ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ವರುಣನ ಅಬ್ಬರ ಇಂದು ಕೂಡ ಮುಂದುವರಿದಿದೆ. ಜಿಲ್ಲೆಯಾದ್ಯಂತ 42.7 ಮಿ.ಮೀ ಮಳೆಯಾಗಿದ್ದು ಕರಾವಳಿ ಭಾಗದ ತಗ್ಗು ಪ್ರದೇಶಗಳಲ್ಲಿ ನೀರು ನುಗ್ಗಿ ಜನಜೀವನವನ್ನು ಅಸ್ತವ್ಯಸ್ತಗೊಳಿಸಿದೆ.
ಅಂಕೋಲ ಭಾಗದಲ್ಲಿ ಗಂಗಾವಳಿ ನದಿ ನೀರು ತುಂಬಿ ತಗ್ಗು ಪ್ರದೇಶದ ಬಿಳಿಹೊಂಯ್ಗಿ ಸೇರಿದಂತೆ ಹಲವು ನದಿ ತಟದ ಗ್ರಾಮಗಳಲ್ಲಿ ನೀರು ತುಂಬಿದ್ದು ಮನೆಗಳಿಗೆ ಸಹ ಹಾನಿಯಾಗಿದೆ. ಜಿಲ್ಲೆಯ ಯಲ್ಲಾಪುರ ಜೋಯಿಡಾ ಭಾಗದಲ್ಲಿ ಗುಡ್ಡ ಕುಸಿತ ಮುಂದುವರಿದಿದ್ದು ಮಳೆಯಿಂದಾಗಿ ಭಡ್ತಿ ನದಿ ಸೇತುವೆ ಸಂಪೂರ್ಣ ಮುಳುಗಿ ಹೋಗಿದೆ.
ಕಾಳಿ ನದಿ ಜಲಾಶಯದಲ್ಲಿ ಉತ್ತಮ ಮಳೆಯಿಂದಾಗಿ ಜಲಾಶಯ ತುಂಬಿದ್ದು, ಕೊಡಸಳ್ಳಿ ಡ್ಯಾಮ್ ನಿಂದ ಕದ್ರಾ ಜಲಾಶಯಕ್ಕೆ 2.1 ಟಿಎಂಸಿ ನೀರನ್ನು ಬಿಡುಗಡೆ ಮಾಡಲಾಗಿದೆ. ಇನ್ನೆರೆಡು ದಿನ ಕರಾವಳಿ ಭಾಗದಲ್ಲಿ ವ್ಯಾಪಕ ಮಳೆ ಆಗುವ ಸಾಧ್ಯತೆಯಿದ್ದು, ನದಿ ಹಾಗೂ ಸಮುದ್ರದ ಬದಿಯಲ್ಲಿ ವಾಸಿಸುವ ಜನರಿಗೆ ಎಚ್ಚರಿಕೆಯಿಂದ ಇರಲು ಜಿಲ್ಲಾಡಳಿತ ಸೂಚನೆ ನೀಡಿದ್ದು ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ತಿಳಿಸಿದೆ.