ರಣ ಮಳೆಗೆ ತತ್ತರಿಸಿದ ಬೆಣ್ಣೆ ನಗರಿ – ಕೊಚ್ಚಿಹೋದ ಬೈಕ್, ಬಸ್‍ಸ್ಟಾಪ್ ಜಲಾವೃತ

Public TV
1 Min Read
RAIN copy

ಬೆಂಗಳೂರು/ದಾವಣಗೆರೆ: ಸಿಲಿಕಾನ್ ಸಿಟಿಯಲ್ಲಿ ಮತ್ತೆ ಮಳೆ ಆರ್ಭಟಿಸಿದ್ದು, ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್. ಮಾರ್ಕೆಟ್, ಶಾಂತಿನಗರ, ಎಲೆಕ್ಟ್ರಾನಿಕ್ ಸಿಟಿ, ಬೊಮ್ಮನಹಳ್ಳಿ, ಹೆಬ್ಬಾಳ, ಸದಾಶಿವನಗರ ಮತ್ತು ವಿಜಯನಗರ ಸೇರಿ ಹಲವೆಡೆ ಭಾರೀ ಮಳೆ ಆಗಿದೆ.

ಮಳೆಯಿಂದ ಹಲವೆಡೆ ಗಂಟೆಗಟ್ಟಲೆ ಟ್ರಾಫಿಕ್ ಜಾಮ್ ಸಹ ಉಂಟಾಗಿತ್ತು. ಇನ್ನು ಕೆ.ಆರ್ ಸರ್ಕಲ್, ಕೋರಮಂಗಲ, ಓಕಳಿಪುರಂ ಅಂಡರ್ ಪಾಸ್‍ನಲ್ಲಿ ನೀರು ತುಂಬಿ ವಾಹನ ಸವಾರರು ಪರದಾಡಿದ್ದಾರೆ. ಶಾಂತಿನಗರದಲ್ಲಿರುವ ಡಿಸಿ ಕಚೇರಿ ನೀರಿನಿಂದ ಜಲಾವೃತವಾಗಿತ್ತು.

RAIN 14

ದಾವಣಗೆರೆ:
ಇತ್ತ ಸತತ ನಾಲ್ಕೈದು ಗಂಟೆಗಳ ಕಾಲ ಸುರಿದ ಮಳೆಗೆ ದಾವಣಗೆರೆ ಜನತೆ ತತ್ತರಿಸಿ ಹೋಗಿದ್ದಾರೆ. ವರ್ಷದ ಇದೇ ಮೊದಲ ಬಾರಿಗೆ ಈ ರೀತಿ ಮಳೆಯಾಗಿದ್ದು, ನಿಟ್ಟುವಳ್ಳಿಯ ಶ್ರೀರಾಮ ನಗರ, ಭಾಷಾ ನಗರ, ಹಾಗೂ ಭರತ್ ಕಾಲೋನಿ ಗಳಲ್ಲಿ ಮನೆಗಳಿಗೆ ನೀರು ನುಗ್ಗಿದ್ದು, ಜನರು ನೀರನ್ನು ಹೊರ ಹಾಕಿದ್ದಾರೆ.

ಕೆಎಸ್‍ಆರ್ ಟಿಸಿ ಬಸ್ ನಿಲ್ದಾಣ ಸಂಪೂರ್ಣ ಮುಳುಗಡೆಯಾಗಿ ಪ್ರಯಾಣಿಕರು ಸಾಕಷ್ಟು ತೊಂದರೆ ಅನುಭವಿಸುವಂತಾಗಿದೆ. ಬಸ್ ನಿಲ್ದಾಣದಲ್ಲಿ ಪ್ರಯಾಣಿಕರಿಗೆ ತಂಗುದಾಣದಲ್ಲಿ ನೀರು ನುಗ್ಗಿದ್ದು, ಅನಿವಾರ್ಯವಾಗಿ ಪ್ರಯಾಣಿಕರು ಅಲ್ಲಿಯೇ ಮಲಗುವಂತ ಪರಿಸ್ಥಿತಿ ಎದುರಾಗಿತ್ತು. ರಭಸವಾಗಿ ಹರಿಯುವ ಮಳೆ ನೀರಿಗೆ ಹತ್ತಾರು ಬೈಕ್ ಗಳು ಕೊಚ್ಚಿ ಹೋಗಿವೆ. ರಸ್ತೆ ಕಾಣದ ಕಾರ್ ಗಳು ಗುಂಡಿಗೆ ಇಳಿದಿವೆ.

RAIN 8

ಸಂಚಾರಿ ಠಾಣೆಯಲ್ಲಿ ಸಂಪೂರ್ಣವಾಗಿ ನೀರು ತುಂಬಿದ್ದು, ಸಿಬ್ಬಂದಿಗಳು ನೀರಿನಲ್ಲೇ ನಿಲ್ಲುವ ಪರಿಸ್ಥಿತಿ ಉಂಟಾಗಿತ್ತು. ಅಲ್ಲದೇ ಆಯುಧ ಪೂಜೆ ಇರುವ ಹಿನ್ನೆಲೆಯಲ್ಲಿ ಹೂವಿನ ಮಾರುಕಟ್ಟೆಗೆ ಜಿಲ್ಲೆಯ ನಾನಾ ಕಡೆಗಳಿಂದ ರೈತರು ಹೂವುಗಳನ್ನು ತೆಗೆದುಕೊಂಡು ಬಂದಿದ್ದರು. ಆದರೆ ಮಳೆಯಿಂದಾಗಿ ನಷ್ಟವನ್ನು ಅನುಭವಿಸುವಂತಾಗಿದೆ.

ಆಯುಧ ಪೂಜೆಗೆ ಒಳ್ಳೆಯ ಬೆಲೆಗೆ ಹೂವು ಮಾರಾಟವಾಗುತ್ತದೆ ಎನ್ನುವ ನಿರೀಕ್ಷೆಯಲ್ಲಿದ್ದ ರೈತರಿಗೆ ಮಳೆರಾಯ ತಣ್ಣೀರು ಎರಚಿದಂತಾಯಿತು. ಕೆಲ ರೈತರ ಹೂವಿನ ಗಂಟುಗಳು ನೀರಿನಲ್ಲಿ ಕೊಚ್ಚಿ ಹೋದರೆ ಮತ್ತೊಂದು ಕಡೆ ದಲ್ಲಾಳಿಗಳು ಇದನ್ನೇ ಬಂಡವಾಳ ಮಾಡಿಕೊಂಡು ಕಡಿಮೆ ಬೆಲೆಗೆ ಕೊಂಡುಕೊಳ್ಳುತ್ತಿದ್ದಾರೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

RAIN 12

Share This Article
Leave a Comment

Leave a Reply

Your email address will not be published. Required fields are marked *