– ಸಿಲಿಕಾನ್ ಸಿಟಿಯಲ್ಲಿ ವರುಣನ ಅಬ್ಬರ
ಬೆಂಗಳೂರು: ರಾಜ್ಯದಲ್ಲಿ ಇನ್ನೂ ಮೂರ್ನಾಲ್ಕು ದಿನಗಳ ಕಾಲ ಗುಡುಗು, ಮಿಂಚು ಸಹಿತ ಮಳೆ ಆರ್ಭಟಿಸುವ ಸಾಧ್ಯತೆ ಇದೆ ಎಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ತಿಳಿಸಿದೆ.
ದಕ್ಷಿಣ ಒಳನಾಡು, ಮಲೆನಾಡು, ಕರಾವಳಿ ಹಾಗೂ ಉತ್ತರ ಕರ್ನಾಟಕದಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಗಾಳಿ ಬೀಸಲಿದೆ ಹಾಗೂ ದಿನಪೂರ್ತಿ ಮೋಡ ಕವಿದ ವಾತಾವರಣವಿರಲಿದೆ ಎಂದು ಮಾಹಿತಿ ನೀಡಿದೆ.
ಬೆಂಗಳೂರಿನಲ್ಲಿ ಪೂರ್ವ ಮುಂಗಾರು ಮಳೆ ಆರಂಭವಾಗಿದ್ದು ಪಟ್ಟಾಭಿರಾಮನಗರ, ಬೆಳ್ಳಂದೂರು, ಕೋರಮಂಗಲ, ಎಚ್‍ಎಸ್‍ಆರ್ ಲೇಔಟ್, ಅಗರ, ಬಿಟಿಎಂ ಲೇಔಟ್, ಮಡಿವಾಳ ಸುತ್ತಮುತ್ತ ಗುಡುಗು ಸಿಡಿಲು ಸಹಿತ ಮಳೆಯಾಗಿದೆ. ಈಗಾಗಲೇ 30 ಮಿಲಿಮೀಟರ್ ಮಳೆಯಾಗಿದ್ದು, ರಾತ್ರಿಯೂ ಸಹ ಬಿಟ್ಟು ಬಿಟ್ಟು ಮಳೆ ಬರುವ ಸಾಧ್ಯತೆಯಿದೆಯೆಂದು ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ ಮುನ್ಸೂಚನೆ ನೀಡಿದೆ.
ಕೋಲಾರ ಜಿಲ್ಲೆಯ ಹಲವೆಡೆ ಗುಡುಗು, ಸಿಡಿಲು ಬಿರುಗಾಳಿ ಸಹಿತ ವರ್ಷಧಾರೆಯಾಗುತ್ತಿದೆ. ಕೆಲವು ಕಡೆಗಳಲ್ಲಿ ಬೃಹತ್ ಮರದ ಕೊಂಬೆಗಳು ಧರೆಗುರುಳಿದ್ದು, ವಿದ್ಯುತ್ ಕಂಬಗಳಲ್ಲಿ ಕಿಡಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ವರುಣನ ಆರ್ಭಟಕ್ಕೆ ರಸ್ತೆಗಳಲ್ಲಿ ನೀರು ನಿಂತ ಪರಿಣಾಮ ವಾಹನ ಸವಾರರು ಪರದಾಡುವಂತಾಗಿತ್ತು.
ಕೋಲಾರ ಜಿಲ್ಲೆಯ ಮಾಲೂರು, ಮುಳಬಾಗಿಲು, ಬಂಗಾರಪೇಟೆ ಸೇರಿದಂತೆ ಹಲವೆಡೆ ಭರ್ಜರಿ ಮಳೆಯಾಗಿದ್ದು, ಕಾದು ಕೆಂಡದಂತಾಗಿದ್ದ ಭೂಮಿಗೆ ಮಳೆರಾಯ ತಂಪೆರೆದಿದ್ದಾನೆ. ಮಳೆಯಿಂದ ನಗರದ ರಸ್ತೆಗಳು ಸಣ್ಣ ಸಣ್ಣ ಹೊಂಡಗಳಾಗಿ ನಿರ್ಮಾಣವಾಗಿದ್ದು, ಮುಂಗಾರು ಮಳೆ ಆಗಮನದಿಂದ ರೈತನ ಮೊಗದಲ್ಲಿ ಮಂದಹಾಸ ಮೂಡಿದೆ. ಅದೃಷ್ಟವಶಾತ್ ವರುಣನ ಅಬ್ಬರಕ್ಕೆ ಯಾವುದೇ ಪ್ರಾಣ ಹಾನಿ ಸಂಭವಿಸಿಲ್ಲ. ವರುಣನ ಆಗಮನದಿಂದ ಮೇವಿನ ಸಮಸ್ಯೆ ನಿವಾರಣೆಯಾಗಿದೆ. ಆದರೆ ಕೆರೆ ಕಟ್ಟೆಗಳಿಗೆ ನೀರು ಬಾರದ ಹಿನ್ನೆಲೆಯಲ್ಲಿ ಕುಡಿಯುವ ನೀರಿನ ಹಾಹಾಕಾರ ಮುಂದುವರಿದಿದೆ.
ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕಳಸದಲ್ಲಿ ಧಾರಾಕಾರ ಮಳೆಯಾಗಿದೆ. ವರುಣನ ಅಬ್ಬರಕ್ಕೆ ಜನರು ಪರದಾಡುವಂತಾಗಿದೆ.