ಬೆಂಗಳೂರು: ರಾಜ್ಯದ ವಿವಿಧೆಡೆ ವರುಣನ ಆರ್ಭಟ ಮುಂದುವರಿದಿದ್ದು, ಇಂದು ಮತ್ತೆ ಮೂವರು ಸಿಡಿಲು ಬಡಿದು ಮೃತಪಟ್ಟಿದ್ದಾರೆ. ಇತ್ತ ಬೆಂಗಳೂರಿನಲ್ಲಿ ರಾತ್ರಿ ಗಾಳಿ, ಸಹಿತ ಮಳೆಯಾಗಿದ್ದು ಮರಗಳು ಧರೆಗೆ ಉರುಳಿವೆ.
ಹಾವೇರಿ ಜಿಲ್ಲೆಯ ಹಲವೆಡೆ ಗುಡುಗು ಸಿಡಿಲು ಸಮೇತ ಧಾರಾಕಾರವಾಗಿ ಮಳೆ ಸುರಿದಿದೆ. ರಾಣೆಬೆನ್ನೂರು ತಾಲೂಕಿನ ಗಂಗಾಪುರ ಗ್ರಾಮದಲ್ಲಿ ಸಿಡಿಲು ಬಡಿದು ರೈತರೊಬ್ಬರು ಮೃತಟಪಟ್ಟಿದ್ದಾರೆ. ಚಿದಾನಂದಪ್ಪ ಕೃಷ್ಣಪ್ಪ ಹಳೇಗೌಡರ (48) ಮೃತ ರೈತ. ಜಮೀನಿನಲ್ಲಿ ಕೆಲಸ ಮಾಡುವ ವೇಳೆ ಈ ದುರ್ಘಟನೆ ಸಂಭವಿಸಿದೆ. ಮೃತ ರೈತನ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡುವಂತೆ ಒತ್ತಾಯಿಸಿದ್ದಾರೆ. ರಾಣೆಬೆನ್ನೂರು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದೆ.
Advertisement
Advertisement
ಜಿಲ್ಲೆಯ ರಾಣೆಬೆನ್ನೂರು, ಹಾವೇರಿ, ಬ್ಯಾಡಗಿ, ರಟ್ಟಿಹಳ್ಳಿಯಲ್ಲಿ ಗುಡುಗು ಸಹಿತ ಕೆಲಕಾಲ ಮಳೆಯಾಗಿದೆ. ಪೂರ್ವ ಮುಂಗಾರು ಮಳೆ ಉತ್ತಮವಾಗಿ ಆಗುತ್ತಿದ್ದು, ರೈತರು ಹೆಚ್ಚಿನ ಮಳೆಯ ನಿರೀಕ್ಷೆಯಲ್ಲಿದ್ದಾರೆ.
Advertisement
ದಾವಣಗೆರೆ ಜಿಲ್ಲೆಯ ಹೊನ್ನಾಳಿ ತಾಲ್ಲೂಕಿನ ಅರೇಹಳ್ಳಿಯಲ್ಲಿ ಸಿಡಿಲಿಗೆ ರೈತರೊಬ್ಬರು ಬಲಿಯಾಗಿದ್ದಾರೆ. ಅರೇಹಳ್ಳಿ ಗ್ರಾಮದ ವಿರೂಪಾಕ್ಷಪ್ಪ(45) ಸಿಡಿಲಿಗೆ ಬಲಿಯಾದ ರೈತ. ಜಮೀನಿನಲ್ಲಿ ಕೆಲಸ ಮಾಡುತ್ತಿದ್ದಾಗ ಈ ದುರ್ಘಟನೆ ನಡೆದಿದೆ. ಮೃತ ರೈತನ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದ್ದು, ಘಟನಾ ಸ್ಥಳಕ್ಕೆ ಭೇಟಿ ನೀಡಿದ ಶಾಸಕ ರೇಣುಕಾಚಾರ್ಯ ಅವರು ಸಾಂತ್ವಾನ ಹೇಳಿದ್ದಾರೆ.
Advertisement
ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಆದಿವಾಲ ಗೊಲ್ಲರಹಟ್ಟಿಯಲ್ಲಿ ಸಿಡಿಲು ಬಡಿದು ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಆನಂದ್ (38) ಮೃತ ದುರ್ದೈವಿ. ಜಮೀನಿನಲ್ಲಿ ಕೆಲಸ ಮುಗಿಸಿಕೊಂಡು ಮನೆಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ. ಮೃತ ವ್ಯಕ್ತಿಯ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.
ದಕ್ಷಿಣ ಒಳನಾಡಿನಲ್ಲಿ ಮೇಲ್ಮೈ ಸುಳಿಗಾಳಿ ಹಿನ್ನಲೆಯಲ್ಲಿ ಬೆಂಗಳೂರು ಸೇರಿದಂತೆ ಸುತ್ತಮುತ್ತಲಿನ ಪ್ರದೇಶದಲ್ಲಿ ಗುಡುಗು, ಗಾಳಿ ಸಹಿತ ಭಾರೀ ಮಳೆಯಾಗುತ್ತಿದೆ. ನಗರದ ಮಲ್ಲೇಶ್ವರಂ, ಮೆಜೆಸ್ಟಿಕ್, ಕಾರ್ಪೋರೇಷನ್ ಸೇರಿದಂತೆ ಹಲವಡೆ ವರುಣನ ಆರ್ಭಟ ಮುಂದುವರಿದಿದ್ದು, ಸಂಚಾರ ಅಸ್ತವ್ಯಸ್ತವಾಗಿ ವಾಹನ ಸವಾರರು ಪರದಾಡುವಂತಾಗಿದೆ.
ಬೆಂಗಳೂರಿನಲ್ಲಿ ಮಧ್ಯೆ ರಾತ್ರಿವರೆಗೂ ವರುಣನ ಆರ್ಭಟ ಮುಂದುವರಿಯಲಿದ್ದು, ಗಂಟೆಗೆ 25-30 ಕಿ.ಮೀ ವೇಗದಲ್ಲಿ ಗಾಳಿ ಬೀಸುತ್ತಿದೆ. ಶವಿವಾರ ಗರಿಷ್ಠ 98 ಮಿಲಿಮೀಟರ್ ಮಳೆಯಾಗಿತ್ತು. ಇಂದು ಗರಿಷ್ಠ ಮಳೆಯಾಗುವ ಸಾಧ್ಯತೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆಯ ನಿರ್ದೇಶಕ ಶ್ರೀನಿವಾಸ್ ರೆಡ್ಡಿ ಅವರು ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದ್ದಾರೆ.
ಯಶವಂತಪುರ ಸರ್ಕಲ್ ಪೋಲಿಸ್ ಸ್ಟೇಶನ್ ರೋಡ್‍ನಲ್ಲಿ ಮರ ಹಾಗೂ ವಿದ್ಯುತ್ ಕಂಬಗಳು ಧರೆಗುರುಳಿವೆ. ಬಿಎಚ್‍ಎಲ್ ಫ್ಯಾಕ್ಟರಿ ಪಕ್ಕದಲ್ಲಿ ಮರವೊಂದು ಬಿದ್ದು, ಬಿಬಿಎಂಪಿ ಕಸದ ಗಾಡಿ ಜಖಂಗೊಂಡಿದೆ. ಇತ್ತ ಮಂತ್ರಿಮಾಲ್ ಹತ್ತಿರ ಎರಡು ಮರಗಳು ನೆಲಕ್ಕೆ ಬಿದ್ದಿದೆ.