Connect with us

Chikkamagaluru

6 ತಿಂಗ್ಳಲ್ಲಿ ಕರಾವಳಿ ಪೊಲೀಸರಿಗೆ ಸಾಲು ಸಾಲು ಸವಾಲು – ಓವರ್ ಟೈಮ್ ದುಡಿಮೆಗೆ ಬಳಲಿ ಬೆಂಡಾದ ಆರಕ್ಷಕರು

Published

on

ಮಂಗಳೂರು: ಪೊಲೀಸರ ಕೆಲಸ ಏನಿದ್ದರೂ ಫುಲ್ ಟೈಮ್ ಕೆಲಸ. ಭದ್ರತೆಗೆ ನಿಯೋಜಿಸಲ್ಪಟ್ಟರೆ ಅನ್ನ, ನೀರು ಬಿಟ್ಟಾದ್ರೂ ಡ್ಯೂಟಿ ಮಾಡಲೇಬೇಕು. ಕರಾವಳಿ ಜಿಲ್ಲೆಗಳ ಪೊಲೀಸರಿಗಂತೂ ಕಳೆದ ಆರು ತಿಂಗಳ ಅವಧಿ ಅನ್ನೋದು ಜೀವಮಾನದಲ್ಲಿಯೇ ಅತೀ ಹೆಚ್ಚು ದುಡಿಸಿಕೊಂಡ ಟೈಮಿಂಗ್. ಹೀಗಾಗಿ ಘಟ್ಟಕ್ಕಾದ್ರೂ ಹೋಗ್ತೀನಿ, ಕರಾವಳಿ ಪರಿಸ್ಥಿತಿ ಬೇಡಪ್ಪಾ ಅನ್ನೋ ಸ್ಥಿತಿ ಕೆಲವರದ್ದು.

ಹೌದು. ಕಳೆದ ಆರು ತಿಂಗಳ ಕರಾವಳಿಯ ಪರಿಸ್ಥಿತಿಯನ್ನು ಅವಲೋಕಿಸಿದ್ರೆ ದೊಡ್ಡ ಎಫೆಕ್ಟ್ ಕಂಡಿದ್ದು ಪೊಲೀಸರು. ದಕ್ಷಿಣ ಕನ್ನಡದ ಕೋಮು ವೈಷಮ್ಯ ಮತ್ತು ವಿಐಪಿಗಳ ಭದ್ರತೆಯ ಸಲುವಾಗಿ ಹೆಚ್ಚುವರಿ ಕೆಲಸಕ್ಕೆ ನಿಯೋಜಿಸಲ್ಪಟ್ಟ ಆಸುಪಾಸಿನ ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಗಳ ಪೊಲೀಸರು ಹೈರಾಣಾಗಿ ಹೋಗಿದ್ದಾರೆ. ಕೆಲವೊಮ್ಮೆ ದಿನದಲ್ಲಿ 18 ಗಂಟೆ ಕಾಲ ದುಡಿದಿದ್ದು, ಇವರನ್ನು ಕೆಲಸದ ಬಗ್ಗೆ ರೇಜಿಗೆ ಹುಟ್ಟಿಸುವಂತೆ ಮಾಡಿದೆ.

55 ದಿನಗಳ ಪರ್ಯಂತ ಹೇರಿದ್ರು ಸೆಕ್ಷನ್: ಯಾರು ಏನಂದ್ರೂ ದಕ್ಷಿಣ ಕನ್ನಡ ಜಿಲ್ಲೆಯ ಮಟ್ಟಿಗೆ ದಾಖಲೆಯೆಂಬಂತೆ ಅತಿ ಹೆಚ್ಚು ದಿನಗಳ ಕಾಲ 144 ಸೆಕ್ಷನ್ ವಿಧಿಸಲಾಗಿತ್ತು. ಬಂಟ್ವಾಳದಲ್ಲಿ ಸಣ್ಣ ಕೋಮು ಹಿಂಸೆಯ ಕಾರಣಕ್ಕೆ ಹೊತ್ತಿಕೊಂಡಿದ್ದ ಬೆಂಕಿ ಆರಿಸಲೆಂದು ಜಿಲ್ಲಾಡಳಿತ ನಿರಂತರ ಸೆಕ್ಷನ್ ಹೇರಿತ್ತು. ಜೂನ್ ತಿಂಗಳ ಆರಂಭದಲ್ಲಿ ಮೊದಲ್ಗೊಂಡಿದ್ದ ಈ ಸೆಕ್ಷನ್ ಕೊನೆಗೊಂಡಿದ್ದು ಅಕ್ಟೋಬರ್ ಮೊದಲ ವಾರದಲ್ಲಿ. ಅಂದ್ರೆ ಭರ್ತಿ 55 ದಿನಗಳ ಕಾಲ ಸೆಕ್ಷನ್ ಕಾರಣದಿಂದ ಒಂದೂವರೆ ಸಾವಿರಕ್ಕೂ ಹೆಚ್ಚು ಪೊಲೀಸರನ್ನು ಜಿಲ್ಲೆಯ ಆಯಕಟ್ಟಿನ ಜಾಗದಲ್ಲಿ ನಿಯೋಜಿಸಲಾಗಿತ್ತು. ಆಸುಪಾಸಿನ ಜಿಲ್ಲೆಗಳ ಠಾಣೆಗಳ ಪೇದೆಗಳು ಸರಿಸುಮಾರು ಎರಡು ತಿಂಗಳ ಮಟ್ಟಿಗೆ ಬಂಟ್ವಾಳ, ಬೆಳ್ತಂಗಡಿ, ಮಂಗಳೂರಿನ ಹಲವೆಡೆ ಠಿಕಾಣಿ ಹೂಡಿದ್ದರು. ಕೆಲವೊಮ್ಮೆ ಊಟ, ನಿದ್ದೆಗೆಟ್ಟು ದಿನದ 18 ಗಂಟೆ ಕಾಲ ದುಡಿದಿದ್ದೂ ಇದೆ. ಇದರಿಂದಾಗಿ ರೋಸಿ ಹೋಗಿದ್ದ ಪೊಲೀಸರ ಪಾಡು ಯಾರಿಗೂ ಬೇಡ ಎನ್ನುವಂತಾಗಿತ್ತು ಆವತ್ತಿನ ಪರಿಸ್ಥಿತಿ.

 

RSS ಕಾರ್ಯಕರ್ತ ಶರತ್ ಕೊಲೆ: ಹೀಗಿದ್ದರೂ ಈ ಸೆಕ್ಷನ್ ಮಧ್ಯೆಯೂ ಮುಸ್ಲಿಂ ಮತ್ತು ಹಿಂದು ಕಾರ್ಯಕರ್ತರಿಬ್ಬರ ಕೊಲೆಯಾಗಿತ್ತು. ಜುಲೈ 7ರಂದು ನಡೆದಿದ್ದ ಆರ್‍ಎಸ್‍ಎಸ್ ಕಾರ್ಯಕರ್ತ ಶರತ್ ಸಾವಿನ ವಿಚಾರವಂತೂ ಇಡೀ ದಕ್ಷಿಣ ಕನ್ನಡದ ಪೊಲೀಸ್ ವ್ಯವಸ್ಥೆಯನ್ನೇ ಪ್ರಶ್ನೆ ಮಾಡುವಷ್ಟರ ಮಟ್ಟಿಗೆ ಬೆಳೆದಿತ್ತು. ಒಂದು ತಿಂಗಳು ಕಳೆದರೂ ಆರೋಪಿಗಳು ಸಿಗದೇ ಇದ್ದುದು ಪೊಲೀಸರನ್ನು ದಿಕ್ಕೆಡುವಂತೆ ಮಾಡಿತ್ತು. ಈ ವಿಚಾರ ಕೆಳ ಹಂತದ ಪೊಲೀಸರಿಗೆ ಮಾತ್ರ ಏಟು ಕೊಟ್ಟಿದ್ದಲ್ಲ. ಕೋಮು ಗಲಭೆಯ ಸಂದರ್ಭದಲ್ಲಿ ವಿವಿಧ ಶ್ರೇಣಿಯ ಪೊಲೀಸ್ ಅಧಿಕಾರಿಗಳು ಸೇರಿದಂತೆ ಹತ್ತಕ್ಕೂ ಹೆಚ್ಚು ಎಸ್‍ಪಿ ದರ್ಜೆಯ ಅಧಿಕಾರಿಗಳು ಮಂಗಳೂರು, ಬಂಟ್ವಾಳದಲ್ಲಿ ಬೀಡು ಬಿಟ್ಟಿದ್ದಲ್ಲದೆ ತಲೆ ಚಚ್ಚಿಕೊಂಡು ಹೋಗಿದ್ದರು. ಇದೇ ಕಾರಣಕ್ಕೆ ಐಜಿಪಿ ಹರಿಶೇಖರನ್ ಮತ್ತು ಎಸ್‍ಪಿ ಭೂಷಣರಾವ್ ಬೋರಸೆಯ ತಲೆದಂಡವನ್ನೂ ಪಡೆಯುವಂತಾಗಿತ್ತು.

ಮೋದಿ ಧರ್ಮಸ್ಥಳಕ್ಕೆ, ಭದ್ರತೆಗೆ ಪರದಾಡಿದ್ರು ಆರಕ್ಷಕರು: ಇನ್ನೇನು ಕೋಮು ವೈಷಮ್ಯದ ಪರಿಸ್ಥಿತಿ ಮುಗೀತು ಅನ್ನುವಷ್ಟರಲ್ಲಿಯೇ ಅಕ್ಟೋಬರ್ 29ರಂದು ಪುಣ್ಯಕ್ಷೇತ್ರ ಧರ್ಮಸ್ಥಳಕ್ಕೆ ಪ್ರಧಾನಿ ನರೇಂದ್ರ ಮೋದಿ ಆಗಮಿಸಿದ್ದು ಐದು ಜಿಲ್ಲೆಗಳ ಪೊಲೀಸರನ್ನು ಮತ್ತೆ ಒಂದೆಡೆ ಸೇರುವಂತೆ ಮಾಡಿತ್ತು. ಭದ್ರತೆ ಇನ್ನಿತರ ಕಾರಣಕ್ಕೆಂದು ಆಸುಪಾಸಿನ ಜಿಲ್ಲೆಗಳ ಒಂದು ಸಾವಿರ ಪೊಲೀಸರು ಮತ್ತೆ ಬೆಳ್ತಂಗಡಿ, ಬಂಟ್ವಾಳದಾದ್ಯಂತ ಭದ್ರತೆಯ ವ್ಯವಸ್ಥೆ ಕೈಗೊಂಡಿದ್ದರು. ಈ ನಡುವೆ ಬಿಜೆಪಿಯ ಮಂಗಳೂರು ಚಲೋ, ಪರಿವರ್ತನಾ ಸಮಾವೇಶದ ಸಂದರ್ಭದಲ್ಲಿಯೂ ಮತ್ತೆ ಉರು ಹೊಡೆದಿದ್ದು ಅದೇ ಪೊಲೀಸರು.

ಉಡುಪಿಯಲ್ಲಿ ಧರ್ಮ ಸಂಸದ್: ನ.24, 25, 26ರಂದು ಉಡುಪಿಯಲ್ಲಿ ಧರ್ಮ ಸಂಸದ್ ನಡೆದಿದ್ದಾಗಲೂ ಪೊಲೀಸರು ಬೀದಿಯಲ್ಲಿ ಧೂಳು ತಿನ್ನುವಂತಾಗಿತ್ತು. ಮೂರು ದಿನಗಳ ಕಾರ್ಯಕ್ರಮದಲ್ಲಿ ರಾಷ್ಟ್ರ ಮಟ್ಟದ ವಿಐಪಿಗಳು ಭಾಗವಹಿಸಿದ್ದರಿಂದ ಎರಡು ಸಾವಿರದಷ್ಟು ಪೊಲೀಸರು ಅಲ್ಲಲ್ಲಿ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟಿದ್ದರು. ಇನ್ನೊಂದೆಡೆ ಎಎನ್‍ಎಫ್ ಪಡೆಯೂ ತಮ್ಮ ಕಾರ್ಯವನ್ನು ಚುರುಕುಗೊಳಿಸಿತ್ತು. ಹೀಗಾಗಿ ಧರ್ಮ ಸಂಸದ್ ಹೆಸರಲ್ಲಿಯೂ ಹೆಚ್ಚು ಬಳಲಿದ್ದು ಅದೇ ಆಸುಪಾಸಿನ ನಾಲ್ಕು ಜಿಲ್ಲೆಗಳ ಪೊಲೀಸರು.

6 ತಿಂಗ್ಳಲ್ಲಿ ಹೊರಭಾಗದಲ್ಲಿದ್ದುದೇ ಹೆಚ್ಚಂತೆ ಉ.ಕ ಪೊಲೀಸರು: ಇದು ಕೇಳೋಕೆ ಕಹಿಯಾದ್ರೂ ಸತ್ಯ ವಿಚಾರ. ಠಾಣೆಗಳಲ್ಲಿ ಕರ್ತವ್ಯ ದಲ್ಲಿ ಇರಬೇಕಾದ ಉತ್ತರ ಕನ್ನಡ ಜಿಲ್ಲೆಯ ಅಷ್ಟೂ ಠಾಣೆಗಳ ಪೊಲೀಸರು ಕಳೆದ ಆರು ತಿಂಗಳಲ್ಲಂತೂ ಹೆಚ್ಚಾಗಿ ಕರ್ತವ್ಯಕ್ಕೆ ಹಾಜರಾಗಿದ್ದು ಹೊರ ಜಿಲ್ಲೆಗಳಲ್ಲಂತೆ. ಬಂಟ್ವಾಳ, ಬೆಳ್ತಂಗಡಿ, ಉಡುಪಿ ಅಂತಾ ಮೂಲೆ ಮೂಲೆಗಳಲ್ಲಿ ಭದ್ರತೆಗೆ ನಿಯೋಜಿಸಲ್ಪಟ್ಟಿದ್ದರು ಉತ್ತರ ಕನ್ನಡದ ಪೊಲೀಸರು. ಸಾಮಾನ್ಯವಾಗಿ ಕಾರವಾರ ಭಾಗದಲ್ಲಿ ಅಂಥ ಪರಿಸ್ಥಿತಿ ಇಲ್ಲದೇ ಇದ್ದರೂ ಅಲ್ಲಿನ ಆರಕ್ಷಕರು ಮಾತ್ರ ರಜೆ ರಹಿತ ಡ್ಯೂಟಿ ಮಾಡಿದ ಕೀರ್ತಿಗೆ ಪಾತ್ರರಾಗಿದ್ದಾರೆ.

ಮತ್ತೆ ದತ್ತ ಪೀಠಕ್ಕಾಗಿ ಅದೇ ಆರಕ್ಷಕರು: ಇಷ್ಟೆಲ್ಲ ರಾದ್ಧಾಂತ, ಗಲಭೆಯ ಕಾರಣಕ್ಕೆ ಬಳಲಿ ಹೋಗಿದ್ದ ಪೊಲೀಸ್ ವ್ಯವಸ್ಥೆ ಈಗ ವರ್ಷಾಂತ್ಯದ ವೇಳೆಗೆ ಚಿಕ್ಕಮಗಳೂರಿನ ದತ್ತ ಪೀಠದ ಕಾರ್ಯದಲ್ಲಿ ವ್ಯಸ್ತರಾಗಿದ್ದಾರೆ. ಬಜರಂಗದಳ, ಶ್ರೀರಾಮಸೇನೆ ಮತ್ತೊಂದೆಡೆ ಮುಸ್ಲಿಂ ಸಂಘಟನೆಗಳ ಬೆದರಿಕೆಯ ನಡುವೆ ಶಾಂತಿ ಸುವ್ಯವಸ್ಥೆಯ ಕೆಲಸದಲ್ಲಿ ಕೈಜೋಡಿಸಿದ್ದಾರೆ. ಇದೇನಿದ್ದರೂ ಈ ಐದು ಜಿಲ್ಲೆಗಳ ಪೊಲೀಸರ ಸ್ಥಿತಿಯಂತೂ ಕತ್ತೆ ಪಾಡು ಅನ್ನುವಂತಾಗಿದ್ದು ಸುಳ್ಳಲ್ಲ. ಇದೇ ಕಾರಣಕ್ಕೆ ಕೆಲವು ಸೀನಿಯರ್ ಪೊಲೀಸರಿಗೇ ಅನಿಸ್ತಿದೆಯಂತೆ ಈ ರಜೆ ರಹಿತ ಫುಲ್ ಟೈಮ್ ಕೆಲಸ ಇದ್ದರೆಷ್ಟು ಬಿಟ್ಟರೆಷ್ಟು.

ಹಾಗಂತ, ಈ ಬಗ್ಗೆ ನಮ್ಮ ರಾಜ್ಯದ ಗೃಹ ಇಲಾಖೆಗೆ ಚಿಂತೆ ಇದೆಯಾ ಅಂದ್ರೆ ಇಲ್ಲ ಅನ್ನುವ ಉತ್ತರವೇ ಸಿಗುತ್ತಿದೆ. ಹಾಗಾದ್ರೆ ಸರ್ಕಾರಿ ಕೆಲಸ ದೇವರ ಕೆಲಸ ಆಗೋದಾದ್ರೂ ಹೇಗೆ? ಕಳೆದ ವರ್ಷ ವಾರದ ರಜೆಗಾಗಿ ಪ್ರತಿಭಟನೆ ನಡೆಸಿದ್ದ ಪೊಲೀಸರು ಇನ್ನೆಂಥ ಅಸ್ತ್ರ ಹಿಡ್ಕೊಂಡು ಬರಬೇಕು ಅನ್ನೋ ಪ್ರಶ್ನೆಗೆ ಗೃಹ ಸಚಿವರೇ ಉತ್ತರಿಸಬೇಕು.

Click to comment

Leave a Reply

Your email address will not be published. Required fields are marked *