– ಬಾಗಲಕೋಟೆಯಲ್ಲಿ ಮನೆಯ ಮೇಲಿನ ಕಲ್ಲು ಮೈಮೇಲೆ ಬಿದ್ದು ಬಾಲಕಿ ಸಾವು
ಬಳ್ಳಾರಿ: ಬಿರುಗಾಳಿ ಸಹಿತ ಭಾರೀ ಮಳೆಗೆ ಕಲ್ಲುಬಂಡೆ ಕುಸಿದು ಬಿದ್ದು 12 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಬಳ್ಳಾರಿಯಲ್ಲಿ ನಡೆದಿದೆ.
ನಾಗಲಕೆರೆಯ ನಿವಾಸಿಯಾದ ಶಿವು ಮೃತ ಬಾಲಕ. ಈ ಪ್ರದೇಶದ ಭೀಮಪ್ಪ ಎನ್ನುವವರ ಮನೆ ಮೇಲೆ ಬಳ್ಳಾರಿ ಕೋಟೆಯ ಬೃಹತ್ತಾದ ಕಲ್ಲು ಕುಸಿದಿದೆ. ಹೀಗಾಗಿ ಮನೆಯಲ್ಲಿ ಮಲಗಿದ್ದ ಬಾಲಕ ಸ್ಥಳದಲ್ಲೆ ಮೃತಪಟ್ಟಿದ್ದಾನೆ. ಅಲ್ಲದೆ ರಾತ್ರಿ ಮನೆಯಲ್ಲಿ ಮಲಗಿದ್ದ ಭೀಮಪ್ಪ, ಈಶ್ವರಮ್ಮ ಸೇರಿದಂತೆ ಮೂವರಿಗೆ ಗಂಭೀರ ಗಾಯಗಳಾಗಿವೆ. ಗಾಯಾಳುಗಳನ್ನು ಬಳ್ಳಾರಿಯ ವಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ಕೌಲಬಜಾರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಇನ್ನು ಬಾಗಲಕೋಟೆಯಲ್ಲಿ ಭಾರಿ ಮಳೆಗಾಳಿಗೆ ಮನೆಯ ಮೇಲಿನ ತಗಡು ಹಾಗೂ ಕಲ್ಲು ಮೈಮೇಲೆ ಬಿದ್ದು ದೀಪಾ ಕಡೆಮನಿ ಎಂಬ 9 ವರ್ಷದ ಬಾಲಕಿ ಸಾವಿಗಿಡಾದ್ದಾಳೆ. ಬಾಗಲಕೋಟೆ ತಾಲೂಕಿನ ಕಿರಸೂರು ಗ್ರಾಮದಲ್ಲಿ ಈ ಘಟನೆ ನಡೆದಿದೆ. ತಡರಾತ್ರಿ ಭಾರಿ ಮಳೆ ಗಾಳಿಯ ಕಾರಣ ತಗಡಿನ ಮೇಲೆ ಇಡಲಾಗಿದ್ದ ಕಲ್ಲುಗಳು ಮನೆಯಲ್ಲಿ ಮಲಗಿದ್ದ ದೀಪಾ ಮೇಲೆ ಬಿದ್ದು, ತಲೆ ಮತ್ತು ಮುಖದ ಭಾಗಕ್ಕೆ ಗಂಭೀರ ಗಾಯವಾಗಿ ದೀಪಾ ಸ್ಥಳದಲ್ಲೇ ಸಾವನ್ನಪ್ಪಿದ್ದಾಳೆ. ದೀಪಾ ಸಾವಿನ ಸುದ್ದಿ ತಿಳಿದು ಗ್ರಾಮದಲ್ಲಿ ದುಃಖ ಮಡುಗಟ್ಟಿದೆ. ಬಾಗಲಕೋಟೆಯ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮನೆ ಮೇಲೆ ಮರ ಬಿದ್ದು ಮನೆಯ ಗೋಡೆ ಕುಸಿದ ಘಟನೆ ಚಿತ್ರದುರ್ಗದ ಹೊಳಲ್ಕೆರೆ ತಾಲೂಕಿನ ತಿರುಮಲಾಪುರ ಗ್ರಾಮದಲ್ಲಿ ನಡೆದಿದೆ. ಗೋಪಾಲಯ್ಯ ಎಂಬವರಿಗೆ ಸೇರಿದ ಮನೆ ಇದಾಗಿದ್ದು ಅದೃಷ್ಟವಶಾತ್ ಸಣ್ಣಪುಟ್ಟ ಗಾಯ ಹೊರತಪಡಿಸಿದರೆ ಯಾವುದೇ ಪ್ರಾಣ ಹಾನಿಯಾಗಿಲ್ಲ.
ತುಮಕೂರು ಜಿಲ್ಲೆಯಾದ್ಯಂತ ರಾತ್ರಿ ಸುರಿದ ಬಿರುಗಾಳಿ ಸಹಿತ ಮಳೆಗೆ ಹಲವು ಕಡೆ ಆಸ್ತಿ-ಪಾಸ್ತಿಗೆ ನಷ್ಟ ಉಂಟಾಗಿದೆ. ಶಿರಾದ ನ್ಯಾಯಗೆರೆಯಲ್ಲಿ 30 ಮನೆಗಳಿಗೆ ಹಾನಿಯುಂಟಾಗಿದೆ. ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿದಿದೆ. ಇನ್ನು ತುಮಕೂರು ನಗರದ ವಿದ್ಯಾನಗರದ ಕೃಷ್ಣಪ್ಪ ಎನ್ನುವವರ ಮನೆಯ ಮೇಲೆ ತೆಂಗಿನಮರ ಬಿದ್ದು ಮನೆಗೆ ಹಾನಿಯುಂಟಾಗಿದ್ದು, ಮನೆ ಮಾಲೀಕ ಕೃಷ್ಣಪ್ಪಗೆ ಗಾಯವಾಗಿದೆ. ಹಲವೆಡೆ ವಿದ್ಯುತ್ ಕಂಬಗಳು ಧರೆಗುರುಳಿದ್ದು ವಿದ್ಯುತ್ ವ್ಯತ್ಯಯದಿಂದಾಗಿ ಸಾರ್ವಜನಿಕರು ಪರದಾಡುವಂತಾಗಿದೆ.
ನೆಲಮಂಗಲ ಬಳಿ ಮಳೆಯಿಂದ ಕಂಟೇನರ್ ಲಾರಿ ಕೆಟ್ಟು ಸುಮಾರು ನಾಲ್ಕು ಕಿಲೋಮೀಟರ್ ಟ್ರಾಫಿಕ್ ಜಾಮ್ ಉಂಟಾಗಿದೆ. ನೆಲಮಂಗಲ ತಾಲೂಕಿನ ಕುಲುವನಹಳ್ಳಿ ಬಳಿ ತುಮಕೂರು-ಬೆಂಗಳೂರು ಹೆದ್ದಾರಿ 4ರಲ್ಲಿ ಘಟನೆ ನಡೆದಿದೆ. ಸ್ಥಳಕ್ಕೆ ನೆಲಮಂಗಲ ಟ್ರಾಫಿಕ್ ಪೊಲೀಸರು ದೌಡಾಯಿಸಿದ್ದಾರೆ.