ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ನಿನ್ನೆ ಸಂಜೆಯಿಂದ ಸುರಿದ ಗುಡುಗು ಸಿಡಿಲು ಸಹಿತ ಧಾರಾಕಾರ ಮಳೆಯಿಂದಾಗಿ ಹಲವೆಡೆ ಮರಗಳು ಧರೆಗಪ್ಪಳಿಸಿವೆ. ಕೆ.ಜಿ.ನಗರ, ವಿದ್ಯಾರಣ್ಯಪುರ, ಆರ್.ಆರ್.ನಗರ, ನಾಗರಬಾವಿ, ಮಾರುತಿ ನಗರ, ಸಿಟಿ ಸಿವಿಲ್ ಕೋರ್ಟ್ ಬಳಿ ಮರಗಳು ಧರೆಗಪ್ಪಳಿಸಿದ್ದವು.
Advertisement
ಬಸವೇಶ್ವರನಗರದ ಪುಟ್ಟೇಗೌಡ ಎಂಬವರ ಮನೆ ಮೇಲೆ ಬುಡ ಸಮೇತ ಮರ ಕಿತ್ತು ಬಿದ್ದಿದ್ದರಿಂದ, ಮನೆಯ ವರಾಂಡದಲ್ಲೆಲ್ಲಾ ಮರದ ಕೊಂಬೆಗಳು ಮುರಿದು ಬಿದ್ದಿತ್ತು. ಬಿಬಿಎಂಪಿ ಅಧಿಕಾರಿಗಳು ಮತ್ತು ಸಿಬ್ಬಂದಿ ವರ್ಗ ಮನೆಯ ಮೇಲೆ ಬಿದ್ದ ಮರ ತೆರವುಗೊಳಿಸಲು ಹರಸಾಹಸ ಪಡುವಂತಾಯಿತು.
Advertisement
Advertisement
ಬೆಸ್ಕಾಂಗೆ ಫೋನ್ ದೂರುಗಳ ಸುರಿ`ಮಳೆ: ತಿಳಿ ಮುಸ್ಸಂಜೆಯಿಂದ ಆರಂಭವಾದ ಮಳೆ ಆರ್ಭಟ ನಡುರಾತ್ರಿವರೆಗೆ ಆರ್ಭಟ ಮುಂದುವರಿದಿತ್ತು. ಕೇವಲ ಮೂರು ಗಂಟೆಯಲ್ಲಿ ಬೆಸ್ಕಾಂಗೆ ಬರೋಬ್ಬರಿ 3715 ದೂರುಗಳು ಬಂದಿವೆ. ಕರೆ ಸ್ವೀಕರಿಸಲಾಗದೇ 1912-ಬೆಸ್ಕಾಂ ಸಹಾಯವಾಣಿ ಸಂಪೂರ್ಣ ಸ್ಥಗಿತಗೊಂಡಿದೆ.
Advertisement
ಬೆಂಗಳೂರು ಹೊರವಲಯದ ತಾವರೆಕೆರೆ ಠಾಣೆಯ ಮಾದಪಟ್ಟಣದ ಬಳಿ ಕಲ್ಲುಬಂಡೆ ಸಿಡಿಸಲು ಇಟ್ಟಿದ್ದ ಸಿಡಿಮದ್ದಿನ ಬಾಕ್ಸ್ ಗೆ ಸಿಡಿಲು ಬಡಿದು ಜಿಲೆಟಿನ್ ಕಡ್ಡಿಗಳು ಸ್ಫೋಟವಾಗಿ, ಇಬ್ಬರು ಸಾವನ್ನಪ್ಪಿದ್ದು, 8 ಮಂದಿ ಗಂಭೀರ ಗಾಯಗೊಂಡಿದ್ದಾರೆ.
ಹವಾಮಾನ ವೈಪರೀತ್ಯದಿಂದಾಗಿ ವಿಮಾನಗಳ ಸಂಚಾರದಲ್ಲೂ ವ್ಯತ್ಯಯ ಉಂಟಾಯ್ತು. ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಚೆನ್ನೈ, ಹೈದ್ರಾಬಾದ್ ಕಡೆ ವಿಮಾನಗಳು ಮಾರ್ಗ ಬದಲಿಸಿದ್ವು. ಇನ್ನೊಂದೆಡೆ ಕಾರು ಚಾಲಕನ ನಿಯಂತ್ರಣ ತಪ್ಪಿ ಬೈಕ್‍ಗೆ ಡಿಕ್ಕಿ ಹೊಡೆದು ವಿದ್ಯುತ್ ಕಂಬಕ್ಕೆ ಗುದ್ದಿದ ಘಟನೆ ಬಸವನಗುಡಿಯ ಶಂಕರಪುರ ಠಾಣೆ ಬಳಿ ಘಟನೆ ನಡೆದಿದೆ. ಡ್ರೈವ್ ಮಾಡುತ್ತಿದ್ದ ವೃದ್ಧನ ಕೈ ಮುರಿದಿದೆ.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಾಗಿ ಸಾಕಷ್ಟು ಆಸ್ತಿಪಾಸ್ತಿ ಹಾನಿ ಸಂಭವಿಸಿದೆ. ಗದಗ ಜಿಲ್ಲೆಯ ಮುಂಡರಗಿ ತಾಲೂಕಿನ ಯಕ್ಲಾಸಪೂರ ಗ್ರಾಮ ನಿನ್ನೆ ಸಂಜೆಯಿಂದ ಸುರಿದ ಮಳೆಗೆ ಬಹುತೇಕ ಗ್ರಾಮ ಜಲಾವೃತವಾಗಿದೆ. ಗಾಳಿ ಮಳೆಗೆ ಮನೆಗಳು, ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿವೆ. ಕೆಲವು ಮನೆಗಳ ಮೆಲ್ಛಾವಣಿ ತಗಡುಗಳು ಹಾರಿಹೋಗಿದ್ದು ಜನ ಹೈರಾಣಾಗಿದ್ದಾರೆ.
ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲೂಕಿನ ಬಂಡಮಿಂದಪಲ್ಲಿ ಗ್ರಾಮದಲ್ಲಿ ಸಿಡಿಲು ಬಡಿದು ಐದು ಮಂದಿ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದಾರೆ. ರಾಮನಗರ ತಾಲ್ಲೂಕಿನ ರಾಮನಹಳ್ಳಿ ಗ್ರಾಮದ ನಾಗರಾಜು ಎಂಬುವವರ ಮನೆಯ ಶೀಟುಗಳು ಗಾಳಿಗೆ ಹಾರಿ ಹೋಗಿವೆ. ಇಟ್ಟುಮಡು ಗ್ರಾಮದಲ್ಲಿ 5 ವಿದ್ಯುತ್ ಕಂಬಗಳು ಹಾಗೂ ನಾಲ್ಕು ಮರಗಳು ಧರೆಗೆ ಉರುಳಿಬಿದ್ದಿವೆ.
ಕೋಲಾರ ಜಿಲ್ಲೆ ಮುಳಬಾಗಲು ತಾಲೂಕಿನ ಪಾತಿಪಾಳ್ಯದಲ್ಲಿ ಸುರಿದ ಭಾರಿ ಮಳೆಗೆ ಚಿನ್ನಕ್ಕ ಎಂಬುವರ ಮನೆಯ ಗೋಡೆ ಕುಸಿದಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರು ಇರಲಿಲ್ಲ.
ಶಿವಮೊಗ್ಗದಲ್ಲಿ ಮಳೆಯ ಆರ್ಭಟಕ್ಕೆ ಸಾಗರ ರಸ್ತೆಯ ಎಪಿಎಂಸಿ ಬಳಿ 20ಕ್ಕೂ ಹೆಚ್ಚು ವಿದ್ಯುತ್ ಕಂಬಗಳು, ಮರಗಳು ಧರೆಗುರುಳಿ ಸಂಚಾರ ಈ ಪ್ರದೇಶದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡು ಜನ ಕತ್ತಲೆಯಲ್ಲಿ ಕಳೆಯುವಂತಾಯ್ತು.
ಮಂಡ್ಯದಲ್ಲಿ ರಾತ್ರಿ ಸುರಿದ ಮಳೆಯಿಂದಾಗಿ ಮನೆಗಳಿಗೆ ನೀರು ನುಗ್ಗಿದ್ದ ಪರಿಣಾಮ, ಮಕ್ಕಳು ವೃದ್ಧರೆನ್ನದೇ ಹಲವರು ಬೀದಿಯಲ್ಲೇ ರಾತ್ರಿ ಕಳೆದಿದ್ದಾರೆ. ನಿನ್ನೆ ರಾತ್ರಿ ಮಂಡ್ಯ ದಲ್ಲಿ ಸಾಧಾರಣ ಮಳೆಯಾಗಿತ್ತು. ಆದ್ರೆ ಒಳ ಚರಂಡಿಯನ್ನು ಟೈಂಗೆ ಕ್ಲೀನ್ ಮಾಡಿಸದ ಕಾರಣ ಗಾಂಧಿನಗರದ ಮೂರನೇ ಕ್ರಾಸ್‍ನಲ್ಲಿ ನೀರು ಸಂಪೂರ್ಣ ಬ್ಲಾಕ್ ಆಗಿ ಮನೆಗಳಿಗೆ ನುಗ್ಗಿದೆ. ಪರಿಣಾಮ ಮನೆಯೊಳಗೆ ಇದ್ದ ದಿನಸಿ, ದಿನ ಬಳಕೆ ವಸ್ತುಗಳೆಲ್ಲಾ ನೀರು ಪಾಲಾಗಿವೆ. ಮನೆಯೊಳಗೆ ನೀರು ಹೆಚ್ಚಾದ ಹಿನ್ನೆಲೆಯಲ್ಲಿ ಎಲ್ರೂ ಹೊರಗೆ ಬಂದು ರಾತ್ರಿ ಕಳೆದಿದ್ದಾರೆ. ಅಧಿಕಾರಿಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.