ಬೆಳಗಾವಿ/ಚಿಕ್ಕೋಡಿ: ಜಿಲ್ಲೆಯಾದ್ಯಂತ ಚಳಿ ಹಾಗೂ ಮುಂಜಾನೆಯ ಮಂಜು ಹೆಚ್ಚಾಗಿದೆ. ಕಳೆದ ಎರಡು ದಿನಗಳಿಂದ ಬೀಳುತ್ತಿರುವ ದಟ್ಟ ಮಂಜು ಬೆಳಗ್ಗೆ 9 ಗಂಟೆಯಾದರೂ ಕೂಡ ಸೂರ್ಯನ ದರ್ಶನವಾಗದ ಮಟ್ಟಿಗೆ ಬೀಳುತ್ತಿದೆ.
ಬೆಳಗ್ಗಿನ ಜಾವಕ್ಕೆ ಶುರುವಾದ ಮಂಜು ಬೆಳಗ್ಗೆ 9.30 ಗಂಟೆಯಾದರೂ ಕೂಡ ಬೀಳುತ್ತಲೇ ಇತ್ತು. ಕುಂದಾನಗರಿ ಜನ ಒಂದು ಕ್ಷಣ ಇದು ಮಂಜೋ, ಮಳೆಯೋ ಎಂದು ಆಶ್ಚರ್ಯಗೊಂಡರು. ಕೆಲ ಜನರು ಈ ಮಂಜಿನ ವಾತಾವರಣದ ಖುಷಿಪಟ್ಟರೆ, ವಾಹನ ಸವಾರರು ಮುಂದಿನ ದೃಶ್ಯ ಕಾಣದೇ ಪೇಚಿಗೆ ಸಿಲುಕಿದರು.
ಶಾಲಾ-ಕಾಲೇಜು, ನೌಕರಿ ಬೇರೆಡೆ ಹೋಗುವ ಜನ ಸ್ವೇಟರ್, ಟೋಪಿ ಧರಿಸಿಕೊಂಡೆ ಮನೆಯಿಂದ ಹೊರ ಬರುತ್ತಿದ್ದರು. ಬೆಳಗಾವಿಯ ನಗರ ಪ್ರದೇಶ, ರಾಷ್ಟ್ರೀಯ ಹೆದ್ದಾರಿ, ಗ್ರಾಮೀಣ ಪ್ರದೇಶದಲ್ಲೂ ಮಂಜು ಆವರಿಸುತ್ತಿದೆ. ಇದು ಪ್ರಕೃತಿ ಪ್ರಿಯರಿಗೆ ರಸದೌತಣ ನೀಡಿದಂತಾಗುತ್ತಿದೆ.
ನಗರದಲ್ಲಿ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಯಾವುದೇ ದಿಕ್ಕಿಗೂ ಕಣ್ಣು ಹಾಯಿಸಿದರೂ ಮಂಜು ಮುಸುಕಿದ ವಾತಾವರಣ ಕಂಡು ಬರುತ್ತಿದೆ. ವಾಯು ವಿಹಾರಕ್ಕೆ ಹೊರಟ ಜನರಿಗೆ ಪಕ್ಕದ ಮನೆ, ರಸ್ತೆಯಲ್ಲಿ ಹೋಗುವ ಜನರು, ಎಲ್ಲವೂ ಅಸ್ಪಷ್ಟವಾಗಿ, ಅಸದೃಶ್ಯವಾಗಿ ಕಾಣುತ್ತಿದ್ದಾರೆ. ಜನರು ತಮ್ಮ ಮೊಬೈಲ್ ಕ್ಯಾಮೆರಾದಲ್ಲಿ ಅಪರೂಪದ ದೃಶ್ಯಗಳನ್ನು ಸೆರೆ ಹಿಡಿಯುತ್ತಿದ್ದಾರೆ.