ಬೆಂಗಳೂರು: ಬೆಂಗಳೂರಿನ ಹಲವೆಡೆ ಮಂಗಳವಾರ ಮಧ್ಯಾಹ್ನ ಗಾಳಿ ಸಹಿತ ಭಾರೀ ಮಳೆಯಾಗಿದ್ದು, ಜನರು ಪರದಾಡಿದ್ದಾರೆ.
ರಾಜಾಜಿನಗರ, ಮಲ್ಲೇಶ್ವರಂ, ಶೇಷಾದ್ರಿಪುರಂ, ಯಶವಂತಪುರ, ಗೊರಗುಂಟೆಪಾಳ್ಯ, ಜಾಲಹಳ್ಳಿ ಸೇರಿದಂತೆ ನಗರದ ಹಲವೆಡೆ ಮಳೆಯಾಗಿದೆ. ಮಳೆಯಿಂದಾಗಿ ಸರ್ಕಲ್ ಮಾರಮ್ಮ ಮತ್ತು ಟಾಟಾ ಇನ್ಸ್ ಸ್ಟಿಟ್ಯೂಟ್ ರಸ್ತೆಯಲ್ಲಿ ಫುಲ್ ಟ್ರಾಫಿಕ್ ಜಾಮ್ ಆದ ಪರಿಣಾಮ ವಾಹನ ಸವಾರರು ಪರದಾಡಿದ್ದಾರೆ. ಅಷ್ಟೇ ಅಲ್ಲದೇ ರಾಮಯ್ಯ ಕಾಲೇಜು ಮುಂಭಾಗ ಕಾರಿನ ಮೇಲೆ ಮರ ಬಿದ್ದಿದೆ. ಮರ ಬಿದ್ದ ಪರಿಣಾಮ ಕಾರಿನಲ್ಲಿದ್ದವರಿಗೆ ಸಣ್ಣ ಪುಟ್ಟ ಗಾಯವಾಗಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಮಲ್ಲೇಶ್ವರಂ 10ನೇ ಕ್ರಾಸ್, ಮಹಾಲಕ್ಷ್ಮಿ ಲೇಔಟ್, ಸದಾಶಿವ ನಗರ ಸೇರಿದಂತೆ 15 ಕ್ಕೂ ಹೆಚ್ಚು ಕಡೆ ಮರಗಳು ಬಿದ್ದಿವೆ. ಮೇಖ್ರಿ ಸರ್ಕಲ್, ಮತ್ತು ಎಸ್‍ಎಸ್‍ಎಲ್‍ಸಿ ಬೋರ್ಡ್ ಮುಂಭಾಗ ರಸ್ತೆಗೆ ಅಡ್ಡಲಾಗಿ ಮರಗಳು ಬಿದ್ದಿದೆ. ಪರಿಣಾಮ ಪ್ಯಾಲೆಸ್ ಗ್ರೌಂಡ್ ರಸ್ತೆ ಫುಲ್ ಟ್ರಾಫಿಕ್ ಜಾಮ್ ಉಂಟಾಗಿತ್ತು. ಯಶವಂತಪುರ ಬಸ್ ಸ್ಟ್ಯಾಂಡ್ ತುಂಬಾ ನೀರು ತುಂಬಿ ಪ್ರಯಾಣಿಕರು ಪರದಾಡುವಂತಾಗಿತ್ತು.
ಇನ್ನೂ ರಾಮಯ್ಯ ಆಸ್ಪತ್ರೆ ಮುಂದೆ ಪಾರ್ಕಿಂಗ್ ಲಾಟ್ ನಲ್ಲಿದ್ದ ಕಾರು, ಬೈಕ್ ಗಳ ಮೇಲೆ ಮರ ಉರುಳಿದೆ. ಕೂಡಲೇ ಸಾರ್ವಜನಿಕರು ಕಾರಿನಲ್ಲಿದ್ದ ಚಾಲಕನನ್ನ ರಕ್ಷಣೆ ಮಾಡಿದ್ದಾರೆ. ಮರ ಬಿದ್ದ ರಭಸಕ್ಕೆ ಒಲಾ ಕಾರು ಮತ್ತು ಟಿವಿಎಸ್ ಬೈಕ್ ಜಖಂ ಆಗಿದೆ. ಆದರೆ ಮರ ಬಿದ್ದು ಅರ್ಧ ಗಂಟೆ ಆಗಿದ್ದರೂ ಸ್ಥಳಕ್ಕೆ ಬಿಬಿಎಂಪಿ ಸಿಬ್ಬಂದಿ ಬಂದಿರಲಿಲ್ಲ.
ಪೂರ್ವ ಮುಂಗಾರಿನಲ್ಲಿ ಸಮಯದಲ್ಲಿ ರಾಜ್ಯಾದ್ಯಂತ ಭಾರೀ ಗುಡುಗು ಗಾಳಿ ಸಹಿತ ಆಗಾಗ ಮಳೆಯಾಗುವುದು ಸಹಜ. ಮೇ ತಿಂಗಳಲ್ಲಿ ಗುಡುಗು, ಗಾಳಿ ಸಹಿತ ಮಳೆ ಮುಂದುವರೆಯಲಿದೆ. ಮೋಡಗಳ ಸಾಲು ನಿರ್ಮಾಣವಾಗಿರುವ ಪ್ರದೇಶದಲ್ಲಿ ಮಳೆಯಾಗುತ್ತಿದೆ. ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಸ್ವಲ್ಪ ಹೆಚ್ಚು ಮಳೆಯಾಗುತ್ತಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ವಿಜ್ಞಾನಿ ಗವಾಸ್ಕರ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.