ಬೆಂಗಳೂರು: ರಾಜ್ಯಕ್ಕೆ ಚಂಡಮಾರುತದ ಬಿಸಿ ತಟ್ಟಲಿದ್ದು, ಏಪ್ರಿಲ್ 28ರ ನಂತರ ಹಳೆ ಮೈಸೂರು ಭಾಗದಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ.
ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನದಲ್ಲಿ ಚಂಡಮಾರುತ ಪರಿಣಾಮ ಬಿರುಗಾಳಿ ಸಹಿತ ಭಾರೀ ಮಳೆಯಾಗಲಿದೆ. ಇತ್ತ ಮೀನುಗಾರರಿಗೆ ಸಮುದ್ರಕ್ಕೆ ಇಳಿಯದಂತೆ ಸೂಚನೆ ನೀಡಲಾಗಿದೆ. ಇದರಿಂದಾಗಿ ಮುಂದಿನ ಮೂರು ದಿನಗಳ ಕಾಲ ರಾಜ್ಯದಲ್ಲಿ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೆ ರಾಜ್ಯ ಪ್ರಾಕೃತಿಕ ವಿಕೋಪ ಉಸ್ತುವಾರಿ ಕೇಂದ್ರದ ನಿರ್ದೇಶಕ ಡಾ.ಜಿ.ಎನ್.ಶ್ರೀನಿವಾಸರೆಡ್ಡಿ ಅವರು ತಿಳಿಸಿದ್ದಾರೆ.
ಬಂಗಾಳಕೊಲ್ಲಿ (ಶ್ರೀಲಂಕಾ ಹಾಗೂ ತಮಿಳುನಾಡಿನ ಆಗ್ನೇಯ ಭಾಗದಲ್ಲಿ) ವಾಯುಭಾರ ಕುಸಿತ ಉಂಟಾಗಿದ್ದು, ಇನ್ನೆರಡು ದಿನಗಳೊಳಗೆ ಚಂಡಮಾರುತವಾಗಿ ಪರಿವರ್ತನೆಯಾಗುವ ಸಾಧ್ಯತೆಗಳಿವೆ. ಒಂದು ವೇಳೆ ರಾಜ್ಯದ ಚಂಡಮಾರುತದ ನೇರ ಪರಿಣಾಮ ಬೀರದಿದ್ದರೂ ಏಪ್ರಿಲ್ 28ರಿಂದ ಮೇ 2ರ ವರೆಗೆ ರಾಜ್ಯದಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಎಂದು ಹೇಳಿದ್ದಾರೆ.
ಬಂಗಾಳಕೊಲ್ಲಿಯಲ್ಲಿ ಉಂಟಾಗಿರುವ ನಿರೀಕ್ಷಿತ ಚಂಡಮಾರುತಕ್ಕೆ ‘ಫನಿ’ ಎಂದು ಹೆಸರಿಡಲಾಗಿದೆ. ಇದು ತಮಿಳುನಾಡಿದ ದಕ್ಷಿಣ ಭಾಗಕ್ಕೆ ಬಂದು ತಲುಪುತ್ತದೆ ಎನ್ನುವ ನಿರೀಕ್ಷೆ ಇತ್ತು. ಆದರೆ ದಿಕ್ಕು ಬದಲಾಯಿಸಿ, ಪೂರ್ವದ ಕಡೆಗೆ ಆಗುತ್ತಿದೆ. ಇದರ ನಿರ್ಧಿಷ್ಟ ದಿಕ್ಕು ಮುಂದಿನ ಎರಡು ದಿನಗಳಲ್ಲಿ ತಿಳಿಯಲಿದೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಚಂಡಮಾರುತದ ಪರಿಣಾಮ ರಾಜ್ಯದ ಕರಾವಳಿ, ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮೋಡ ಕವಿದ ವಾತಾವರಣ ಕಂಡುಬರಲಿದೆ ಎಂದು ಶ್ರೀನಿವಾಸ ರೆಡ್ಡಿ ಮಾಹಿತಿ ನೀಡಿದ್ದಾರೆ.