ಮಂಗಳೂರು/ಚಿಕ್ಕಮಗಳೂರು/ಕೊಡಗು: ರಾಜ್ಯಾದ್ಯಂತ ಸುರಿಯುತ್ತಿರುವ ಭಾರೀ ಮಳೆಯಿಂದಾಗಿ ಮೂರು ಜಿಲ್ಲೆಗಳಲ್ಲಿ ಜನಜೀವನ ಸಂಪೂರ್ಣ ಅಸ್ತವ್ಯಸ್ತವಾಗಿದ್ದು, ಮಳೆಯ ಅವಾಂತರ ದಿನದಿಂದ ದಿನಕ್ಕೆ ಮುಂದುವರೆಯುತ್ತಲೇ ಹೋಗುತ್ತಿದೆ.
ಮಂಗಳೂರಿನ ಪಶ್ಚಿಮಘಟ್ಟ ಪ್ರದೇಶಗಳಲ್ಲಿ ಭಾರೀ ಮಳೆ ಸುರಿಯುತ್ತಿರುವ ಪರಿಣಾಮ ಉಪ್ಪಿನಂಗಡಿ – ಸುಬ್ರಹ್ಮಣ್ಯ ಸಂಪರ್ಕ ಕಲ್ಪಿಸುವ ರಸ್ತೆಯ ಹೊಸ್ಮಠ ಸೇತುವೆ ಮತ್ತೊಮ್ಮೆ ಮುಳುಗಡೆಯಾಗಿದೆ. ಹೊಸ್ಮಠ ಸೇತುವೆ ಮುಳುಗಡೆಯಿಂದಾಗಿ ರಸ್ತೆ ಸಂಚಾರವನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಮಳೆಯಿಂದಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ತೆರಳುವ ಭಕ್ತರು ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.
Advertisement
Advertisement
ಕಾಫಿನಾಡು ಚಿಕ್ಕಮಗಳೂರಿನ ಮಲೆನಾಡು ಭಾಗದ ಕೆಲವೆಡೆ ವರುಣನ ಅಬ್ಬರ ಮುಂದುವರೆದಿದ್ದು, ಜಿಲ್ಲೆಯ ಕಳಸ, ಬಾಳೆಹೊನ್ನೂರು, ಶೃಂಗೇರಿ ಹಾಗೂ ಕುದುರೆಮುಖ ಭಾಗದಲ್ಲಿ ವರುಣನ ರೌದ್ರ ನರ್ತನ ತಾಂಡವವಾಡಿದೆ. ಕಳೆದ ಮೂರು ದಿನಗಳಿಂದ ಭಾರೀ ಮಳೆಯಿಂದ ಕಂಗಾಲಾಗಿದ್ದ ಎನ್.ಆರ್.ಪುರ, ಕೊಪ್ಪ, ಮೂಡಿಗೆರೆಯಲ್ಲಿ ಸದ್ಯ ಸಾಧಾರಣ ಮಳೆಯಾಗುತ್ತಿದೆ.
Advertisement
ಮಲೆನಾಡು ಭಾಗದಲ್ಲಿ ಸೋಮವಾರ ಇಡೀ ದಿನ ಬಿಟ್ಟು-ಬಿಟ್ಟು ಸುರಿದ ವರುಣ ಧಾರಾಕಾರವಾಗಿ ಸುರಿದಿದ್ದಾನೆ. ಶೃಂಗೇರಿ, ಕುದುರೆಮುಖ, ಕಳಸಾದ ಮಳೆಗೆ ತುಂಗಾ-ಭದ್ರ ನದಿಗಳು ಮೈದುಂಬಿ ಹರಿಯುತ್ತಿವೆ. ಕಳೆದ ಮೂರ್ನಾಲ್ಕು ವರ್ಷಗಳಿಂದ ಸಮೃದ್ಧ ಮಳೆ ನೋಡದ ಮಲೆನಾಡಿಗರು ಇದೀಗ ಸುರಿಯುತ್ತಿರುವ ಭಾರೀ ಮಳೆಗೆ ಮಲೆನಾಡಿನ ಹೊಲ-ಗದ್ದೆಗಳು ಜಲಾವೃತಗೊಂಡು, ಕಾಫಿ, ಮೆಣಸು, ಅಡಿಕೆ ಬೆಳೆಗಳಲ್ಲಿ ಕೊಳೆ ರೋಗದ ಭೀತಿ ಎದುರಾಗಿದೆ.
Advertisement
ಕಳೆದ ಎಂಟತ್ತು ವರ್ಷಗಳಲ್ಲೇ ತುಂಬದ ಹಳ್ಳಕೊಳ್ಳಗಳು ತುಂಬಿ ಹರಿಯುತ್ತಿವೆ. ಬಾಳೆಹೊನ್ನೂರಿನ ಮಹಲ್ಗೋಡು ಹಾಗೂ ಕೆಲ ಸೇತುವೆಗಳು ಏಳು ಬಾರಿ ಜಲಾವೃತಗೊಂಡಿದ್ದು, ಕಳಸ ಹೊರನಾಡು ಮಾರ್ಗದ ಮಾರ್ಗದ ಹೆಬ್ಬಾಳೆ ಸೇತುವೆ ಐದು ಬಾರಿ ಮುಳುಗಡೆಯಾಗಿದೆ. ಈ ಭಾಗದಲ್ಲಿ ವರುಣನ ಅಬ್ಬರ ಇನ್ನೂ ಕಡಿಮೆಯಾಗಿಲ್ಲ. ಅದೃಷ್ಟವಶಾತ್ ಮಳೆಯಿಂದಾಗಿ, ಯಾವುದೇ ಅನಾಹುತಗಳು ಸಂಭವಿಸಿಲ್ಲ ಎಂದು ತಿಳಿದು ಬಂದಿದೆ.
ಕೊಡಗಿನಲ್ಲಿ ಅಬ್ಬರಿಸಿ ಬೊಬ್ಬಿರಿಯುತ್ತಿರುವ ಮಳೆಯಿಂದಾಗಿ ಜಿಲ್ಲೆಯ ಜನ ತತ್ತರಿಸಿ ಹೋಗಿದ್ದಾರೆ. ಮಳೆ ಹಿನ್ನೆಲೆ ಸೋಮವಾರ ಶಾಲಾ ಕಾಲೇಜಿಗೆ ರಜೆ ನೀಡಿದ್ದ ಜಿಲ್ಲಾಧಿಕಾರಿಯವರು ನಿನ್ನೆ ಮಳೆಯ ಆರ್ಭಟ ತಗ್ಗಿದ್ದರಿಂದ ಇಂದು ರಜೆಯನ್ನು ರದ್ದುಗೊಳಿಸಿದ್ದರು. ಆದರೆ ಇಂದು ಮುಂಜಾನೆಯಿಂದ ಮತ್ತೆ ಆರ್ಭಟಿಸುತ್ತಿರುವ ಮಳೆಯಲ್ಲೇ ಶಾಲೆಯತ್ತ ವಿದ್ಯಾರ್ಥಿಗಳು ಮುಖ ಮಾಡಿದ್ದಾರೆ. ಅಲ್ಲದೆ ಜಿಲ್ಲೆಯ ಹಲವು ಕಡೆ ಸಣ್ಣ ಪ್ರಮಾಣದಲ್ಲಿ ಭೂ ಕುಸಿತ ಉಂಟಾಗಿರುವುದು ವರದಿಯಾಗಿದೆ.
ಜಿಲ್ಲೆಯ ನದಿಗಳು ಉಕ್ಕಿ ಹರಿಯುತ್ತಿರುವ ಪರಿಣಾಮದಿಂದ ಭಾಗಮಂಡಲ ತ್ರಿವೇಣಿ ಸಂಗಮ ಮತ್ತೊಮ್ಮೆ ಜಲಾವೃತಗೊಂಡಿದೆ. ಮಳೆಯಿಂದಾಗಿ ವಿದ್ಯುತ್ ಕಂಬಗಳು ಧರೆಗುರುಳಿದ ಪರಣಾಮ ಜಿಲ್ಲೆಯ ಹಲವು ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯುತ್ ಸಮಸ್ಯೆ ಎದುರಾಗಿದೆ. ಮಳೆ ಗಾಳಿ ಮತ್ತು ಚಳಿಗೆ ಕೊಡಗು ಜಿಲ್ಲೆಯ ಜನರು ಸಂಪೂರ್ಣ ಹೈರಾಣಾಗಿದ್ದಾರೆ. ಭಾರೀ ಮಳೆಯಿಂದಾಗಿ ಭೂ ಕುಸಿತದಿಂದ ಬಂದ್ ಆಗಿದ್ದ ತಿತಿಮತಿ ಹುಣಸೂರು ರಾಜ್ಯ ಹೆದ್ದಾರಿ ಲಘು ವಾಹನಗಳ ಸಂಚಾರಕ್ಕೆ ಮುಕ್ತವಾಗಿದೆ.