ಬೆಂಗಳೂರು: ಈ ಬಾರಿ ಅವಧಿಗೂ ಮುನ್ನವೆ ಮಳೆ ಆರಂಭವಾಗಿದ್ದು, ಹಳ್ಳ ಕೊಳ್ಳಗಳು ಭರ್ತಿಯಾಗಿ ತುಂಬಿ ಹರಿಯುತ್ತಿವೆ. ಕಳೆದ ಒಂದು ವಾರದಿಂದ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಎಡೆಬಿಡದೇ ಮಳೆಯಾಗುತ್ತಿದೆ. ಬೆಂಗಳೂರು, ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಯಾದಗಿರಿ, ರಾಯಚೂರು, ಸೇರಿದಂತೆ ಹಲವೆಡೆ ಮಳೆಯಾಗುತ್ತಿರುವದರಿಂದ ಜನಜೀವನ ಅಸ್ತವ್ಯಸ್ಥವಾಗಿದೆ.
ಅರಬ್ಬಿ ಸಮುದ್ರ ಮತ್ತು ಬಂಗಾಳಕೊಲ್ಲಿಯಲ್ಲಿ ಮೇಲ್ಮೈ ಸುಳಿಗಾಳಿ ಎದ್ದಿರುವ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಭಾರೀ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ಪ್ರಕೃತಿ ವಿಕೋಪ ಇಲಾಖೆ ಮುನ್ಸೂಚನೆ ನೀಡಿದೆ. ರಾಜ್ಯದ ಕರಾವಳಿ, ಮಲೆನಾಡು, ದಕ್ಷಿಣ ಒಳನಾಡು ಹಾಗೂ ಉತ್ತರ ಒಳನಾಡಿನ ಭಾಗದಲ್ಲಿ ಭಾರೀ ಮಳೆಯಾಗುವ ಸಂಭವವಿದೆ. ಬೆಂಗಳೂರಿನ ಮೆಜೆಸ್ಟಿಕ್, ವಿಧಾನಸೌಧ, ಕೆಆರ್ ಮಾರ್ಕೆಟ್, ಚಿಕ್ಕಪೇಟೆ, ಕಾರ್ಪೋರೇಷನ್, ಶಿವಾಜಿನಗರ, ಎಮ್ ಜಿ ರೋಡ್, ಯಶವಂತಪುರ ಸೇರಿದಂತೆ ಹಲವೆಡೆ ಮಳೆಯಾಗಿದ್ದರಿಂದ ವಾಹನ ಸವಾರರು ಪರದಾಡುವಂತಾಯಿತು.
Advertisement
Advertisement
ಬಳ್ಳಾರಿ: ಜಿಲ್ಲೆಯಲ್ಲಿಯೂ ಮಳೆಯಾಗುತ್ತಿದ್ದು, ನಗರದ ದುರ್ಗಮ್ಮ ದೇವಾಲಯದ ಬಳಿಯ ರೈಲ್ವೆ ಅಂಡರ್ ಪಾಸ್ ನಲ್ಲಿ ಸಿಲುಕಿದ ಸಾರಿಗೆ ಬಸ್ ಸಿಲುಕಿಕೊಂಡಿತ್ತು. ಮಳೆ ಹೆಚ್ಚಾದ ಕಾರಣ ಅಂಡರ್ ಪಾಸ್‍ನಲ್ಲಿಯ ನೀರಿನಲ್ಲಿ ಬಸ್ ಸಿಲುಕಿಕೊಂಡಿದ್ದರಿಂದ ಡ್ರೈವರ್ ಸೇರಿದಂತೆ ಎಲ್ಲರೂ ಪ್ರಯಾಣಿಕರು ಇಳಿದು ಹೋಗಿದ್ದಾರೆ. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಬಸ್‍ನ್ನು ಹೊರ ತೆಗೆದಿದ್ದಾರೆ.
Advertisement
ಕೊಪ್ಪಳ: ಜಿಲ್ಲೆಯಾದ್ಯಂತ ಇಂದು ಸಂಜೆ ಉತ್ತಮ ಮಳೆಯಾಗಿದ್ದು, ಗಂಗಾವತಿಯಲ್ಲಿ ವರುಣ ಅವಾಂತರ ಸೃಷ್ಠಿಸಿದ್ದಾನೆ. ಜಿಲ್ಲೆಯ ಗಂಗಾವತಿ ತಾಲೂಕ ಆಸ್ಪತ್ರೆಗೆ ನೀರು ನುಗ್ಗಿದೆ. ಬಾಣಂತಿಯರ ಕೊಠಡಿ, ಎಕ್ಸ್ ರೇ ಕೊಠಡಿಗೆ ನೀರು ನುಗ್ಗಿದ್ದರಿಂದ ಕೆಲ ಹೊತ್ತು ಬಾಣಂತಿಯರು ಮತ್ತವರ ಸಂಬಂಧಿಕರು ಆತಂಕಕ್ಕೆ ಒಳಗಾಗಿದ್ದರು. ಆಸ್ಪತ್ರೆ ಸುತ್ತಲಿನ ಚರಂಡಿಗಳು ಬ್ಲಾಕ್ ಆಗಿದ್ದು, ನೀರು ಸರಾಗವಾಗಿ ಹರಿದಿಲ್ಲ. ಇದರಿಂದ ಆಸ್ಪತ್ರೆ ಕಟ್ಟಡದ ಮೇಲ್ಚಾವಣಿ ಮೇಲೆ ಬಿದ್ದ ಮಳೆ ನೀರು, ಚರಂಡಿ ಸೇರುವ ಬದಲಿಗೆ ಆಸ್ಪತ್ರೆಗೆ ನುಗ್ಗಿದೆ. ಇದರಿಂದ ಆಸ್ಪತ್ರೆ ಆಡಳಿತದ ವಿರುದ್ದ ರೋಗಿಗಳ ಸಂಭಂದಿಕರ ಆಕ್ರೋಶ ವ್ಯಕ್ತಪಡಿಸಿದ್ರು.
Advertisement
ನೆಲಮಂಗಲ: ಸತತ ಅರ್ಧಗಂಟೆಯ ಕಾಲ ಬಿರುಗಾಳಿ ಸಹಿತ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಬೆಂಗಳೂರು ಹೊರವಲಯದ ನೆಲಮಂಗಲ ತಾಲೂಕಿನ ಮಲ್ಲಾಪುರ ಸಂಪೂರ್ಣ ಜಲಾವೃತವಾಗಿದೆ. ರಾಜ ಕಾಲುವೆ ಒತ್ತುವರಿಯಿಂದ ಮನೆಗಳಿಗೆ ನೀರು ನುಗ್ಗಿ ಭಾರಿ ಅನಾಹುತ ಉಂಟಾಗಿದೆ. ಇನ್ನೂ ಮಳೆ ನೀರು ಮನೆಗಳಿಗೆ ನುಗ್ಗಿರುವದರಿಂದ ಹಳೆಯ ಮನೆಗಳ ಗೋಡೆಗಳು ಬಿರುಕು ಬಿಟ್ಟಿ ಕುಸಿಯುವಂತಹ ಸ್ಥಿತಿ ಎದುರಾಗಿ ಗ್ರಾಮಸ್ಥರಲ್ಲಿ ಭಯದ ವಾತಾವರಣದಲ್ಲಿ ಕಾಲ ಕಳೆಯುವಂತಾಗಿದೆ. ಇತ್ತ ಖಾಸಗಿ ಶಾಲೆ ಮಳೆಯ ನೀರಿನಿಂದ ಸಂಪೂರ್ಣ ಜಲಾವೃತವಾಗಿದೆ.
ಚಿಕ್ಕಮಗಳೂರು: ಕಳೆದ ಮೂರ್ನಾಲ್ಕು ವರ್ಷದಿಂದ ಭೀಕರ ಬರಕ್ಕೆ ತುತ್ತಾಗಿದ್ದ ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕಿನಲ್ಲಿ ವರುಣನ ಅಬ್ಬರ ಜೋರಾಗಿದೆ. ತಾಲೂಕಿನ ಯಗಟಿ ಹೋಬಳಿಯ ಸುತ್ತಲೂ ವರುಣ ಆರ್ಭಟಕ್ಕೆ ರಸ್ತೆ ಮುಳುಗಡೆಯಾಗಿದ್ದು, ತೆಂಗಿನ ತೋಟಗಳಲ್ಲಿ ಅಡಿಯಷ್ಟು ನೀರು ನಿಂತಿದ್ದು, ಮಳೆಯ ಅಬ್ಬರ ಜೋರಾಗಿದ್ದರ ಪರಿಣಾಮ ಯಗಟಿ ಸಮೀಪದ ಕಲ್ಲಾಪುರ ಗ್ರಾಮ ನೀರಿನಿಂದ ತುಂಬಿದೆ. ಕಡೂರು ತಾಲೂಕಿನ ಸುತ್ತಮುತ್ತಲು ಉತ್ತಮ ಮಳೆಯಾಗಿದೆ. ಸುಮಾರು ಎರಡು ಗಂಟೆಗೂ ಹೆಚ್ಚು ಹೊತ್ತು ಸುರಿದ ಧಾರಾಕಾರ ಮಳೆಗೆ ಕಡೂರು-ಯಗಟಿ ಮಾರ್ಗ ನೀರಿನಿಂದ ಮುಚ್ಚಿ ಹೋಗಿದೆ. ಮಳೆ ನಿಂತ ಮೇಲೆ ಗ್ರಾಮಗಳಲ್ಲಿ ಮನೆಯ ಬದಿಯಲಿ ಹರಿಯುತ್ತಿರೋ ನೀರು ಜನರಲ್ಲಿ ಆತಂಕ ತಂದಿದೆ. ಎರಡು ಗಂಟೆಗೂ ಅಧಿಕ ಕಾಲ ಸುರಿದ ಭಾರೀ ಮಳೆಗೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ರೆ, ಕಳೆದ ಎರಡ್ಮೂರು ವರ್ಷಗಳಿಂದ ಹನಿ ನೀರಿಗೂ ಹಾಹಾಕಾರ ಅನುಭವಿಸ್ತಿದ್ದ ಕಡೂರಿನ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ.
ವಿಜಯಪುರ: ಜಿಲ್ಲೆಯಲ್ಲಿ ಮಳೆರಾಯಣ ಅಬ್ಬರ ಮುಂದುವರೆದಿದೆ. ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಿರೇ ಮುರಾಳ ಗ್ರಾಮದಲ್ಲಿ ಶಿವಾಜಿ ಬಣಕಾರ ಎಂಬವರಿಗೆ ಸೇರಿದ ಎರಡು ಕುರಿಗಳು ಸಾವನ್ನಪ್ಪಿವೆ. ಇದೇ ವೇಳೆ ಸ್ಥಳದಲ್ಲಿದ್ದ ದಾವಲಸಾಬ್ ಎಂಬವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಹಾವೇರಿ: ಹಾವೇರಿ, ಶಿಗ್ಗಾಂವಿ ತಾಲೂಕು ಸೇರಿದಂತೆ ಜಿಲ್ಲೆಯ ಹಲವೆಡೆ ಉತ್ತಮ ಮಳೆಯಾಗಿದೆ. ಒಂದು ಗಂಟೆಯಿಂದ ಧಾರಾಕಾರವಾಗಿ ಮಳೆ ಸುರಿಯುತ್ತಿದೆ. ಮಳೆಯಿಂದಾಗಿ ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಮತ್ತೊಂದೆಡೆ ಧಾರಕಾರ ಮಳೆಗೆ ಭಾನುವಾರದ ಸಂತೆಗೆ ಬಂದ ಜನರು ಪರದಾಡಿದರು. ಮಳೆಯಿಂದ ಕೆಲಕಾಲ ವಿದ್ಯುತ್ ಸಂಪರ್ಕ ಸ್ಥಗಿತಗೊಂಡಿತ್ತು. ನಗರದ ಬೈಕ್ ಹಾಗೂ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಣವಾಗಿತ್ತು. ಮತ್ತೆ ನಗರ ಸೇರಿದಂತೆ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದೆ. ಸವಣೂರು ತಾಲೂಕಿನ ಕುರಬರಮಲ್ಲೂರು ಗ್ರಾಮದ ಬಳಿ ಇರೋ ಬಾಜಿರಾಯನಹಳ್ಳ ತುಂಬಿ ಹರಿಯುತ್ತಿದೆ. ಹಳ್ಳ ತುಂಬಿ ರಸ್ತೆ ಮೇಲೆಲ್ಲ ನೀರು ಹರಿಯುತ್ತಿದೆ. ಇದ್ರಿಂದಾಗಿ ರಸ್ತೆ ಮೇಲೆ ಓಡಾಡಲು ಜನರಿಗೆ ಭೀತಿ ಎದುರಾಗಿದೆ. ಮಳೆಗಾಲದ ಸಂದರ್ಭದಲ್ಲಿ ಗ್ರಾಮಸ್ಥರಿಗೆ ಈ ರೀತಿಯ ಭೀತಿ ಎದುರಾಗ್ತಿದ್ದು, ಸರ್ಕಾರ ಮತ್ತು ಜನಪ್ರತಿನಿಧಿಗಳು ಹಳ್ಳದ ಬ್ರಿಡ್ಜ್ ಎತ್ತರಿಸಲು ಕ್ರಮ ಕೈಗೊಳ್ಳಬೇಕು ಅಂತಾ ಗ್ರಾಮಸ್ಥರು ಒತ್ತಾಯಿಸಿದ್ದಾರೆ.
ಧಾರವಾಡ: ಶನಿವಾರ ರಾತ್ರಿಯಿಡಿ ಸುರಿದ ಮಳೆಯಿಂದ ಜಿಲ್ಲೆಯ ಬಹುತೇಕ ಹಳ್ಳಗಳು ತುಂಬಿ ಹರಿಯುತ್ತಿವೆ. ಜಿಲ್ಲೆಯ ನವಲಗುಂದ ತಾಲೂಕಿನಲ್ಲಿ ಹೆಚ್ಚಿನ ಪ್ರಮಾಣದ ಮಳೆಯಾಗಿದ್ದು, ತುಪ್ಪರಿಹಳ್ಳ, ಬೆಣ್ಣಿಹಳ್ಳಗಳು ತುಂಬಿವೆ. ಎರಡು ಹಳ್ಳದ ದಂಡೆಯ ಗ್ರಾಮಗಳ ಜನರಲ್ಲಿ ಪ್ರವಾಹ ಭೀತಿ ಉಂಟಾಗಿದೆ. ಮೊರಬ, ಶಿರಕೋಳ, ಜಾವೂರ, ತುಪ್ಪದ ಕುರಹಟ್ಟಿ, ಹನಸಿ ಸೊಟಕನಾಳ ಮತ್ತಿತರರ ಗ್ರಾಮಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.