ಬೆಂಗಳೂರು: ರಾಜ್ಯಾದ್ಯಂತ ಮಳೆ ಅಬ್ಬರ ಮುಂದುವರಿದಿದೆ. ತಡರಾತ್ರಿಯೂ ಬೆಂಗಳೂರು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ವರುಣ ಅಬ್ಬರಿಸಿದ್ದಾನೆ. ಇನ್ನೂ ಬಿಸಿಲ ನಗರಿ ಬಳ್ಳಾರಿಯಲ್ಲಿ ಭೀಕರ ಮಳೆಗೆ ಪ್ರವಾಹ ಪರಿಸ್ಥಿತಿ ಉಂಟಾಗಿದ್ದು, ಸಿಂಧವಾಳ ಗ್ರಾಮದಲ್ಲಿ ಪ್ರವಾಹಕ್ಕೆ ಸಿಲುಕಿದ್ದ ರೈತರೊಬ್ಬರನ್ನು ರಕ್ಷಣೆ ಮಾಡಲಾಗಿದೆ.
Advertisement
ಗುರುವಾರ ಎಂದಿನಂತೆ ತೋಟಕ್ಕೆ ತೆರಳಿದ್ದ ರೈತ ಶ್ರೀನಿವಾಸ್ ಹಳ್ಳದ ನೀರಿನ ಪ್ರಮಾಣ ಹೆಚ್ಚಾಗಿದ್ದರಿಂದ ಜೀವದಾಸೆಗೆ ಮರವೇರಿ ಕುಳಿತಿದ್ದರು. ಈ ಮಾಹಿತಿ ಪಡೆದ ಜಿಲ್ಲಾಡಳಿತ 125 ಕ್ಕೂ ಹೆಚ್ಚಿನ ರಕ್ಷಣಾ ಸಿಬ್ಬಂದಿಯೊಂದಿಗೆ ರೈತ ಶ್ರೀನಿವಾಸ್ ಅವರನ್ನು ರಕ್ಷಣೆ ಮಾಡಿದೆ. ಈ ರಕ್ಷಣಾ ಕಾರ್ಯವನ್ನು ವೀಕ್ಷಿಸಲು ಸ್ಥಳದಲ್ಲಿ ನೂರಾರು ಸಂಖ್ಯೆಯಲ್ಲಿ ಜನರು ಜಮಾಯಿಸಿದ್ದರು. ರಕ್ಷಣಾ ಕಾರ್ಯಚಾರಣೆ ವೇಳೆ ಬಳ್ಳಾರಿ ಎಸಿ, ತಹಶೀಲ್ದಾರ್, ಡಿವೈಎಸ್‍ಪಿ, ಅಗ್ನಿಶಾಮಕದಳದ ಸಿಬ್ಬಂದಿ ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು. ರೈತ ಶ್ರೀನಿವಾಸ್ ಅಂಗವಿಕಲರಾಗಿದ್ದು, 12 ಗಂಟೆಗಳ ಕಾಲ ಮರ ಹತ್ತಿ ಕುಳಿತ ಧೈರ್ಯವನ್ನು ಮೆಚ್ಚಿ ಮಾಜಿ ಶಾಸಕ, ಗಣಿ ಉದ್ಯಮಿ ಸೂರ್ಯನಾರಾಯಣ ರೆಡ್ಡಿ 11 ಸಾವಿರ ರೂ. ಬಹುಮಾನ ಘೋಷಿಸಿದ್ದಾರೆ.
Advertisement
ಬಳ್ಳಾರಿ ತಾಲೂಕಿನ ಬಸರಕೋಡು ಗ್ರಾಮದ ಸುತ್ತ ಮುತ್ತ ಡ್ರೋನ್ ಕ್ಯಾಮೆರಾದ ಮೂಲಕ ಮಳೆ ದೃಶ್ಯಗಳನ್ನ ಪಬ್ಲಿಕ್ ಟಿವಿ ಸೆರೆ ಹಿಡಿದಿದೆ. ಫೋಟೋಗ್ರಾಫರ್ ಮಹೇಶ್ ಹನ್ಸಿ ಅನ್ನೋವ್ರು ಡ್ರೋನ್ ಬಳಸಿ ಈ ದೃಶ್ಯ ತೆಗೆದಿದ್ದಾರೆ.
Advertisement
Advertisement
ಅತ್ತ ರಾಯಚೂರಿನ ಲಿಂಗಸುಗೂರಿನಲ್ಲಿ ಸುರಿದ ಭಾರೀ ಮಳೆಗೆ ತಾಲೂಕಿನ ಬುದ್ದಿನ್ನಿ ಕೆರೆ ಒಡೆದಿದ್ದು ಸುತ್ತಮುತ್ತಲ ಗ್ರಾಮಗಳಿಗೆ ನೀರು ನುಗ್ಗಿದೆ. ಗುಡಿಹಾಳ ಗ್ರಾಮ ಸಂಪೂರ್ಣ ಜಲಾವೃತವಾಗಿದೆ. ಬುದ್ದಿನ್ನಿ, ಮಟ್ಟೂರಿನಲ್ಲೂ ಮನೆಗಳಿಗೆ ನೀರು ನುಗ್ಗಿದೆ. ಬೆಳಗಿನ ಜಾವ ಕೆರೆ ಒಡೆದಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಹೊಲಗಳಲ್ಲಿ ನೀರು ನಿಂತಿದ್ದು ಬೆಳೆಗಳು ಸಂಪೂರ್ಣ ಹಾನಿಯಾಗಿವೆ. ರಸ್ತೆ ಸಂಪರ್ಕ ಸಂಪೂರ್ಣ ಕಡಿತಗೊಂಡಿದೆ. ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಕೆರೆ ತುಂಬಿದ್ದು, ಕೆರೆ ಒಡೆದ ಹಿನ್ನೆಲೆಯಲ್ಲಿ ಮಸ್ಕಿ ನಾಲಾ ಡ್ಯಾಮಿಗೆ ಹೆಚ್ಚು ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಡ್ಯಾಮ್ ನಿಂದ ಹೆಚ್ಚುವರಿ ನೀರು ಹಳ್ಳಕ್ಕೆ ಬಿಡುಗಡೆ ಮಾಡಲಾಗುತ್ತಿದೆ.
ಹಾಸನ ಜಿಲ್ಲೆಯಾದ್ಯಂತ ರಾತ್ರಿಯಿಡೀ ಭಾರಿ ಮಳೆ ಸುರಿದಿದ್ದು, ತಾಲೂಕಿನ ತೇಜೂರು ಗ್ರಾಮದಲ್ಲಿ ಐದು ಮನೆಗಳು ಕುಸಿದಿವೆ. ಘಟನಾ ಸಂದರ್ಭದಲ್ಲಿ ಮನೆಯಲ್ಲಿದ್ದ ಮಗು ಪಾರಾಗಿದ್ದು ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಸತತವಾಗಿ ಸುರಿಯುತ್ತಿರುವ ಭಾರೀ ಮಳೆಗೆ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆ ನಾಶವಾಗಿದ್ದು, ಲಕ್ಷಾಂತರ ರೂ. ನಷ್ಟವಾಗಿದೆ.
ಕಲಬುರಗಿ ಜಿಲ್ಲೆಯಲ್ಲಿ ಸತತ ಮಳೆಯ ಹಿನ್ನೆಲೆಯಲ್ಲಿ ಸೇಡಂ ಪಟ್ಟಣದ ಕಮಲಾವತಿ ನದಿ ಉಕ್ಕಿ ಹರಿದಿದೆ. ಎರಡು ತಿಂಗಳ ಹಿಂದೆಯಷ್ಟೆ ಒಂದೂವರೆ ಕೋಟಿ ರೂ. ಹಣ ಖರ್ಚು ಮಾಡಿ ನದಿಗೆ ನಿರ್ಮಾಣ ಮಾಡಲಾಗಿದ್ದ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಿದೆ. ಕಳಪೆ ಕಾಮಾಗಾರಿಯೇ ಬ್ರಿಡ್ಜ್ ನೀರಿನಲ್ಲಿ ಕೊಚ್ಚಿ ಹೋಗಲು ಕಾರಣ ಅಂತಾ ಜನ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಅಲ್ಲದೇ ಜಿಲ್ಲೆಯಲ್ಲಿ ಕಳೆದ 15 ದಿನಗಳಿಂದ ಸುರಿಯುತ್ತಿರುವ ಮಳೆಗೆ ತೊಗರಿ ಬೆಳೆ ಸಂಪೂರ್ಣ ನಾಶವಾಗಿದೆ. ಹೀಗಾಗಿ ಜಿಲ್ಲೆಯ ತೊಗರಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ.
ರೇಷ್ಮೆನಗರಿ ರಾಮನಗರ ಜಿಲ್ಲೆಯಾದ್ಯಂತ ರಾತ್ರಿ ವರುಣ ಆರ್ಭಟಿಸಿದ್ದಾನೆ. ರಾತ್ರಿ ಜಿಲ್ಲೆಯಾದ್ಯಂತ ಜೋರು ಮಳೆಯಾಗಿದ್ದು ಅದರಲ್ಲೂ ಚನ್ನಪಟ್ಟಣ ಹಾಗು ಕನಕಪುರ ತಾಲೂಕುಗಳಲ್ಲಿ ಗುಡುಗು ಸಿಡಿಲು ಸಹಿತ ಜೋರು ಮಳೆಯಾಗಿದೆ. ಮಳೆಯಿಂದಾಗಿ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಅಸ್ತವ್ಯಸ್ತವಾಗಿತ್ತು. ಅಲ್ಲದೇ ರಸ್ತೆಯಲ್ಲಿ ಉಂಟಾಗಿರುವ ಗುಂಡಿಗಳಲ್ಲಿ ಮಳೆ ನೀರು ನಿಂತು ಬೈಕ್ ಸವಾರರು ಪರದಾಡುವಂತಹ ಸ್ಥಿತಿ ನಿರ್ಮಾಣವಾಗಿತ್ತು. ಜೋರು ಮಳೆ ನಿಂತ ಬಳಿಕ ಮಧ್ಯರಾತ್ರಿಯ ವರೆಗೂ ಸಹ ತುಂತುರು ಮಳೆ ಮುಂದುವರೆದಿತ್ತು.