ಬೆಂಗಳೂರು: ಮಹಾರಾಷ್ಟ್ರ-ಬೆಳಗಾವಿ (Maharastra- Belagavi) ಭಾಗದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆಯಾಗ್ತಿದೆ. ಖಾನಾಪುರ ತಾಲೂಕಿನ ಭೂರಣಕಿ ಗ್ರಾಮದಲ್ಲಿ ನಿರಂತರ ಮಳೆಗೆ (Rain) ಎರಡು ಮನೆಯ ಗೋಡೆಗಳು ಕುಸಿದು ಬಿದ್ದಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಘಟಪ್ರಭಾ ನದಿ ಅಪಾಯಮಟ್ಟದಲ್ಲಿ ಹರೀತಿದೆ. ಹಿಡಕಲ್ ಜಲಾಶಯಕ್ಕೆ 30 ಸಾವಿರ ಕ್ಯೂಸೆಕ್ ನೀರು ಒಳ ಹರಿವಿದೆ. ಹುಕ್ಕೇರಿಯ ಹುನ್ನೂರು ಗ್ರಾಮದ ಹಿಡಕಲ್ ಡ್ಯಾಮ್ ನೀರಿನಲ್ಲಿದ್ದ ವಿಠಲ ದೇವಸ್ಥಾನ ಸಂಪೂರ್ಣ ಮುಳುಗಡೆಯಾಗಿದೆ.
Advertisement
ಸೇಡ್‍ಗಾಳಿ ಬಳಿ ನಿಸರ್ಗ ವಿಸ್ಮಯ ಸೃಷ್ಟಿಸಿದೆ. ಹಾಲಾತ್ರಿ ಹಳ್ಳ, ಮಲಪ್ರಭಾ ನದಿಯ ಸಂಗಮದ ಅಪೂರ್ವ ದೃಶ್ಯ ಕಣ್ಮನ ಸೆಳೆಯುತ್ತಿದೆ. ಗೋಕಾಕ್ ಫಾಲ್ಸ್ 180 ಅಡಿಯಿಂದ ಧುಮ್ಮಿಕ್ಕುತ್ತಿದ್ದು, ಭೋರ್ಗರೀತಿದೆ. ಜಿಲ್ಲೆಯ 3 ತಾಲೂಕುಗಳ ಶಾಲಾ- ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಇದನ್ನೂ ಓದಿ: ಮಳೆ ಅಬ್ಬರ – ಈ ಜಿಲ್ಲೆಗಳಲ್ಲಿ ಸೋಮವಾರ ಶಾಲಾ, ಕಾಲೇಜುಗಳಿಗೆ ರಜೆ
Advertisement
ಮಹಾರಾಷ್ಟ್ರದ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಮಳೆಯ ಅಬ್ಬರ ಮುಂದುವರಿದಿದೆ. ಹೀಗಾಗಿ ಕೃಷ್ಣಾ ನದಿ ನೀರಿನಲ್ಲಿ ಅಲ್ಪ ಏರಿಕೆ ಕಂಡಿದೆ. ಕೃಷ್ಣಾ ನದಿಗೆ 96,144 ಕ್ಯೂಸೆಕ್ ನೀರು ಹರಿದು ಬರ್ತಿದೆ. ಈ ಹಿನ್ನೆಲೆ ದೂದಗಂಗಾ, ವೇದಗಂಗಾ ಹಾಗೂ ಹೀರಣ್ಯಕೇಶಿ ನದಿಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ನದಿ ತೀರದ ಜಮೀನುಗಳಿಗೆ ನೀರು ನುಗ್ಗಿದೆ. ಇನ್ನು ಚಿಕ್ಕೋಡಿ ಉಪ ವಿಭಾಗ ವ್ಯಾಪ್ತಿಯ 9 ಕೆಳ ಹಂತದ ಸೇತುವೆಗಳ ಜಲಾವೃತ ಯಥಾಸ್ಥಿತಿ ಮುಂದುವರೆದಿದೆ. ಮನ್ಸೂರ್‍ಅಲಿ ದರ್ಗಾ ಸಂಪೂರ್ಣ ಮುಳುಗಡೆ ಆಗಿದೆ.
Advertisement
Advertisement
ಚಿಕ್ಕಮಗಳೂರಿನ ಕಳಸ ತಾಲೂಕಿನ ಹೆಬ್ಬಾಳೆ ಸೇತುವೆ ಮುಳುಗಡೆ ಆಗಿದೆ. ಸೇತುವೆ ಮೇಲೆ 2 ಅಡಿಯಷ್ಟು ನೀರು ಹರಿಯುತ್ತಿದೆ. ಇದರಿಂದ ಕಳಸ-ಹೊರನಾಡು ಸಂಪರ್ಕ ಬಂದ್ ಆಗಿದ್ದು, ಹತ್ತಾರು ಹಳ್ಳಿ ಸಂಪರ್ಕ ಕಳೆದುಕೊಂಡಿದೆ. ಅನ್ಯ ಮಾರ್ಗವಿದ್ದರೂ 8-10 ಕಿ.ಮೀ. ಸುತ್ತಿಕೊಂಡು ಬರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ತುಂಗಾ, ಭದ್ರಾ, ಹೇಮಾವತಿ ನದಿಗಳ ಒಳಹರಿವಿನಲ್ಲಿ ಹೆಚ್ಚಳವಾಗಿದೆ. ಜಾಂಬಳೆ ಸಮೀಪ ರಸ್ತೆಯ ಮೇಲೆ ಭದ್ರಾ ನದಿ ನೀರು ಹರಿಯುತ್ತಿದೆ.
ಹಾಸನ ಜಿಲ್ಲೆಯ ಮಲೆನಾಡು ಭಾಗದಲ್ಲಿ ವರುಣನ ಅಬ್ಬರ ಜೋರಾಗಿದ್ದು, ಭಾರೀ ಮಳೆಗೆ ಮೂಕನಮನೆ ಜಲಪಾತ ಧುಮ್ಮಿಕ್ಕಿ ಹರಿಯುತ್ತಿದೆ.. ಜಲಪಾತ ವೀಕ್ಷಣೆಗೆ ಬಂದು ನೀರಿನಲ್ಲಿ ಸಿಲುಕಿದ್ದ ಪ್ರವಾಸಿಗರನ್ನ ರಕ್ಷಣೆ ಮಾಡಲಾಗಿದೆ. ಶಾಲಾ- ಕಾಲೇಜುಗಳಿಗೆ ರಜೆ ಘೋಷಣೆ ಮಾಡಲಾಗಿದೆ.
ಕೊಡಗು ಜಿಲ್ಲೆಯಲ್ಲಿ ಕಳೆದ ಎರಡು ದಿನಗಳಿಂದ ಧಾರಾಕಾರವಾಗಿ ಸುರಿಯುತ್ತಿರುವ ಮಳೆಗೆ ಮಡಿಕೇರಿ ತಾಲೂಕಿನ ಮೂರ್ನಾಡು ಸಮೀಪದ ಬಲಮುರಿಯಲ್ಲಿ ಕಾವೇರಿ ನದಿಯ ಪ್ರತಾಪಕ್ಕೆ ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಕಿರುಸೇತುವೆ ಮುಳುಗಡೆಗೊಂಡಿದೆ. ಭಾಗಮಂಡಲದ ತ್ರಿವೇಣಿ ಸಂಗಮದ ಸ್ನಾನಘಟ್ಟ 2ನೇ ಬಾರಿಗೆ ಮುಳುಗಡೆಯಾಗಿದೆ. ಕಾವೇರಿ ನದಿ ಪಾತ್ರದ ಜನರು ಆತಂಕದಲ್ಲಿದ್ದಾರೆ.
ಮಂಡ್ಯದ ಶ್ರೀರಂಗಪಟ್ಟಣದಲ್ಲಿರುವ ಕೆಆರ್‍ಎಸ್ ಡ್ಯಾಂಗೆ ಒಳ ಹರಿವು ಹೆಚ್ಚಾಗಿದೆ. (ಸದ್ಯ 9,514 ಕ್ಯೂಸೆಕ್ ಒಳಹರಿವು ಹರಿದು ಬರ್ತಿದೆ.) ಹಾರಂಗಿ ಡ್ಯಾಂನಿಂದಲೂ ನೀರು ಬಿಡುಗಡೆ ಮಾಡಿರೋದ್ರಿಂದ (ನಾಳೆ) ಕೆಆರ್‍ಎಸ್‍ಗೆ ಒಳಹರಿವು ಹೆಚ್ಚಾಗಲಿದೆ. ಮಳವಳ್ಳಿ ತಾಲೂಕಿನ ಗಗನಚುಕ್ಕಿ ಜಲಪಾತ ಬಣಗುಡುತ್ತಿದೆ. ಕಾವೇರಿ ಜಲಾನಯನ ಪ್ರದೇಶದಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಮಳೆ ಆಗಿಲ್ಲ.
Web Stories