ಬೆಂಗಳೂರು: ರಾಜ್ಯದೆಲ್ಲೆಡೆ ಮಳೆ ಜೋರಾಗಿದ್ದು, ಕರಾವಳಿ, ಉತ್ತರ ಕರ್ನಾಟಕ ಮತ್ತು ದಕ್ಷಿಣ ಒಳನಾಡಿನಲ್ಲಿ ಮಳೆ ಮುಂದುವರಿದಿದೆ.
ಕರಾವಳಿಯಲ್ಲಿ ಮಳೆ ಬಿರುಸು ಪಡೆದಿದ್ದು, ಮಂಗಳೂರು ನಗರದ ವಿವಿಧೆಡೆ ಮಳೆ ನೀರು ಅವಾಂತರ ಸೃಷ್ಟಿಸಿದೆ. ಚರಂಡಿ ಬ್ಲಾಕ್ ಆಗಿ ಮಳೆ ನೀರು ಹರಿಯಲು ಸಾಧ್ಯವಾಗದೆ ಮಂಗಳೂರು ರೈಲು ನಿಲ್ದಾಣಕ್ಕೂ ನೀರು ನುಗ್ಗಿತ್ತು. ರೈಲು ನಿಲ್ದಾಣದ ಮುಂಭಾಗದಲ್ಲಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆಯಲ್ಲಿ ಚರಂಡಿ ಬ್ಲಾಕ್ ಆಗಿತ್ತು. ಗುರುವಾರ ಒಂದೇ ಸಮನೆ ಸುರಿದ ಮಳೆಗೆ ನೀರು ರೈಲು ನಿಲ್ದಾಣದ ಒಳಗೆ ನುಗ್ಗಿದೆ.
Advertisement
Advertisement
ಟಿಕೆಟ್ ಕೌಂಟರ್ ನಲ್ಲಿ ನೀರು ನಿಂತಿತ್ತು. ನಿನ್ನೆ ರಾತ್ರಿ ಮಳೆಯಾಗಿದ್ದರಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಕರಾವಳಿ ಜನ ನಿಟ್ಟುಸಿರು ಬಿಟ್ಟಿದ್ದಾರೆ. ಮಳೆಗಾಲ ಶುರುವಾಗಿ ಒಂದೂವರೆ ತಿಂಗಳಾದರೂ ಮಳೆ ಬಿರುಸು ಪಡೆಯದೆ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗಿತ್ತು. ಈಗ ಎರಡು ದಿನಗಳಿಂದ ಒಂದಷ್ಟು ಮಟ್ಟಿಗೆ ಮಳೆಯಾಗಿದೆ. ಆದರೆ ನದಿಗಳು ಮಾತ್ರ ತುಂಬಿ ಹರಿದಿಲ್ಲ. ನೇತ್ರಾವತಿ, ಕುಮಾರಧಾರ ನದಿಗಳು ತುಂಬದೇ ಇರುವುದು ಆತಂಕ ಸೃಷ್ಟಿಸಿದೆ.
Advertisement
Advertisement
ಇದೇ ವೇಳೆ ಲಾಲ್ ಬಾಗ್ ಬಳಿಯೂ ಚರಂಡಿ ಬ್ಲಾಕ್ ಆಗಿ ಮಳೆ ನೀರು ರಸ್ತೆಯಲ್ಲಿ ನಿಂತಿದ್ದು, ವಾಹನಗಳ ಸಂಚಾರಕ್ಕೆ ತೊಂದರೆ ಉಂಟಾಗಿತ್ತು. ಹಳೆ ಬಂದರಿಗೆ ಸಾಗುವ ರಸ್ತೆಯಲ್ಲೂ ನೀರು ನಿಂತು ಬ್ಲಾಕ್ ಆಗಿದ್ದರಿಂದ ವ್ಯಾಪಾರಿಗಳು ಸಂಕಷ್ಟಕ್ಕೀಡಾಗಿದ್ದರು. ನಗರದ ಎಂ.ಜಿ.ರಸ್ತೆಯಲ್ಲೂ ರಸ್ತೆಯಲ್ಲೇ ನೀರು ನಿಂತಿದ್ದು, ಜನ ಸಂಕಷ್ಟಕ್ಕೀಡಾಗಿದ್ದರು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನಲ್ಲಿ ಧಾರಾಕಾರ ಮಳೆ ಆಗಿದೆ. ಹೆಡಿಯಾಲ ಗ್ರಾಮದ ಕೆರೆ ಒಡೆದು ಮನೆಗಳಿಗೆ ನೀರು ನುಗ್ಗಿದೆ. ಅಂತರವಳ್ಳಿ ಕ್ರಾಸ್‍ನಲ್ಲಿ 50ಕ್ಕೂ ಅಧಿಕ ಗುಡಿಸಲುಗಳಿಗೆ ಮಳೆ ನೀರು ನುಗ್ಗಿದೆ. ಧಾರವಾಡದಲ್ಲಿ ಭರ್ಜರಿ ಮಳೆಯಾಗಿದ್ದು, ತಗ್ಗು ಪ್ರದೇಶದ ಮನೆಗಳಿಗೆ ನೀರು ನುಗ್ಗಿತ್ತು. ಜನ್ನತ್ ನಗರ ಬಡಾವಣೆ ಜಲಾವೃತವಾಗಿತ್ತು. ಕೊಡಗು ಜಿಲ್ಲೆಯಲ್ಲಿ 5 ದಿನ ಭಾರೀ ಮಳೆ ಆಗುತ್ತೆ ಎಂದು ಆರೆಂಜ್ ಅಲರ್ಟ್ ಘೋಷಿಸಲಾಗಿತ್ತು. ಆದರೆ ಇದೂವರೆಗೆ ಮಳೆ ಬರುವ ಲಕ್ಷಣಗಳೇ ಕಾಣುತ್ತಿಲ್ಲ.
ಬಿಸಿಲಿನಿಂದ ಕೆಂಗೆಟ್ಟಿದ್ದ ಬೀದರ್ ಜಿಲ್ಲೆಯ ರೈತರಿಗೆ ಹಾಗೂ ಜನರಿಗೆ ವರುಣ ದೇವ ಕೃಪೆ ತೋರಿದ್ದು, ಸತತ ಒಂದು ಗಂಟೆ ಮಳೆ ಸುರಿದಿದೆ. ಬೀದರ್ ನಗರ ಹಾಗೂ ತಾಲೂಕು ಸೇರಿದಂತೆ ಹಲವು ಕಡೆ ಮಳೆರಾಯ ಕೃಪೆ ತೋರಿದ್ದು, ಮಳೆರಾಯನ ಆಗಮನದಿಂದಾಗಿ ಜಿಲ್ಲೆಯ ರೈತರಲ್ಲಿ ಮಂದಹಾಸ ಮೂಡಿದೆ.