ಕಾವೇರಿ ನದಿ ಪಾತ್ರದಲ್ಲಿ ಭರ್ಜರಿ ಮಳೆ- ದೇವಾಲಯ, ಜಮೀನು ಜಲಾವೃತ

Public TV
2 Min Read
mnd krs collage copy

ಮಂಡ್ಯ: ಕಾವೇರಿ ನದಿಪಾತ್ರದಲ್ಲಿ ಭರ್ಜರಿ ಮಳೆಯಾಗುತ್ತಿರುವುದರಿಂದ ಕೆಆರ್‍ಎಸ್ ಅಣೆಕಟ್ಟೆಗೆ ನಿರಂತರವಾಗಿ ಒಂದು ಲಕ್ಷ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರು ಹರಿದು ಬರುತ್ತಿದೆ. ಹೀಗಾಗಿ ಕೆಆರ್‍ಎಸ್ ಅಣೆಕಟ್ಟಯಿಂದ ಅನಿವಾರ್ಯವಾಗಿ 1 ಲಕ್ಷದ 30 ಸಾವಿರ ಕ್ಯೂಸೆಕ್‍ಗೂ ಅಧಿಕ ಪ್ರಮಾಣದ ನೀರನ್ನು ಹೊರಗೆ ಬಿಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಕಾವೇರಿ ನದಿಪಾತ್ರದ ದೇವಾಲಯ, ಜಮೀನು ಜಲಾವೃತ್ತವಾಗಿ ಪ್ರವಾಹದ ಭೀತಿ ಎದುರಾಗಿದೆ. ನದಿ ಪಾತ್ರದ ಗ್ರಾಮಗಳ ಜನ ಎಂದು ಏನಾಗುವುದೋ ಎಂದು ಆತಂಕದಲ್ಲೇ ದಿನದೂಡುತ್ತಿದ್ದಾರೆ.

ಕಾವೇರಿ ನದಿ ಪಾತ್ರದಲ್ಲಿ ಭರ್ಜರಿಯಾಗಿ ಮಳೆಯಾಗುತ್ತಿದೆ. ಮಂಡ್ಯ ಜಿಲ್ಲೆ ಶ್ರೀರಂಗಪಟ್ಟಣ ತಾಲೂಕಿನಲ್ಲಿರುವ ಕೆಆರ್‍ಎಸ್ ಅಣೆಕಟ್ಟೆಗೆ ನಿರಂತರವಾಗಿ ಲಕ್ಷ ಕ್ಯೂಸೆಕ್‍ಗೂ ಹೆಚ್ಚು ನೀರು ಹರಿದು ಬರುತ್ತಿದೆ. ಹೀಗಾಗಿ ಅನಿವಾರ್ಯವಾಗಿ ಅಣೆಕಟ್ಟೆಯಿಂದ 1 ಲಕ್ಷದ 30 ಸಾವಿರ ಕ್ಯೂಸೆಕ್ ನೀರನ್ನು ನದಿಗೆ ಬಿಡಲಾಗುತ್ತಿದೆ. ಹೀಗಾಗಿ ನದಿ ಪಾತ್ರದ ಗ್ರಾಮದ ಜನರಲ್ಲಿ ಆತಂಕ ಶುರುವಾಗಿದೆ. ನದಿ ಪಾತ್ರದಲ್ಲಿರುವ ಜಮೀನು, ದೇವಸ್ಥಾನ ಜಲಾವೃತ್ತವಾಗಿದೆ. ರಂಗನತಿಟ್ಟು ಪಕ್ಷಿಧಾಮ ಜಲಾವೃತ್ತವಾಗಿ ಪಕ್ಷಿ ಸಂಕುಲಕ್ಕೆ ಆತಂಕ ಎದುರಾಗಿದೆ.

mnd krs 3

ಇನ್ನು ಐತಿಹಾಸಿಕ ವೆಲ್ಲೆಸ್ಲಿ ಸೇತುವೆ ಸ್ಪರ್ಶಿಸಿ ಕಾವೇರಿ ನದಿ ಭೋರ್ಗರೆದು ಹರಿಯುತ್ತಿದ್ದು, ಸೇತುವೆ ಮುಳುಗುವ ಭೀತಿಯಲ್ಲಿದೆ. ಇದರಿಂದ ಸೇತುವೆಯ ಎರಡೂ ಬದಿ ತಡೆಗೋಡೆ ಕಟ್ಟಿ ಸಂಪೂರ್ಣ ಪ್ರವೇಶ ನಿರ್ಬಂಧಿಸಲಾಗಿದೆ. ಪಶ್ಚಿಮ ವಾಹಿನಿ ಬಳಿ ಶ್ರೀರಾಮ, ಶ್ರೀಕೃಷ್ಣ ದೇವಾಲಯ ಸೇರಿದಂತೆ ಹಲವು ದೇವಾಲಯಗಳು ಜಲಾವೃತವಾಗಿದೆ. ನಿಮಿಷಾಂಭ ದೇವಾಲಯದ ಮೆಟ್ಟಿಲವರೆಗೂ ಕಾವೇರಿ ನದಿ ಹರಿಯುತ್ತಿದೆ. ಭಕ್ತರು ನದಿಗಿಳಿಯದಂತೆ ಬ್ಯಾರಿಕೇಡ್ ಹಾಕಿ ಪೊಲೀಸ್ ಕಾವಲು ಹಾಕಲಾಗಿದೆ.

mnd krs 4

ನದಿ ಪಾತ್ರದ ಜಮೀನಿಗೆ ನೀರು ನುಗ್ಗಿದೆ. ನದಿ ಪಾತ್ರದ ಗ್ರಾಮಗಳು ಮುಳುಗಡೆ ಭೀತಿಯಲ್ಲಿವೆ. ಕಾವೇರಿ ನದಿಯ ದಂಡೆಯಲ್ಲಿ ಬರುವ ಮಂಡ್ಯ ಜಿಲ್ಲೆಯ ಪ್ರಸಿದ್ಧ ಪ್ರವಾಸಿ ತಾಣಗಳಾದ ಎಡಮುರಿ, ಬಲಮುರಿ, ರಂಗನತಿಟ್ಟು, ಮುತ್ತತ್ತಿ ಸೇರಿದಂತೆ ಹಲವೆಡೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಕಳೆದ ನಾಲ್ಕು ವರ್ಷಗಳಿಂದ ಕೆಆರ್‍ಎಸ್ ಅಣೆಕಟ್ಟೆ ತುಂಬದೆ ಸತತ ಬರಗಾಲದಿಂದ ಕಂಗೆಟ್ಟ ಮಂಡ್ಯ ಜನ ಇದೀಗ ಕಾವೇರಿ ನದಿ ಹರಿಯುತ್ತಿರುವ ರಭಸ ನೋಡಿ ಆತಂಕಕ್ಕೆ ಒಳಗಾಗಿದ್ದಾರೆ.

mnd krs 8

ಕಾವೇರಿ ನದಿ ಅಪಾಯದ ಮಟ್ಟದಲ್ಲಿ ಹರಿಯುತ್ತಿರುವುದರಿಂದ ಮಂಡ್ಯ ಜಿಲ್ಲಾಡಳಿತ ನದಿ ಪಾತ್ರದ ಜನರಿಗೆ ಈಗಾಗಲೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಎಚ್ಚರಿಕೆ ನೀಡಿದೆ. ಸ್ವತಃ ಮಂಡ್ಯ ಜಿಲ್ಲಾಧಿಕಾರಿ ಮಂಜುಶ್ರೀ ಕಾವೇರಿ ನದಿ ಪಾತ್ರದ ಸ್ಥಳಗಳಿಗೆ ತೆರಳಿ ಪರಿಸ್ಥಿತಿ ಅವಲೋಕಿಸುತ್ತಿದ್ದಾರೆ. ಅಧಿಕಾರಿಗಳ ಜೊತೆ ನಿರಂತರವಾಗಿ ಸಭೆ ನಡೆಸಿ ಸಾರ್ವಜನಿಕರಿಗೆ ಯಾವುದೇ ತೊಂದರೆಯಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿದ್ದಾರೆ.

ಒಟ್ಟಾರೆ ಮಳೆ ಹೀಗೆ ಮುಂದುವರಿದರೆ ರಂಗನತಿಟ್ಟು ಪಕ್ಷಿಧಾಮ, ಐತಿಹಾಸಿಕ ವೆಲ್ಲೆಸ್ಲಿ ಸೇತುವೆ, ನಿಮಿಷಾಂಭ ದೇವಾಲಯ ಸೇರಿದಂತೆ ಹಲವು ಗ್ರಾಮಗಳು ಜಲಾವೃತವಾಗೋದರಲ್ಲಿ ಅನುಮಾನವಿಲ್ಲ. ಆದರಿಂದ ಮಳೆರಾಯ ತನ್ನ ರೌದ್ರ ರೂಪ ತ್ಯಜಿಸಿ ಶಾಂತನಾಗಿ ಜೀವ ಜಗತ್ತನ್ನು ಉಳಿಸಬೇಕಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

Share This Article
Leave a Comment

Leave a Reply

Your email address will not be published. Required fields are marked *