ಬೆಂಗಳೂರು: ಭಾನುವಾರ ರಾತ್ರಿ ಮತ್ತು ಬೆಳಗ್ಗೆ ಅಬ್ಬರಿಸಿದ ಮಳೆ ಸಿಲಿಕಾನ್ ಸಿಟಿಯವರ ನಿದ್ದೆಗೆಡಿಸಿತ್ತು. ಆದರೆ ಸೋಮವಾರ ರಾತ್ರಿ ಮತ್ತೆ 10 ಗಂಟೆ ವೇಳೆಗೆ ಶುರುವಾದ ವರುಣನ ಆರ್ಭಟ 12 ಗಂಟೆವರೆಗೂ ಮುಂದುವರಿದಿದೆ.
ಮಳೆಯ ಜೊತೆಗೆ ಗುಡುಗು, ಮಿಂಚು ಬೆಂಗಳೂರಿಗರ ನಿದ್ದೆಗೆಡಿಸಿತು. ಭಾರೀ ಮಳೆಗೆ ಓಕಳೀಪುರಂ, ನಾಯಂಡಹಳ್ಳಿ, ನಂದಿನಿಲೇಔಟ್, ಮಲ್ಲೇಶ್ವರಂ, ಮತ್ತಿಕೆರೆ ಭಾಗಗಳು ಅಕ್ಷರಶಃ ಜಲಾವೃತಗೊಂಡಿತ್ತು. ರಸ್ತೆಗಳಲ್ಲಿ ನೀರು ನಿಂತು ವಾಹನ ಸವಾರರು ಪರದಾಡಿದ್ದಾರೆ. ಅಲ್ಲದೆ ಜಯನಗರ, ಮಾರೇನಹಳ್ಳಿ, ಜೆಪಿನಗರ, ಡಾಲರ್ಸ್ ಕಾಲೋನಿ, ಗೊಟ್ಟಿಗೆರೆಯಲ್ಲಿ ತಗ್ಗು ಪ್ರದೇಶದ 350ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿ ಜನ ರಾತ್ರಿಯೆಲ್ಲಾ ಜಾಗರಣೆ ಮಾಡುವಂತಾಗಿತ್ತು.
Advertisement
Advertisement
ಸುಮಾರು ಅರ್ಧಗಂಟೆಗೂ ಹೆಚ್ಚು ಕಾಲ ಸುರಿದ ಧಾರಾಕಾರ ಮಳೆಯಿಂದ ಮೆಜೆಸ್ಟಿಕ್ ಬಳಿಯ ಓಕಳೀಪುರಂ ಅಂಡರ್ ಪಾಸ್ ಸಂಪೂರ್ಣ ಮುಳುಗಡೆ ಆಗಿತ್ತು. ವಾಹನ ಸವಾರರು ವಾಹನ ಚಲಾಯಿಸಲಾಗದೇ ಪರದಾಡಿದ್ದಾರೆ. ಸುಮಾರು 2 ಅಡಿಗೂ ಹೆಚ್ಚು ನೀರು ನಿಂತು ರಸ್ತೆಯ ಡಿವೈಡರ್ ಕಾಣದಾಗಿತ್ತು. ಮೈಸೂರು ರಸ್ತೆ ನಾಯಂಡನಹಳ್ಳಿಯಲ್ಲಿ ಚಲಿಸುತ್ತಿದ್ದ ಕಾರೊಂದು ಸಣ್ಣ ಒಳಚರಂಡಿಗೆ ಬಿದ್ದಿದೆ. ಬೆಂಗಳೂರಿನಿಂದ ಮೈಸೂರು ಕಡೆಗೆ ಹೋಗುತ್ತಿದ್ದ ಕಾರು ನೀರಿನ ಜೊತೆಗೆ ರಾಜಕಾಲುವೆಗೆ ನುಗ್ಗಿದೆ. ಅದೃಷ್ಟವಶಾತ್ ಪ್ರಾಣಾಪಾಯದಿಂದ ಚಾಲಕ ಪಾರಾಗಿದ್ದಾರೆ.
Advertisement
ಮಾರೇನಹಳ್ಳಿ ರಸ್ತೆ ಸಂಪೂರ್ಣ ಜಲಾವೃತವಾಗಿದ್ದು, ರಸ್ತೆಯಲ್ಲಿ ನಿಲ್ಲಿಸಿದ್ದ ಕಾರು, ಬೈಕ್ ಗಳೆಲ್ಲಾ ಭಾಗಶಃ ಮುಳುಗಡೆ ಆಗಿದೆ. ಮೈಸೂರು ರಸ್ತೆಯ ರಾಜಕಾಲುವೆ ಪಕ್ಕ ಇರುವ ಮನೆಗಳಿಗೆ ಮಳೆ ನೀರು ನುಗ್ಗಿ ದೊಡ್ಡ ಅವಾಂತರವೇ ಸೃಷ್ಟಿಸಿದೆ. ರಸ್ತೆಯೆಲ್ಲಾ ಜಲಾವೃತವಾಗಿ ಭಾರೀ ಗಾತ್ರದ ವಾಹನಗಳು ಸಂಚರಿಸಲು ಪರದಾಟ ನಡೆಸಿವೆ.
Advertisement
ರಾತ್ರಿ ಸುರಿದ ಮಳೆಗೆ ಬನ್ನೇರುಘಟ್ಟ ಬಳಿಯ ಮೆಗಾ ಸಿಟಿ ರಸ್ತೆ ಸಂಪೂರ್ಣ ಜಲಾವೃತವಾಗಿತ್ತು. ರಸ್ತೆ ಮೇಲೆ 1 ಅಡಿಗೂ ಹೆಚ್ಚು ನೀರು ನಿಂತ ಪರಿಣಾಮ ರಸ್ತೆ ಬಹುತೇಕ ಬಂದ್ ಆಗಿತ್ತು. ಬಿಇಎಲ್ ಸರ್ಕಲ್ ನಲ್ಲಿ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಾಗಿತ್ತು. ರಸ್ತೆ ಕಾಣದೇ ಮನೆ ಸೇರಲು ವಾಹನ ಸವಾರರು ಪರದಾಡಿದ್ದಾರೆ. ಅಲ್ಲದೆ ರಸ್ತೆ ಪಕ್ಕದಲ್ಲಿ ಮಿನಿ ಜಲಪಾತವೇ ಸೃಷ್ಟಿ ಆಗಿತ್ತು. ನವೋದಯ ನಗರದಲ್ಲಿ ರಸ್ತೆಗಳು ಭಾರೀ ಮಳೆಯಿಂದ ಮಿನಿ ಕೆರೆಗಳಂತಾಗಿತ್ತು. ಇತ್ತ ವಿದ್ಯುತ್ ಸಂಪರ್ಕವೂ ಇಲ್ಲದೆ ಮನೆಯಿಂದ ಹೊರಬರಲಾಗದೇ ಜನರು ಪರದಾಡಿದ್ದಾರೆ.
ಕೋಣನಕುಂಟೆಯಲ್ಲಿ ಕಳೆದ ರಾತ್ರಿ ಸುರಿದ ಧಾರಾಕಾರ ಮಳೆಗೆ ಮನೆಯೊಂದಕ್ಕೆ ನೀರು ನುಗ್ಗಿದೆ. ಮನೆಯಲ್ಲಿದ್ದ ಸೋಫಾ ಸೆಟ್, ದಿವಾನ್ ಕಾಟ್‍ಗಳೆಲ್ಲಾ ನೀರಿನಲ್ಲಿ ಮುಳುಗಿ ಹೋಗಿತ್ತು. ಸಾವಿರಾರು ರೂಪಾಯಿ ಬೆಲೆಬಾಳುವ ವಸ್ತುಗಳೆಲ್ಲಾ ನೀರಿನಲ್ಲಿ ಮುಳುಗಿ ಹೋಗಿವೆ. ಕಾಮಾಕ್ಷಿಪಾಳ್ಯದ ಕಾವೇರಿಪುರದಲ್ಲಿ ತಗ್ಗು ಪ್ರದೇಶದ ಮನೆಗೆ ಮಳೆ ನೀರು ನುಗ್ಗಿ ಭಾರೀ ಅವಾಂತರವೇ ಸೃಷ್ಟಿ ಆಗಿತ್ತು. ಮಳೆ ನೀರಿನ ಜೊತೆಗೆ ಚರಂಡಿ ನೀರು ಸೇರಿ ಮನೆಯಲ್ಲಿದ್ದ ಸಾಮಾಗ್ರಿಗಳೆಲ್ಲಾ ತೇಲಾಡಿದ್ದವು. ಹೆಬ್ಬಾಳದ ಭದ್ರಪ್ಪ ಲೇಔಟ್ ನಲ್ಲಿ ಮನೆಯೊಂದಕ್ಕೆ ನೀರು ನುಗ್ಗಿತ್ತು.
ಇನ್ನು ಮಲ್ಲೇಶ್ವರಂನಲ್ಲೂ ಪೈಪ್ ಲೈನ್ ಒಡೆದು ರಸ್ತೆ ತುಂಬಾ ನೀರು ತುಂಬಿಕೊಂಡಿತ್ತು. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳು ಜಲಾವೃತಗೊಂಡು ನದಿಯಂತೆ ನೀರು ಹರಿಯುತ್ತಿತ್ತು. ಸಿಲ್ಕ್ ಬೋರ್ಡ್ ರಸ್ತೆಯಲ್ಲಿ ಪ್ರವಾಹದ ಪರಿಸ್ಥಿತಿ ನಿರ್ಮಾಣವಾಗಿತ್ತು. ರಸ್ತೆಯ ಡಿವೈಡರ್ ಮಟ್ಟದಲ್ಲಿ ಕೆಸರು ನೀರು ತುಂಬಿಕೊಂಡು ವಾಹನ ಸವಾರರು ಪರದಾಡಿದ್ದಾರೆ. ಮಳೆಯಿಂದಾಗಿ ಯಶವಂತಪುರದ ಪೈಪ್‍ಲೈನ್ ಒಡೆದು ರಸ್ತೆ ನದಿಯಂತಾಗಿತ್ತು.
ಮತ್ತಿಕೆರೆಯಲ್ಲಿ ಮಳೆಗೆ ಬೃಹತ್ ಗಾತ್ರದ ಮರವೊಂದು ಧರೆಗುರುಳಿತ್ತು. ಮಳೆಯಿಂದಾಗಿ ವಿದ್ಯುತ್ ಸಂಪರ್ಕವೂ ಇಲ್ಲದೇ ವಾಹನ ಸವಾರರು, ಸ್ಥಳೀಯರು ಪರದಾಡಿದ್ದರು. ಮಳೆಯ ನಡುವೆ ಸ್ಥಳೀಯರೇ ಮರ ತೆರವು ಕಾರ್ಯದಲ್ಲಿ ತೊಡಗಿದ್ದರು. ಮಳೆಯಿಂದಾಗಿ ರಸ್ತೆಯೆಲ್ಲಾ ಕೆರೆಯಂತಾಗಿತ್ತು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv