ಬೆಂಗಳೂರು: ಬೆಂಗಳೂರು, ಚಿಕ್ಕಬಳ್ಳಾಪುರ, ತುಮಕೂರು, ದಕ್ಷಿಣ ಕನ್ನಡ ಸೇರಿದಂತೆ ರಾಜ್ಯದ ವಿವಿಧೆಡೆ ಭಾರೀ ಮಳೆಯಾಗಿದ್ದು, ಕೆಲವೆಡೆ ದೇವಸ್ಥಾನ, ರಸ್ತೆ, ಮನೆಗಳು ಜಲಾವೃತಗೊಂಡಿವೆ.
ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆ ಭಾರೀ ಮಳೆಯಾಗಿದ್ದು, ಹಳ್ಳ-ಕೊಳ್ಳ ತುಂಬಿ ಹರಿಯುತ್ತಿವೆ. ಕಡಬ ತಾಲೂಕಿನ ಕುಕ್ಕೆ ಸುಬ್ರಹ್ಮಣ್ಯದಲ್ಲಿಯೂ ವರುಣ ಅಬ್ಬರಿಸಿದ್ದಾನೆ. ಅರ್ಧ ಗಂಟೆ ಸುರಿದ ಮಳೆಗೆ ರಥಬೀದಿ, ಆದಿ ಸುಬ್ರಹ್ಮಣ್ಯ ಮುಳುಗಡೆಯಾಗಿವೆ. ಕುಮಾರಾಧಾರಾ ನದಿಯು ಮೈದುಂಬಿ ಹರಿಯುತ್ತಿದ್ದು, ನದಿ ಪಾತ್ರದ ಮನೆಗಳಿಗೆ ನೀರು ನುಗ್ಗಿದೆ. ಇದನ್ನೂ ಓದಿ: ನಾಲ್ಕು ದಿನಗಳ ಕಾಲ ಭಾರೀ ಮಳೆ ಸಾಧ್ಯತೆ- ಬೆಂಗ್ಳೂರಿಗೆ ಹಳದಿ ಅಲರ್ಟ್ ಘೋಷಣೆ
Advertisement
Advertisement
ಚಿಕ್ಕಬಳ್ಳಾಪುರ ನಗರದಲ್ಲಿ ಒಂದು ಗಂಟೆ ವರುಣ ಅಬ್ಬರಿಸಿದ್ದು, ಚರಂಡಿಗಳು ತುಂಬಿ ಹರಿಯುತ್ತಿವೆ. ಪರಿಣಾಮ ರಸ್ತೆ ಮೇಲೆ ಹಾಗೂ ತಗ್ಗು ಪ್ರದೇಶದಲ್ಲಿ ನೀರು ನಿಂತಿದ್ದರಿಂದ ಸವಾರರು ಪರದಾಡುವಂತಾಗಿದೆ. ಅಷ್ಟೇ ಅಲ್ಲದೆ ತಗ್ಗುಪ್ರದೇಶದ ಮನೆಗಳಿಗೆ ಮಳೆಯ ನೀರು ನುಗ್ಗಿದ್ದು, ಜನ ಜೀವನ ಅಸ್ತವ್ಯಸ್ತವಾಗಿದೆ.
Advertisement
ತುಮಕೂರು ನಗರ ಹಾಗೂ ಜಿಲ್ಲೆಯ ವಿವಿಧೆಡೆ ಭರ್ಜರಿ ಮಳೆಯಾಗಿದೆ. ತುಮಕೂರು ನಗರದ ಎಸ್‍ಎಸ್ ಪುರಂನಲ್ಲಿರುವ ಶೆಟ್ಟಿಹಳ್ಳಿ ಅಂಡರ್ ಪಾಸ್ ಈಜು ಕೊಳದಂದಾಗಿದ್ದು, ಸವಾರರು ಹಾಗೂ ವಾಹನ ಚಾಲಕರು ಪರದಾಡುವಂತಾಗಿದೆ. ಅರ್ಧ ಗಂಟೆ ಸುರಿದ ಮಳೆಯಿಂದಾಗಿ ಸಂಚಾರ ಅಸ್ತವ್ಯಸ್ತವಾಗಿದೆ. ಜೊತೆಗೆ ಹಲವು ಭಾಗದಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಳಿಸಲಾಗಿದೆ.
Advertisement
ರಾಮನಗರ ಜಿಲ್ಲೆ ಚನ್ನಪಟ್ಟಣದಲ್ಲಿ ಭಾನುವಾರ ತಡರಾತ್ರಿ ಸುರಿದ ಮಳೆಯಿಂದ ನಗರದ ಎಪಿಎಂಸಿ ಕ್ವಾಟ್ರಸ್ ಬಳಿಯ ಸುಮಾರು 20ಕ್ಕೂ ಹೆಚ್ಚು ಮನೆಗಳಿಗೆ ನೀರು ನುಗ್ಗಿತ್ತು. ಪರಿಣಾಮ ಮನೆಯಲ್ಲಿದ್ದ ವಸ್ತುಗಳು ನೀರಿನಲ್ಲಿ ತೇಲುವಂತಾಗಿದೆ. ಸೋಮವಾರ ಮಧ್ಯಾಹ್ನದವರೆಗೂ ನಿವಾಸಿಗಳು ಮನೆಗೆ ನುಗ್ಗಿದ್ದ ನೀರನ್ನು ಹೊರಹಾಕಲು ಹರಸಾಹಸ ಪಡುತ್ತಿದ್ದರು.
ಪ್ರತಿ ವರ್ಷವೂ ಇದೇ ರೀತಿ ಮಳೆಯ ನೀರು ಮನೆಗಳಿಗೆ ನುಗ್ಗುತ್ತಲೇ ಇದೆ. ಇದಕ್ಕೆ ಪರಿಹಾದ ಕಲ್ಪಿಸುವಂತೆ ನಗರಸಭೆ ಮನವಿ ಸಲ್ಲಿಸಲಾಗಿತ್ತು. ಆದರೆ ನಗರಸಭೆ ಅಧಿಕಾರಿಗಳು ಈ ಮನೆಗಳು ನಮ್ಮ ವ್ಯಾಪ್ತಿಗೆ ಬರಲ್ಲ, ಎಪಿಎಂಸಿ ವ್ಯಾಪ್ತಿಗೆ ಬರುತ್ತದೆ ಎನ್ನುತ್ತಾರೆ. ಇತ್ತ ಎಪಿಎಂಸಿ ಅಧಿಕಾರಿಗಳು ಅದು ನಗರಸಭೆಯ ವ್ಯಾಪ್ತಿ ಎಂದು ಜಾರಿಕೊಳ್ಳುತ್ತಿದ್ದಾರೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.