ಬೆಂಗಳೂರು: ಅನೇಕ ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಜನರು ಜೀವನ ಅಸ್ತವ್ಯಸ್ತವಾಗಿದೆ. ಇನ್ನೊಂದೆಡೆ ಪ್ರಳಯ ಮಳೆ, ಡ್ಯಾಂಗಳಿಂದ ಮುನ್ನುಗ್ಗಿ ಬರುತ್ತಿರುವ ಜಲರಾಶಿಯ ನಡುವೆ ತೇವಾಂಶದಿಂದ ಮಣ್ಣು ಸಡಿಲುಗೊಂಡು ಬಹುತೇಕ ಕಡೆಗಳಲ್ಲಿ ಭೂಕುಸಿತವಾಗುತ್ತಿದೆ. ಅತಿಯಾದ ಮಳೆಯಿಂದಾಗಿ ಉತ್ತರ ಕರ್ನಾಟಕದ ಅನೇಕ ಜಿಲ್ಲೆಗಳಲ್ಲಿ ರೆಡ್ ಅಲರ್ಟ್ ಫೋಷಣೆ ಮಾಡಲಾಗಿದೆ.
ಮನೆ, ಕಟ್ಟಡಗಳು ನೋಡನೋಡುತ್ತಿದ್ದಂತೆ ನೆಲಕ್ಕುರುಳುತ್ತಿವೆ. ರಸ್ತೆಗಳು ಬಿರುಕು ಬಿಡುತ್ತಿದ್ದು, ಗುಡ್ಡಗಳು ಹೊರಳಿ ಬೀಳುತ್ತಿವೆ. ಕಣ್ಣ ಮುಂದೆಯೇ ಎಲ್ಲವನ್ನೂ ಕಳೆದುಕೊಂಡು ಸಂತ್ರಸ್ತರಾಗಿರುವವರ ಕಣ್ಣೀರು, ಗೋಳಾಟ ಕೇಳಿದರೆ ಹೊಟ್ಟೆ ಉರಿಯುತ್ತದೆ. ಪ್ರವಾಹದ ಎದುರು ಈಜಲಾಗದು, ಬದುಕು ಮೂರಾಬಟ್ಟೆ ಆಗಿದೆ. ಇನ್ನಾದರೂ ಮಳೆ ಶಾಂತವಾಗಿ ಪ್ರವಾಹ ಇಳಿಯಲಿ ಎಂದು ಸಂತ್ರಸ್ತರು ಪ್ರಕೃತಿಗೆ ಕೈಮುಗಿದು ಬೇಡಿಕೊಳ್ಳುತ್ತಿದ್ದಾರೆ.
Advertisement
Advertisement
ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನೇತ್ರಾವತಿ ರೌದ್ರ ರೂಪ ತಾಳಿದ್ದು, ಬೆಳ್ತಂಗಡಿ ತಾಲೂಕಿನ ಕಿಲ್ಲೂರು ಪೇಟೆ ಪ್ರವಾಹಕ್ಕೆ ಕಂಗೆಟ್ಟಿದೆ. ಪುಟ್ಟ ಊರಿಗೆ ನುಗ್ಗಿದ ನೇತ್ರಾವತಿ ಅನಾಹುತಗಳನ್ನೇ ಸೃಷ್ಟಿಸಿದ್ದಾಳೆ. ಬೆಳಗಾವಿ ಜಿಲ್ಲೆಯ ನವಿಲುತೀರ್ಥದಲ್ಲಿರುವ ರೇಣುಕಾ ಜಲಾಶಯದಿಂದ ನೀರು ಬಿಟ್ಟಿರುವ ರಭಸಕ್ಕೆ ಮುನವಳ್ಳಿಯ ತೋರಗಣಲ್‍ಕೋಟೆ ಬಳಿರುವ ತೂಗುಸೇತುವೆ ಧ್ವಂಸಗೊಂಡಿದೆ. ಪ್ರವಾಹ ಅಪ್ಪಳಿಸಿದ ರಭಸಕ್ಕೆ ತೂಗು ಸೇತುವೆ ಮೇಲಕ್ಕೆ ಹಾರಿತ್ತು.
Advertisement
ಕೊಡಗಿನಲ್ಲಿ ವರುಣನ ಅಬ್ಬರ ಮುಂದುವರಿದಿದ್ದು, ಭಾಗಮಂಡಲ ಸಂಪೂರ್ಣ ಜಲಾವೃತವಾಗಿದೆ. ಭಗಂಡೇಶ್ವರ ದೇವಸ್ಥಾನದ ಗೋಪುರದವರೆಗೂ ನೀರು ಬಂದಿದ್ದು, ಸತತವಾಗಿ ಸುರಿಯುತ್ತಿರುವ ಮಳೆಯಿಂದ ಕೊಡಗಿನಲ್ಲಿ ಸಾಲು ಸಾಲು ಅವಘಡಗಳು ಸಂಭವಿಸುತ್ತಿವೆ. ಶುಕ್ರವಾರ ರಾತ್ರಿ ಇಡೀ ಮಡಿಕೇರಿಯಲ್ಲಿ ಗಾಳಿ ಸಹಿತ ಮಳೆಯಾಗಿದ್ದು, ಮಡಿಕೇರಿ ಪಟ್ಟಣ ಸೇರಿದಂತೆ ವಿರಾಜಪೇಟೆ, ಸೋಮವಾರಪೇಟೆ ತಾಲೂಕುಗಳಲ್ಲಿ ಭಾರೀ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನ ನಾಪೋಕ್ಲು ಗ್ರಾಮದಲ್ಲಿ ನೋಡನೋಡುತ್ತಿದ್ದಂತೆ ಮನೆ ಕುಸಿದಿದೆ.