ಬೆಂಗಳೂರು: ರಾಜ್ಯದೆಲ್ಲೆಡೆ ಎಡೆ ಬಿಡದೆ ಪ್ರತಿದಿನ ಗಾಳಿ ಸಹಿತ ಭಾರೀ ಮಳೆಯಾಗುತ್ತಿದ್ದು, ಜನರ ಜೀವನ ಅಸ್ಥವ್ಯಸ್ತವಾಗಿದೆ.
ಬಳ್ಳಾರಿಯಲ್ಲಿ ತಗ್ಗುಪ್ರದೇಶವಾಗಿರುವ ರಾಜರಾಜೇಶ್ವರಿ ನಗರದಲ್ಲಿ ಮನೆಯೊಳಗೆ ಮಳೆ ನೀರು ನುಗ್ಗಿತ್ತು. ದುರ್ಗಮ ಗುಡಿಯ ಕೆಳಸೇತುವೆಯಲ್ಲಿ ಪ್ರವಾಹದಲ್ಲಿ ಎರಡು ಸರ್ಕಾರಿ ಬಸ್ ಗಳು ಸಿಕ್ಕಿಹಾಕಿಕೊಂಡಿದ್ದವು. ಇದರಲ್ಲಿದ್ದ ಪ್ರಯಾಣಿಕರನ್ನು ಬಚಾವ್ ಮಾಡಲಾಗಿದ್ದು, ಅಂಡರ್ ಪಾಸ್ ನಲ್ಲಿ ಸಿಲುಕಿಕೊಂಡಿದ್ದ ಬಸ್ ಗಳನ್ನು ಪೊಲೀಸರು ಮತ್ತು ಅಗ್ನಿಶಾಮಕ ದಳದ ಸಿಬ್ಬಂದಿ ಹೊರ ತೆಗೆದಿದ್ದಾರೆ. ಬಸವೇಶ್ವರ ನಗರ, ವೀರನಗೌಡ ಕಾಲೋನಿಯಲ್ಲಿ ಮರ, ವಿದ್ಯುತ್ ಕಂಬಗಳು ಬಿದ್ದಿವೆ.
ಸತತ ಅರ್ಧಗಂಟೆಯ ಕಾಲ ಬಿರುಗಾಳಿ ಸಹಿತ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಲ್ಲಾಪುರ ಸಂಪೂರ್ಣ ಜಲಾವೃತವಾಗಿದೆ. ರಾಜ ಕಾಲುವೆ ಒತ್ತುವರಿಯಿಂದ ಮನೆಗಳಿಗೆ ನೀರು ನುಗ್ಗಿ ಭಾರೀ ಅನಾಹುತ ಉಂಟಾಗಿದೆ. ಮಳೆ ನೀರು ಮನೆಗಳಿಗೆ ನುಗ್ಗಿರುವುದರಿಂದ ಹಳೆಯ ಮನೆಗಳ ಗೋಡೆಗಳು ಬಿರುಕು ಬಿಟ್ಟು ಕುಸಿಯುವಂತಹ ಸ್ಥಿತಿ ಎದುರಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ.
ಇತ್ತ ಖಾಸಗಿ ಶಾಲೆ ಮಳೆಯ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ. ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಒಳಹರಿವು ಹೆಚ್ಚಿದೆ. ಬೋಳಮಾರನಹಳ್ಳಿಯಲ್ಲಿ ಅರ್ಕಾವತಿ ಕಾಲುವೆ ಮುಳುಗಿ ಹೋಗಿ ಸ್ಥಳೀಯರು ಪರದಾಡಿದ್ರು. ಮಲ್ಲಾಪುರದಲ್ಲಿ ರಾಯಲ್ ಇಂಟರ್ ನ್ಯಾಷನಲ್ ಶಾಲೆ ಆವರಣಕ್ಕೆ ನೀರು ನುಗ್ಗಿದ್ರೆ, ಹಳೆಯ ಮನೆಗಳು ಬಿರುಕು ಬಿಟ್ಟಿದ್ದು ಕುಸಿದು ಬೀಳುವ ಸ್ಥಿತಿಯಲ್ಲಿವೆ.
ಕೊಪ್ಪಳದಲ್ಲಿ ಧಾರಾಕಾರ ಮಳೆ ಆಗಿದೆ. ಆದರೆ ಗಂಗಾವತಿ ತಾಲೂಕು ಆಸ್ಪತ್ರೆಯಲ್ಲಿ ಮಳೆ ನೀರು ಬಾಣಂತಿಯರಿದ್ದ ವಾರ್ಡ್, ಎಕ್ಸ್ ರೇ ಕೊಠಡಿಗೆ ನುಗ್ಗಿದೆ. ಆಸ್ಪತ್ರೆ ಸುತ್ತಲಿರುವ ಚರಂಡಿ ಬ್ಲಾಕ್ ಆಗಿದ್ದು, ಜೋರು ಮಳೆ ಬಂದರೆ ಆಸ್ಪತ್ರೆಯ ಮೇಲ್ಛಾವಣಿಯಿಂದ ನೀರು ಚರಂಡಿ ಸೇರುವ ಬದಲಿಗೆ ಆಸ್ಪತ್ರೆಗೆ ನುಗ್ಗಿದೆ. ನೀರು ನುಗ್ಗಿದ್ದರಿಂದ ರೋಗಿಗಳು, ಅವರ ಸಂಬಂಧಿಕರು ಕೆಲ ಹೊತ್ತು ಪರದಾಡುವಂತಾಯಿತು.
ಕಳೆದ ಮೂರು-ನಾಲ್ಕು ವರ್ಷದಿಂದ ಭೀಕರ ಬರಕ್ಕೆ ತುತ್ತಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದ್ದು, ನಗರದ ಸುತ್ತಲೂ ವರುಣ ಆರ್ಭಟಕ್ಕೆ ರಸ್ತೆ ಮುಳುಗಡೆಯಾಗಿದೆ. ತೆಂಗಿನ ತೋಟಗಳಲ್ಲಿ ಅಡಿಯಷ್ಟು ನೀರು ನಿಂತಿದ್ದು, ಮಳೆಯ ಅಬ್ಬರ ಜೋರಾಗಿದ್ದರ ಪರಿಣಾಮ ಯಗಟಿ ಸಮೀಪದ ಕಲ್ಲಾಪುರ ಗ್ರಾಮ ನೀರಿನಿಂದ ತುಂಬಿದೆ. ಕಡೂರು ತಾಲೂಕಿನ ಸುತ್ತಮುತ್ತ ಉತ್ತಮ ಮಳೆಯಾಗಿದೆ.
ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಕಡೂರು-ಯಗಟಿ ಮಾರ್ಗ ನೀರಿನಿಂದ ಮುಚ್ಚಿ ಹೋಗಿದೆ. ಮಳೆ ನಿಂತ ಮೇಲೆ ಗ್ರಾಮಗಳಲ್ಲಿ ಮನೆಯ ಬದಿಯಲ್ಲಿ ಹರಿಯುತ್ತಿರುವ ನೀರು ಜನರಲ್ಲಿ ಆತಂಕ ತಂದಿದೆ. ಎರಡು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ಥವ್ಯಸ್ತಗೊಂಡಿದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಹನಿ ನೀರಿಗೂ ಹಾಹಾಕಾರ ಅನುಭವಿಸ್ತಿದ್ದ ಕಡೂರಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ಭಾನುವಾರ ಸುರಿದ ಧಾರಾಕಾರ ಮಳೆಯಿಂದಾಗಿ ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ಬಳಿ ಇರುವ ಬಾಜಿರಾಯನಹಳ್ಳ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ರಸ್ತೆ ಮೇಲೆಲ್ಲಾ ನೀರು ಹರಿಯುತ್ತಿದೆ. ಇದರಿಂದ ರಸ್ತೆ ಮೇಲೆ ಓಡಾಡಲು ಜನರಿಗೆ ಭೀತಿ ಎದುರಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಈ ರೀತಿಯ ಭೀತಿ ಎದುರಾಗುತ್ತಿದ್ದು, ಸರಕಾರ ಮತ್ತು ಜನಪ್ರತಿನಿಧಿಗಳು ಹಳ್ಳದ ಬ್ರಿಡ್ಜ್ ಎತ್ತರಿಸಲು ಕ್ರಮಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.