಹಾಳ, ರೋಣ ತಾಲೂಕಿನ ಮೆಣಸಗಿ, ಹೊಳೆಆಲೂರ, ಹೊಳೆಮಣ್ಣೂರದ ಜನರನ್ನ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಸೂಚಿಸಲಾಗಿದೆ. ದಾವಣಗೆರೆ ನಗರ ಮತ್ತು ಹೊನ್ನಾಳಿಯಲ್ಲೂ ಭಾರೀ ಮಳೆ ಆಗ್ತಿದ್ದು ಹೊನ್ನಾಳಿಯಲ್ಲಿ ಖಾಸಗಿ ಬಸ್‍ಸ್ಟ್ಯಾಂಡ್ ಜಲಾವೃತಗೊಂಡಿತ್ತು.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಮಳೆಯಿಂದಾಗಿ ಹೋಟೆಲ್, ಕಿರಾಣಿ ಅಂಗಡಿ, ಹಾರ್ಡ್ ವೇರ್ ಅಂಗಡಿಗಳಿಗೆ ನೀರು ನುಗ್ಗಿತ್ತು. ಜಲಾವೃತಗೊಂಡಿದ್ರಿಂದ ಅಪಾರ ಪ್ರಮಾಣದಲ್ಲಿ ಬೆಲೆ ಬಾಳುವ ವಸ್ತುಗಳಿಗೆ ಹಾನಿ ಆಗಿದೆ. ಜಲಾವೃತಗೊಂಡ ಬಳಿಕ ಧಾವಿಸಿದ ಪಟ್ಟಣ್ಣ ಪಂಚಾಯ್ತಿ ಸಿಬ್ಬಂದಿ ನೀರು ಹೊರಹಾಕುವ ಪ್ರಯತ್ನ ಮಾಡಿದರು.