– ಆಸ್ಪತ್ರೆ ಸೇರುತ್ತಿದ್ದಾರೆ ಜನ
– ಬಜೆಟಿನಲ್ಲಿ ಶುದ್ಧೀಕರಣ ಘೋಷಣೆ, ಕೆಲ್ಸ ಮಾತ್ರ ಆಗಿಲ್ಲ
ರಾಮನಗರ: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಮಳೆಯಾದರೆ ಬೆಳ್ಳಂದೂರು ಕೆರೆಯ ನೊರೆಯದ್ದೇ ಗೋಳು. ಇತ್ತ ಬಿಡದಿ ಬೈರಮಂಗಲ ಕೆರೆಯದ್ದು ಸಹ ನೊರೆಯದ್ದೆ ವ್ಯಥೆಯಾಗಿದೆ. ಹತ್ತಾರು ಹಳ್ಳಿಗಳ ಜೀವನಾಡಿಯಾಗಿದ್ದ ಕೆರೆ ಇದೀಗ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗಿರುವುದರಿಂದ ಈಗ ನೊರೆಯ ಹಾವಳಿ ಹೆಚ್ಚಾಗಿದೆ.
Advertisement
Advertisement
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಭರ್ಜರಿ ಮಳೆಯಾದ ಪರಿಣಾಮ ಬೈರಮಂಗಲ ಕೆರೆಯಲ್ಲಿ ಇದೀಗ ನೊರೆಯ ಆರ್ಭಟ ಜೋರಾಗಿದೆ. ರಸ್ತೆ ಪಕ್ಕದಲ್ಲಿ ನೊರೆಗಳು ಹಾರುತ್ತಿದ್ದು, ರೈತರ ಜಮೀನುಗಳಲ್ಲಿನ ಬೆಳೆ ನಾಶವಾಗುತ್ತಿದೆ. ಬೈರಮಂಗಲ ಕೆರೆ ಕಳೆದ ಹತ್ತು ವರ್ಷಗಳಿಂದ ಕಲುಷಿತಗೊಂಡು ಬಳಕೆಗೆ ಇರಲಿ ಮುಟ್ಟುವುದಕ್ಕೂ ಸಹ ಹಿಂಜರಿಯುವಂತಾಗಿದೆ. ಬಿಡದಿ ಕೈಗಾರಿಕಾ ಪ್ರದೇಶದ ರಾಸಾಯನಿಕ ನೀರು ಹಾಗೂ ಬೆಂಗಳೂರಿನ ಕೊಳಚೆ ನೀರು ಕೆರೆ ಸೇರುತ್ತಿರುವುದರಿಂದ ಸುತ್ತಮುತ್ತಲ ಪರಿಸರವೆಲ್ಲ ಈಗಾಗಲೇ ಗಬ್ಬೆದ್ದು ಹೋಗಿದೆ.
Advertisement
ಈ ನೊರೆ ಇದೀಗ ಮನುಷ್ಯರ ಮೇಲೂ ಸಹ ಹಾರುತ್ತಿದ್ದು, ಕೆಮಿಕಲ್‍ನಿಂದ ಕೂಡಿರುವ ನೊರೆಗೆ ಇದೀಗ ಮನುಷ್ಯರು ಸಹ ಆಸ್ಪತ್ರೆ ಹಿಡಿಯುವಂತಾಗಿದೆ. ಕಳೆದ 6 ವರ್ಷಗಳಿಂದ ಕೆರೆ ಶುದ್ಧೀಕರಣ ಮಾಡಲಾಗುತ್ತದೆ ಎಂದು ಸರ್ಕಾರ ಹೇಳುತ್ತಿದೆ. ಆದರೆ ಇನ್ನೂ ಆ ಕಾರ್ಯ ಮಾಡುತ್ತಿಲ್ಲ. ಇನ್ನಾದರೂ ಈ ನಿಟ್ಟಿನಲ್ಲಿ ಪ್ರಯತ್ನ ನಡೆಸಲಿ ಎಂದು ಸ್ಥಳೀಯ ರಾಮಣ್ಣ ಹೇಳಿದ್ದಾರೆ.
Advertisement
ಅಂದಹಾಗೇ ಬೈರಮಂಗಲ ಕೆರೆ ಕಳೆದ 10 ವರ್ಷಗಳ ಹಿಂದೆ ಹತ್ತಾರು ಗ್ರಾಮಗಳ ಜೀವನಾಡಿಯಾಗಿತ್ತು. ಆದರೆ ಬಿಡದಿ ಕೈಗಾರಿಕಾ ಪ್ರದೇಶವಾದ ಬಳಿಕ ಕೆರೆಯೆಲ್ಲ ಕೆಮಿಕಲ್ ತ್ಯಾಜ್ಯದಿಂದ ಗಬ್ಬೆದ್ದು ಹೋಗಿದೆ. ಕಳೆದ ಕಾಂಗ್ರೆಸ್ ಸರ್ಕಾರ ಹಾಗೂ ಈಗಿನ ಸಮ್ಮಿಶ್ರ ಸರ್ಕಾರ ಕೆರೆಯ ಶುದ್ಧೀಕರಣಕ್ಕೆ ಬಜೆಟ್‍ನಲ್ಲಿ ಘೋಷಣೆ ಮಾಡಿವೆ. ಆದರೆ ಅದು ಕೇವಲ ಕಾಗದದ ಮೇಲಿನ ಘೋಷಣೆಯಾಗಿಯೇ ಉಳಿದುಕೊಂಡಿದೆ. ಒಂದೆರಡು ಬಾರಿ ಕೇಂದ್ರದಿಂದಲೂ ಕೂಡ ಕೆರೆ ಶುದ್ಧೀಕರಣಕ್ಕೆ ಅಧಿಕಾರಿಗಳ ತಂಡ ಭೇಟಿ ನೀಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಬೆಂಗಳೂರಿನಲ್ಲಿ ಮಳೆಯಾದರೆ ಸಾಕು ನಮಗೆ ಇಲ್ಲಿ ಓಡಾಡುವುದೇ ಕಷ್ಟವಾಗಿದೆ ಎಂದು ವೆಂಕಟೇಶ್‍ರೆಟ್ಟಿ ತಿಳಿಸಿದ್ದಾರೆ.