ಬೆಂಗಳೂರು: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮುಂದಿನ 24 ಗಂಟೆಗಳಲ್ಲಿ ಭಾರೀ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.
ರಾಜ್ಯದ ದಕ್ಷಿಣ ಒಳನಾಡು ಪ್ರದೇಶಗಳಾದ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಭಾರಿ ಮಳೆಯಾಗಲಿದೆ ಎಂದು ಇಲಾಖೆ ಮುನ್ಸೂಚನೆ ನೀಡಿದೆ.
ಜೂನ್ 2ರವರೆಗೆ ಕೂಡ ಅದೇ ಪರಿಸ್ಥಿತಿ ಮುಂದುವರಿಯಲಿದ್ದು, ರಾಜ್ಯದ ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಹಾಸನ, ಕೊಡಗು, ಮೈಸೂರು ಹಾಗೂ ರಾಮನಗರ ಜಿಲ್ಲೆಗಳಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಇಲಾಖೆ ತಿಳಿಸಿದೆ.
ಬೆಂಗಳೂರು, ತುಮಕೂರು, ಕೋಲಾರ ಜಿಲ್ಲೆಯಲ್ಲಿ ಭಾರೀ ಮಳೆಯಾಗಿದೆ. ತುಮಕೂರು, ಗುಬ್ಬಿ ಕೊರಟಗೆರೆ ಸೇರಿದಂತೆ ಹಲವೆಡೆ ವರುಣ ಆರ್ಭಟಿಸಿದ್ದು, ಕೆಲವು ಕಡೆಗಳಲ್ಲಿ ಮರಗಳು ಧರೆಗುರುಳಿವೆ. ಮಳೆಯಿಂದಾಗಿ ರಸ್ತೆಯ ಮೇಲೆ ನೀರು ನಿಂತು ವಾಹನ ಸವಾರರ ಪರದಾಡುವಂತಾಗಿದೆ.
ಕೋಲಾರ ಜಿಲ್ಲೆಯ ಹಲವೆಡೆ ಬಿರುಗಾಳಿ ಸಹಿತ ಆಲಿಕಲ್ಲು ಮಳೆ. ಕೋಲಾರ ನಗರ, ಮುಳಬಾಗಿಲು, ಸೇರಿದಂತೆ ವಿವಿಧೆಡೆ ಗುಡುಗು ಸಹಿತ ಆಲಿಕಲ್ಲು ಮಳೆಯಾಗಿದೆ. ಇದರಿಂದಾಗಿ ಕೆಲವು ಕಡೆಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಳಿಸಲಾಗಿದೆ. ಬಿರುಗಾಳಿಯಿಂದಾಗಿ ಹಲವು ಕಡೆ ಮರಗಳು ನೆಲಕ್ಕೆ ಉರುಳಿವೆ. ಮುಳಬಾಗಲು ನಗರದಲ್ಲಿ ಬೃಹತ್ ಮರ ಬಿದ್ದು ಕಾರ್ ಜಖಂಗೊಂಡಿದೆ. ಆಲಿಕಲ್ಲು ಮಳೆಯಿಂದಾಗಿ ರೈತರು ಬೆಳೆದ ಲಕ್ಷಾಂತರ ರೂಪಾಯಿ ಬೆಲೆಬಾಳುವ ವಿವಿಧ ಬೆಳೆಗಳು ನಾಶವಾಗಿವೆ.
ಈ ಮಧ್ಯೆ ರಾಜ್ಯದ ಬರ ಪರಿಸ್ಥಿತಿ ನಿರ್ವಾಹಣೆಗೆ ಸರ್ಕಾರ ದೇವರ ಮೊರೆ ಹೋಗಲು ನಿರ್ಧರಿಸಿದೆ. ಸಕಾಲದಲ್ಲಿ ಮಳೆ ಆಗಲಿ ಅಂತ ಮುಜರಾಯಿ ಇಲಾಖೆ ವ್ಯಾಪ್ತಿಯ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಪರ್ಜನ್ಯ ಹೋಮ ನಡೆಸಲು ಆದೇಶ ಹೊರಡಿಸಲಾಗಿದೆ. ಜೂನ್ 6ರ ಗುರುವಾರ ಬ್ರಾಹ್ಮಿ ಮೂಹೂರ್ತದಿಂದ ಪರ್ಜನ್ಯ ಹೋಮ, ವಿಶೇಷ ಪೂಜೆ ಹಾಗೂ ಜಪವನ್ನು ಕಡ್ಡಾಯವಾಗಿ ನಡೆಸುವಂತೆ ಆದೇಶ ಹೊರಡಿಸಲಾಗಿದೆ. ಇಡಿ ದಿನದ ಪೂಜೆಯ ವೆಚ್ಚ 10,001 ಕ್ಕಿಂತ ಮೀರದಂತೆ ಪೂಜೆ ಕೈಗೊಳ್ಳುವಂತೆ ಮುಜರಾಯಿ ಇಲಾಖೆ ಆದೇಶದಲ್ಲಿ ತಿಳಿಸಲಾಗಿದೆ.